ನವದೆಹಲಿ: ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ನಜೀಂ ಝೈದಿ 15ನೇ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದರು.
ಯಾವ ದಿನ ಏನು?
ಜೂನ್ 14: ರಾಷ್ಟ್ರಪತಿ ಚುನಾವಣೆಗಾಗಿ ಅಧಿಸೂಚನೆ
ಜೂನ್ 28: ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನ
ಜೂನ್ 29: ನಾಮಪತ್ರಗಳ ಪರಿಶೀಲನೆ
ಜುಲೈ 1: ನಾಮಪತ್ರ ವಾಪಸ್ ಪಡೆಯಲು ಅವಕಾಶ
ಜುಲೈ 17: ರಾಷ್ಟ್ರಪತಿ ಹುದ್ದೆಗೆ ಮತದಾನ
ಜುಲೈ 20: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ
ಜುಲೈ 24: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರವಧಿ ಅಂತ್ಯ
ಜುಲೈ 25: 15ನೇ ರಾಷ್ಟ್ರಪತಿಯ ಅಧಿಕಾರಾವಧಿ ಆರಂಭ
Advertisement
ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ..?
ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಕೆ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ.
Advertisement
ಲೋಕಸಭೆ, ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗಳು ಆವೃತ ಪದ್ಧತಿಯಡಿ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ಬಾರಿ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಮತಪತ್ರ ಮೂಲಕ ಮತದಾನ ನಡೆಯಲಿದೆ.
Advertisement
ಮತ ಲೆಕ್ಕಾಚಾರ ಹೇಗೆ?
ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ.
Advertisement
ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?
1971ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 2,92,99,014.
ಕರ್ನಾಟಕದ ಶಾಸಕರ ಮತಮೌಲ್ಯ = 131
ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344
ಬೇರೆ ರಾಜ್ಯದಲ್ಲಿ ಎಷ್ಟು?
ಉತ್ತರ ಪ್ರದೇಶದ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 8 ಆಗಿದೆ.
ಸಂಸದರ ಮತ ಮೌಲ್ಯ ಎಷ್ಟು?
ಎಲ್ಲಾ ರಾಜ್ಯಗಳ ಶಾಸಕರ ಮತಮೌಲ್ಯವನ್ನು ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಸಂಸದರ ಮತ ಮೌಲ್ಯ ಸಿಗುತ್ತದೆ.
ಸಂಸದರ ಮತ ಮೌಲ್ಯ : 5,49,474/776 = 708
ಅಭ್ಯರ್ಥಿ ಅಧಿಕೃತವಾಗಿಲ್ಲ:
ಅತೀ ದೊಡ್ಡ ಕೂಟವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಇನ್ನೂ ಕೂಡಾ ತನ್ನ ಅಭ್ಯರ್ಥಿಯನ್ನು ಅಧಿಕೃತಗೊಳಿಸಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಎನ್‍ಡಿಎಯೇತರ ಪಕ್ಷಗಳ ಸಭೆ ನಡೆದಿದ್ದರೂ ಅಭ್ಯರ್ಥಿ ಅಂತಿಮವಾಗಿಲ್ಲ. ಒಂದು ವೇಳೆ ಸಹಮತದ ಅಭ್ಯರ್ಥಿಯನ್ನು ಘೋಷಿಸಿದರೆ ಎನ್‍ಡಿಎ ಬೆಂಬಲಿಸಲು ಸಿದ್ಧ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೇಳಿವೆಯಾದರೂ ಇದುವರೆಗೆ ಅದರ ಸೂಚನೆ ಕಂಡುಬಂದಿಲ್ಲ. ಆದರೆ ಎನ್‍ಡಿಎ ಅಭ್ಯರ್ಥಿಗೆ ಕೇವಲ 20 ಸಾವಿರ ಮತಗಳ ಕೊರತೆಯಷ್ಟೇ ಕಾಡುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳಿಗೆ ವಿಪ್ ನೀಡುವಂತಿಲ್ಲ.
ಬಲಾಬಲ ಹೇಗಿದೆ?
ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತಗಳ ಒಟ್ಟು ಮೌಲ್ಯ: 10,98,882
ರಾಷ್ಟ್ರಪತಿಗಳ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ : 5,49,442
ಎನ್‍ಡಿಎ ಒಕ್ಕೂಟದ ಮತ ಮೌಲ್ಯ: 5,27,371 ಅಂದರೆ ಶೇಕಡಾ 48.10
2,37,888 (ಲೋಕಸಭೆ)+ 49,560 (ರಾಜ್ಯಸಭೆ) + 2,39,923 (ವಿಧಾನಸಭೆ)
ಯುಪಿಎ ಒಕ್ಕೂಟದ ಮತ ಮೌಲ್ಯ: 1,73,849 ಅಂದರೆ ಶೇಕಡಾ 15.90
34,692 (ಲೋಕಸಭೆ) + 46,020 (ರಾಜ್ಯಸಭೆ) + 93,137 (ವಿಧಾನಸಭೆ)
ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳ ಮತ ಮೌಲ್ಯ : 2,60,392 ಅಂದರೆ ಶೇಕಡಾ 23.80
60,180 (ಲೋಕಸಭೆ)+ 47,436(ರಾಜ್ಯಸಭೆ)+ 1,52,776(ವಿಧಾನಸಭೆ)
ಇತರೆ ವಿರೋಧ ಪಕ್ಷಗಳ ಮತ ಮೌಲ್ಯ: 1,33,907 ಅಂದರೆ ಶೇಕಡಾ 12.80
50,268 (ಲೋಕಸಭೆ)+ 20,532 (ರಾಜ್ಯಸಭೆ)+ 63,107(ವಿಧಾನಸಭೆ)