ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕಿರುವಷ್ಟು ಮಹತ್ವ ಇನ್ಯಾವುದಕ್ಕೂ ಇಲ್ಲ ಎಂದರೆ ತಪ್ಪಾಗಲಾರದು. ಯಾರಿಂದಲೂ ಕದಿಯಲಾಗದ ಏಕೈಕ ವಸ್ತು ಅಂದರೆ ಅದು ನಮ್ಮ ಶಿಕ್ಷಣ (Education) ಮತ್ತು ಸಂಸ್ಕಾರ ಎಂದು ಬಲ್ಲವರು ಹೇಳುತ್ತಾರೆ. ಶಿಕ್ಷಣವು ಜಗತ್ತನ್ನು ಬದಲಾಯಿಸುವ ಪ್ರಮುಖ ಅಸ್ತ್ರವಾಗಿದೆ. ಶಿಕ್ಷಣವು ವ್ಯಕ್ತಿಯ ಯಶಸ್ಸಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಶಿಕ್ಷಣವನ್ನು ಪಡೆದುಕೊಳ್ಳುವುದರಿಂದ ನಮ್ಮಲ್ಲಿರುವ ಅಜ್ಞಾನವನ್ನು ಹೋಗಲಾಡಿಸಿ ನಮ್ಮ ವ್ಯಕ್ತಿತ್ವ ವಿಕಸನವನ್ನು ಮಾಡುತ್ತದೆ. ಆದರೆ ನಮ್ಮ ಜಗತ್ತಿನಲ್ಲೇ ಅತ್ಯುತ್ತಮ ಶಿಕ್ಷಣ ಯಾವ ದೇಶದಲ್ಲಿದೆ ಎಂದು ನಿಮಗೆ ತಿಳಿದಿದೆಯಾ? ವಿಶ್ವದ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯನ್ನು ಹೊಂದಿರುವ ದೇಶ ಎಂದರೆ ಅದು ದಕ್ಷಿಣ ಕೊರಿಯಾ. ಹಾಗಿದ್ರೆ ಅಲ್ಲಿನ ಶಿಕ್ಷಣ ಹೇಗಿದೆ? ಅಲ್ಲಿನ ಶಿಕ್ಷಣದಲ್ಲಿರುವ ವಿಶೇಷತೆಗಳೇನು? ಅಲ್ಲಿಯ ಶಿಕ್ಷಣ ಕಷ್ಟವೋ ಸುಲಭವೋ ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಒದಗಿಸುವ ಸಣ್ಣ ಪ್ರಯತ್ನ ಇಲ್ಲಿದೆ.
ದಕ್ಷಿಣ ಕೊರಿಯಾದ (South Korea) ಶಿಕ್ಷಣ ವ್ಯವಸ್ಥೆಯನ್ನು ಪ್ರಪಂಚದಲ್ಲೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ದೇಶ ಎಂದು ಪರಿಗಣಿಸಲಾಗುತ್ತದೆ. ಇಲ್ಲಿನ ಶಿಕ್ಷಣ ತುಂಬಾ ಕಷ್ಟಕರವಾಗಿದ್ದು, 3 ಭಾಗಗಳಾಗಿ ವಿಂಗಡಿಸಲಾಗಿದೆ. ಅವೆಂದರೆ 6 ವರ್ಷಗಳ ಪ್ರಾಥಮಿಕ ಶಾಲೆ, 3 ವರ್ಷಗಳ ಮಧ್ಯಮ ಶಾಲೆ ಮತ್ತು ನಂತರ 3 ವರ್ಷಗಳ ಪ್ರೌಢಶಾಲೆ. ಬಳಿಕ 4 ವರ್ಷಗಳ ಯೂನಿವರ್ಸಿಟಿ ಶಿಕ್ಷಣವನ್ನು ಪಡೆಯಬಹುದಾಗಿದೆ. ಕೊರಿಯಾದಲ್ಲಿ ಸಹಶಿಕ್ಷಣ ತುಂಬಾ ಅಪರೂಪವಾಗಿದ್ದು, ಇಲ್ಲಿನ ಪ್ರೌಢಶಾಲೆಗಳಲ್ಲಿ ಕೇವಲ 10% ಮಾತ್ರ ಸಹಶಿಕ್ಷಣವನ್ನು ನೀಡಲಾಗುತ್ತದೆ. ಪ್ರೌಢ ಶಾಲಾ ಶಿಕ್ಷಣ ಕೇವಲ ಹುಡುಗರನ್ನು ಮಾತ್ರ ಒಳಗೊಂಡಿರುತ್ತದೆ. ಇಲ್ಲವೇ ಹುಡುಗಿಯರನ್ನು ಒಳಗೊಂಡಿರುತ್ತದೆ. ಹುಡುಗ ಅಥವಾ ಹುಡುಗಿ ಇಬ್ಬರೂ ಒಂದೇ ಶಾಲೆಯಲ್ಲಿ ಒಟ್ಟಿಗೆ ಶಿಕ್ಷಣವನ್ನು ಪಡೆಯುವುದಿಲ್ಲ. ಶಾಲೆಗಳು ಬೇರೆ ಬೇರೆಯಾಗಿದ್ದರೂ ಅವರು ಕಲಿಯುವ ವಿಷಯಗಳು ಒಂದೇ ಆಗಿರುತ್ತವೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?
Advertisement
Advertisement
ಈ ದೇಶದಲ್ಲಿ ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಶಾಲೆಯಲ್ಲಿಯೇ ಕಳೆಯುತ್ತಾರೆ. ಅಂದರೆ ದಿನಕ್ಕೆ 12ರಿಂದ 16 ಗಂಟೆಗಳ ಕಾಲ ಮಕ್ಕಳು ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಅಲ್ಲದೇ ಇಲ್ಲಿನ ಶಿಕ್ಷಕರು ಮಕ್ಕಳಿಗೆ ಅತ್ಯತ್ತಮ ಶಿಕ್ಷಣವನ್ನು ನೀಡುವುದಲ್ಲದೇ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಗಳಿಸುವತ್ತ ಗಮನಹರಿಸುತ್ತಾರೆ. ಆದರೆ ಈ ರೀತಿಯಾದ ಶಿಕ್ಷಣ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ. ಇದರಿಂದ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುವುದಲ್ಲದೇ ಅವರ ಮಾನಸಿಕ ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಹಾನಿಗೊಳಿಸುತ್ತದೆ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದು ವರದಿಗಳು ತಿಳಿಸುತ್ತವೆ.
Advertisement
ದಕ್ಷಿಣ ಕೊರಿಯಾದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು 15 ಗಂಟೆಗಳ ಕಾಲ ಶಾಲೆಯಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ಇದರ ಹೊರತಾಗಿ ಅವರು ಮಾಡುವ ಪಠ್ಯೇತರ ಚಟುವಟಿಕೆಗಳು ಕೂಡ ಅಧ್ಯಯನಕ್ಕೆ ಸಂಬಂಧಿಸಿದ್ದೇ ಆಗಿರುತ್ತವೆ. ಒಂದು ವರ್ಷದಲ್ಲಿ ಎರಡು ಸೆಮಿಸ್ಟರ್‌ಗಳಿರುತ್ತವೆ. ಮೊದಲನೆಯ ಸೆಮಿಸ್ಟರ್ ಮಾರ್ಚ್ನಿಂದ ಜುಲೈವರೆಗೆ ನಡೆದರೆ ಮತ್ತೊಂದು ಸೆಮಿಸ್ಟರ್ ಸೆಪ್ಟೆಂಬರ್‌ನಿಂದ ಫೆಬ್ರವರಿಯವರೆಗೆ ನಡೆಯುತ್ತದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯು ಮಕ್ಕಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಕೊರಿಯ ಸರ್ಕಾರದೊಂದಿಗೆ ಸತತ ಪ್ರಯತ್ನಗಳನ್ನು ಮಾಡುತ್ತಿದೆ. ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಶಾಲೆಗಳನ್ನು ನಡೆಸಲು ಇಂತಿಷ್ಟು ಸಮಯವನ್ನು ನೀಡಲಾಗಿದೆ. ಇದನ್ನು ಹ್ಯಾಗ್ವಾನ್ ಅಥವಾ ಕ್ರ್ಯಾಮ್ ಶಾಲೆಗಳು ಎಂದು ಕರೆಯಲಾಗುತ್ತದೆ.
Advertisement
ಕೊರಿಯಾದಲ್ಲಿ ಶಿಕ್ಷಕರ ಹುದ್ದೆಗೆ ಉನ್ನತ ಸ್ಥಾನ ಹಾಗೂ ಅತ್ಯಂತ ಗೌರವವಿದೆ. ಇಲ್ಲಿನ ಶಿಕ್ಷಕರು ಉತ್ತಮ ಶಿಕ್ಷಣವನ್ನು ಹೊಂದಿರುತ್ತಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ಕೊರಿಯಾದಲ್ಲಿ ಕೆಲವೇ ಕೆಲವು ಸಂಸ್ಥೆಗಳಿವೆ. ಅಲ್ಲದೇ ಮಧ್ಯಮ ಹಂತದ ಶಿಕ್ಷಕರಿಗಾಗಿ ಹಲವಾರು ತರಬೇತಿ ಸಂಸ್ಥೆಗಳು ಹಾಗೂ ಕಾರ್ಯಕ್ರಮಗಳಿವೆ. ದಕ್ಷಿಣ ಕೊರಿಯಾದಲ್ಲಿ ಪ್ರಾಥಮಿಕ ಮತ್ತು ಮಧ್ಯಮ ಶಾಲೆಗಳು ಉಚಿತವಾಗಿರುತ್ತವೆ. ಆದರೆ ಪ್ರೌಢಶಾಲೆ ಶಿಕ್ಷಣವು ಉಚಿತವಾಗಿರುವುದಿಲ್ಲ. ಆದರೆ ಪ್ರೌಢಶಾಲೆಗೆ ಹಾಜರಾಗಲೇಬೇಕು ಎಂಬ ಯಾವುದೇ ನಿಯಮವಿಲ್ಲ. ಇದನ್ನೂ ಓದಿ: PublicTV Explainer: ಇಂಡೋ-ಪಾಕ್ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..
ಪ್ರಾಥಮಿಕ ಶಾಲಾ ಹಂತ:
ಪ್ರಾಥಮಿಕ ಶಾಲಾ ಶಿಕ್ಷಣವು ಸಂಪೂರ್ಣ ಉಚಿತವಾಗಿದ್ದು, ಇದು ಮಕ್ಕಳ 6ನೇ ವರ್ಷದಿಂದ ಪ್ರಾರಂಭವಾಗುತ್ತದೆ. ಪ್ರಾಥಮಿಕ ಶಾಲೆಗೆ ಹಾಜರಾಗುವ ಮೊದಲು ಪ್ರತಿಯೊಂದು ಮಗುವು ಕೆಲವು ಪ್ರೀಸ್ಕೂಲ್ ಮತ್ತು ಶಿಶುವಿಹಾರಕ್ಕೆ ಹಾಜರಾಗುತ್ತದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕೊರಿಯನ್ ಭಾಷೆ, ಗಣಿತ, ನೀತಿ ಶಾಸ್ತ್ರ, ಸಾಮಾಜಿಕ ಅಧ್ಯಯನಗಳು, ಇಂಗ್ಲಿಷ್, ವಿಜ್ಞಾನ, ಕಲೆ, ಸಂಗೀತ ಮತ್ತು ದೈಹಿಕ ಶಿಕ್ಷಣದ ವಿಷಯಗಳನ್ನು ಕಲಿಯುತ್ತಾರೆ.
ಮಧ್ಯಮ ಶಾಲೆ:
ದಕ್ಷಿಣ ಕೊರಿಯಾದ ಮಧ್ಯಮ ಶಾಲೆಗಳಲ್ಲಿ ಒಟ್ಟು 12 ವಿಷಯಗಳಿರುತ್ತವೆ. ಅದರಲ್ಲಿ ಕೆಲವು ವಿಷಯಗಳು ಕಡ್ಡಾಯವಾಗಿದ್ದು, ಇನ್ನೂ ಕೆಲವು ವಿಷಯಗಳಲ್ಲಿ ಆಯ್ಕೆಗಳಿರುತ್ತವೆ. ಈ ವಿಷಯಗಳು ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳು ಕೂಡಾ ಈ ಹಂತದಲ್ಲಿರುತ್ತವೆ. ಮಧ್ಯಮ ಶಾಲಾ ಶಿಕ್ಷಕರು ವಿಷಯಗಳಲ್ಲಿ ಪರಿಣಿತರಾಗಿರುತ್ತಾರೆ. ಈ ಹಂತದಲ್ಲಿ ಕಲಿಯುವ ಹಲವು ವಿಷಯಗಳನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಸಲಾಗುತ್ತದೆ. ಅದರ ಹೆಚ್ಚುವರಿ ವಿಷಯಗಳನ್ನು ಈ ಹಂತದಲ್ಲಿ ಕಲಿಸಲಾಗುತ್ತದೆ.
ಪ್ರೌಢಶಾಲಾ ಹಂತ:
ಕೊರಿಯನ್ ಪ್ರೌಢಶಾಲಾ ಹಂತದಲ್ಲಿ ಒಟ್ಟು 9 ವಿಷಯಗಳಿರುತ್ತವೆ. ಅವುಗಳೆಂದರೆ ಕೊರಿಯನ್ ಭಾಷೆ, ಸಾಮಾಜಿಕ ಅಧ್ಯಾಯನಗಳು, ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ, ಲಲಿತ ಕಲೆ, ಪ್ರಾಯೋಗಿಕ ಕಲೆಗಳು ಹಾಗೂ ನೈತಿಕ ಶಿಕ್ಷಣ.
ವಿಶ್ವವಿದ್ಯಾಲಯ ಶಿಕ್ಷಣ:
ಪ್ರವೇಶ ಪರೀಕ್ಷೆಗಳಿಂದ ಪಡೆದ ಅಂಕಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತವೆ. ಯೂನಿವರ್ಸಿಟಿಗೆ ಅಧಿಕೃತವಾಗಿ ಪ್ರವೇಶಾತಿ ಪಡೆಯಲು ಸುನೆಂಗ್ ಎಂಬ ಪರೀಕ್ಷೆಯನ್ನು ಪೂರ್ಣಗೊಳಿಸಿರಬೇಕು. ಈ ಪರೀಕ್ಷೆಯು 8 ಗಂಟೆಗಳ ಕಾಲ ನಡೆಯುತ್ತದೆ. ಅಲ್ಲದೇ ಮೂರು ವಿಶ್ವವಿದ್ಯಾಲಯಗಳಿಗೆ ಅಪ್ಲಿಕೇಶನ್ ಹಾಕಬಹುದಾಗಿದೆ. ಈ ಪರೀಕ್ಷೆಯು ನವೆಂಬರ್‌ನಲ್ಲಿ ನಡೆಯುವುದಲ್ಲದೇ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
ಪರೀಕ್ಷೆಯ ಸಂದರ್ಭದಲ್ಲಿ ಒಟ್ಟು 9 ವಿಷಯಗಳನ್ನು ಪರೀಕ್ಷಿಸಲಾಗುತ್ತದೆ. ಇದರಲ್ಲಿ ಕೆಲವು ಆಯ್ಕೆಗಳಿದ್ದು, ಕೊರಿಯನ್ ಭಾಷೆ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಈ ಪರೀಕ್ಷೆಯು ವಿಶ್ವವಿದ್ಯಾನಿಲಯ ಶಿಕ್ಷಣದ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. ಬ್ಯಾಚುಲರ್ ಪದವಿ ಒಟ್ಟು ನಾಲ್ಕು ವರ್ಷಗಳ ಶಿಕ್ಷಣವನ್ನು ಒಳಗೊಂಡಿರುತ್ತದೆ. ಎರಡು ವರ್ಷಗಳ ಸ್ನಾತಕೋತ್ತರ ಪದವಿ ಮತ್ತು ಎರಡು ವರ್ಷಗಳ ಡಾಕ್ಟರೇಟ್ ಪದವಿಯನ್ನು ಪಡೆದುಕೊಳ್ಳಬಹುದು.
ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ಸುಮಾರು 400ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು, ಜೂನಿಯರ್ ಕಾಲೇಜುಗಳು ಮತ್ತು ಇನ್ನಿತರ ಉನ್ನತ ಶಿಕ್ಷಣ ಸಂಸ್ಥೆಗಳಿವೆ. ಇದರಲ್ಲಿ ಬಹುಪಾಲು ಸಂಸ್ಥೆಗಳು ರಾಜಧಾನಿಯಲ್ಲಿವೆ. ವಿಶ್ವವಿದ್ಯಾನಿಲಯಗಳಲ್ಲಿ ಬೋಧನಾ ಶುಲ್ಕವು ವರ್ಷಕ್ಕೆ ಸರಿಸುಮಾರು 8,500 ಡಾಲರ್ ಇರುತ್ತವೆ. ಕೆಲವು ವಿಶ್ವವಿದ್ಯಾನಿಲಯಗಳಲ್ಲಿ ಇದಕ್ಕಿಂತ ಹೆಚ್ಚೂ ಇರಬಹುದು, ಕಡಿಮೆಯೂ ಇರಬಹುದು. ಇದು ಆಯಾಯ ವಿಶ್ವವಿದ್ಯಾಲಯದ ಮೇಲೆ ಅವಲಂಬಿತವಾಗಿರುತ್ತದೆ. ಇಷ್ಟು ಮಾತ್ರವಲ್ಲದೇ ದಕ್ಷಿಣ ಕೊರಿಯಾ ಮತ್ತು ವಿದೇಶಿ ವಿದ್ಯಾರ್ಥಿಗಳಿಗೆ ನಾನಾರೀತಿಯ ವಿದ್ಯಾರ್ಥಿವೇತನವನ್ನೂ ಒದಗಿಸಲಾಗುತ್ತದೆ.
ದಕ್ಷಿಣ ಕೊರಿಯಾದಲ್ಲಿ 40ಕ್ಕೂ ಹೆಚ್ಚು ಅಂತರಾಷ್ಟ್ರೀಯ ಶಾಲೆಗಳಿವೆ. ಈ ಶಾಲೆಗಳಲ್ಲಿ ಎಲ್ಲರೂ ಕಲಿಯಲು ಸಾಧ್ಯವಿಲ್ಲ. ಈ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಬೇಕಾದರೆ ಒಬ್ಬ ಕೊರಿಯನ್ ವಿದ್ಯಾರ್ಥಿ ಕನಿಷ್ಟ ಮೂರು ವರ್ಷ ವಿದೇಶದಲ್ಲಿರಬೇಕು ಅಥವಾ ಆ ವಿದ್ಯಾರ್ಥಿ ವಿದೇಶಿ ಪ್ರಜೆಯ ಮಗುವಾಗಿರಬೇಕು. ಹಾಗಿದ್ದರೆ ಮಾತ್ರ ಈ ಶಾಲೆಗಳಲ್ಲಿ ಶಿಕ್ಷಣವನ್ನು ಪಡೆಯಲು ಸಾಧ್ಯ.
ಈ ರೀತಿಯಾದ ಕಠಿಣ ಶಿಕ್ಷಣ ಕೊಡುವುದರಿಂದ ಮಕ್ಕಳ ಭವಿಷ್ಯ ಉಜ್ವಲವಾಗಿರುವುದಲ್ಲದೇ ಅವರ ಮುಂದಿನ ಜೀವನವನ್ನು ಆರಾಮವಾಗಿ ಕಳೆಯಬಹುದು ಎಂಬುದು ಅವರ ನಂಬಿಕೆ. ಆದರೆ ಮಕ್ಕಳಿಗೆ ಈ ರೀತಿಯಾದ ಒತ್ತಡವನ್ನು ಹೇರುವುದರಿಂದ ಮಕ್ಕಳು ಮನನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ವರದಿಗಳು ಹೇಳಿವೆ. ಇದನ್ನೂ ಓದಿ: PublicTV Explainer: ನಿತ್ಯಾನಂದನ ಕೈಲಾಸದಲ್ಲಿರಲು ಈ ರೂಲ್ಸ್ ಫಾಲೋ ಮಾಡ್ಲೇಬೇಕಂತೆ
Web Stories