ಬಣ್ಣಗಳ ಹಬ್ಬ ಹೋಳಿ (Holi) ಅಂದರೆ ಸಾಕು ಎಲ್ಲಿಲ್ಲದ ಸಡಗರ, ಸಂಭ್ರಮ. ಒಬ್ಬರ ಮೇಲೊಬ್ಬರು ಬಣ್ಣಗಳನ್ನು ಎರಚಿ ಈ ಹಬ್ಬವನ್ನು ಸಂಭ್ರಮಿಸುತ್ತಾರೆ. ಬಣ್ಣಗಳೊಂದಿಗೆ ಸಂಬಂಧಗಳನ್ನು ಬೆಸೆಯುವ ಹಬ್ಬ ಇದಾಗಿದೆ. ಹೋಳಿ ಹಬ್ಬವನ್ನು ಹಿಂದೂ ತಿಂಗಳ ಫಾಲ್ಗುಣದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಹೋಳಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುವುದು ಮಾತ್ರವಲ್ಲದೇ ವಿಶಿಷ್ಠವಾಗಿ ಆಚರಿಸಲಾಗುತ್ತದೆ. ಹೋಳಿ ಕೇವಲ ಹಬ್ಬ ಮಾತ್ರವಲ್ಲದೇ ವಸಂತ ಮಾಸದ ಆಗಮನವನ್ನೂ ಸೂಚಿಸುತ್ತದೆ.
ಪುರಾಣದ ಕಥೆ ಏನು?
ದಕ್ಷಿಣ ಭಾರತದಲ್ಲಿ ವಿಭಿನ್ನ ಆಚರಣೆಯ ಮೂಲಕ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಅದಕ್ಕೆ ಸಂಬಂಧಿಸಿದಂತೆ ಕಾಮದೇವನ ಕಥೆಯು ಬೆಸೆದುಕೊಂಡಿದೆ. ಶಿವನ ಮೂರನೇ ಕಣ್ಣಿನಿಂದ ಬಂದ ಬೆಂಕಿಯಿಂದ ಕಾಮದೇವ ಆಹುತಿಯಾದನು. ಜಗತ್ತನ್ನು ಉಳಿಸಲು ಶಿವನ ಕಣ್ಣಿನ ಬೆಂಕಿಗೆ ತಾನೇ ಆಹುತಿಯಾಗುವುದರ ಮೂಲಕ ಕಾಮದೇವ ತ್ಯಾಗ ಮಾಡಿದ ಎಂದು ಹೇಳಲಾಗುತ್ತದೆ. ಈ ಸನ್ನಿವೇಶದ ಹಿನ್ನೆಲೆ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ದಕ್ಷಿಣ ಭಾರತದಲ್ಲಿ ಕಾಮ ದೇವನ ಪ್ರತಿರೂಪವನ್ನು ಸುಡುವ ಆಚರಣೆಯ ಮೂಲಕ ಹೋಳಿ ಆಚರಣೆ ಮಾಡುತ್ತಾರೆ.
Advertisement
Advertisement
ಹೋಳಿ ಹಬ್ಬದ ಹಿಂದೆ ಅನೇಕ ಕಥೆ ಹಾಗೂ ಉಪಕಥೆಗಳು ಬೆಸೆದುಕೊಂಡಿವೆ. ಅದರಲ್ಲಿ ಪ್ರಹ್ಲಾದನ ಕಥೆಯೂ ಸೇರಿಕೊಂಡಿದೆ. ಪ್ರಹ್ಲಾದ ಹುಟ್ಟಿನಿಂದಲೇ ಮಹಾನ್ ವಿಷ್ಣುವಿನ ಭಕ್ತನಾಗಿದ್ದ. ನಿತ್ಯವೂ ವಿಷ್ಣು ದೇವರ ಆರಾಧನೆ ಹಾಗೂ ಪೂಜೆ ಮಾಡುವುದರ ಮೂಲಕವೇ ಜ್ಞಾನವನ್ನು ಪಡೆದುಕೊಳ್ಳುತ್ತಿದ್ದ. ಆದರೆ ಅವನ ತಂದೆ ಹಿರಣ್ಯ ಕಶಿಪು ಬಹಳ ಅಹಂಕಾರಿ ಮತ್ತು ಕ್ರೂರ ರಾಜನಾಗಿದ್ದ. ಅವನು ತಾನೇ ದೈವಶಕ್ತಿಗಿಂತ ಶ್ರೇಷ್ಠ, ತನ್ನನ್ನೇ ಎಲ್ಲರೂ ಆರಾಧಿಸಬೇಕು ಎಂದು ತನ್ನ ಪ್ರಜೆಗೆ ಆದೇಶ ಹೊರಡಿಸಿದ್ದ. ಆದರೆ ಅವನ ಮಗ ಪ್ರಹ್ಲಾದ ಮಾತ್ರ ತಂದೆಯನ್ನು ಆರಾಧಿಸದೆ ವಿಷ್ಣು ದೇವರ ಆರಾಧನೆಯನ್ನು ಮಾಡುತ್ತಿದ್ದ. ಅದನ್ನು ಸಹಿಸದ ಹಿರಣ್ಯ ಕಶಿಪು ಮಗನಿಗೆ ಸರಿಯಾಗಿ ಪಾಠ ಕಲಿಸಬೇಕು, ಅವನ ಚಿಂತನೆಗಳನ್ನು ಬದಲಿಸಬೇಕು ಎಂದು ಬಯಸಿದ. ಅದರಂತೆಯೇ ಸಾಕಷ್ಟು ಕ್ರಮದಲ್ಲಿ ಅವನಿಗೆ ವಿಷ್ಣು ಆರಾಧನೆ ಮಾಡದಂತೆ ಹೇಳಿದನು. ಆದರೆ ವಿಷ್ಣುವಿನ ಪರಮ ಭಕ್ತನಾದ ಪ್ರಹ್ಲಾದ ವಿಷ್ಣುವಿನ ಆರಾಧನೆಯನ್ನು ಬಿಟ್ಟರೆ ಬೇರಾವ ವ್ಯಕ್ತಿಯ ಆರಾಧನೆಯನ್ನು ಮಾಡೆನು ಎಂದು ಹೇಳಿದನು.
Advertisement
ಪುಟ್ಟ ಹುಡುಗನಾದ ಈ ಪ್ರಹ್ಲಾದನಿಗೆ ಇನ್ಯಾವ ಬಗೆಯಲ್ಲೂ ಬುದ್ಧಿ ಹೇಳಲು ಸಾಧ್ಯವಿಲ್ಲ. ಏನಿದ್ದರೂ ಅವನನ್ನು ಸಾಯಿಸುವುದೊಂದೇ ಮಾರ್ಗ ಎಂದುಕೊಂಡ. ಅಂತೆಯೇ ಪ್ರಹ್ಲಾದನನ್ನು ಸಾಯಿಸಲು ಹಿರಣ್ಯ ಕಶಿಪು ಸಾಕಷ್ಟು ವಿಧಾನವನ್ನು ಅನುಸರಿಸಿದ. ಆದರೆ ಯಾವುದೂ ಫಲಕಾರಿಯಾಗಲಿಲ್ಲ. ಅವುಗಳನ್ನು ಕಂಡ ಹಿರಣ್ಯ ಕಶಿಪು ಅತ್ಯಂತ ಕೋಪಗೊಂಡ. ನಂತರ ತನ್ನ ತಂಗಿಯಾದ ಹೋಲಿಕಾಳನ್ನು ಕರೆಸಿದ. ಹೋಲಿಕಾ ತನ್ನ ತೊಡೆಯ ಮೇಲೆ ಯಾರು ಕುಳಿತುಕೊಳ್ಳುತ್ತಾರೋ ಅವರು ಸುಟ್ಟು ಹೋಗಬೇಕು ಎನ್ನುವ ವರವನ್ನು ಪಡೆದುಕೊಂಡಿದ್ದಳು. ಹಾಗಾಗಿ ಪ್ರಹ್ಲಾದನನ್ನು ಅವಳ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳಲು ಹಿರಣ್ಯ ಕಶಿಪು ಹೇಳಿದನು. ಅಣ್ಣನ ಮಾತಿನಂತೆ ಹೋಲಿಕಾ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಳು. ಆ ಸಮಯದಲ್ಲಿ ಪ್ರಹ್ಲಾದನು ಹರಿಯನ್ನು ಧ್ಯಾನಿಸುತ್ತಲೇ ಕುಳಿತನು. ಆ ಸಮಯದಲ್ಲಿ ಹೋಲಿಕಾ ಬೆಂಕಿಯಲ್ಲಿ ಸುಟ್ಟು ಹೋದಳು. ಪ್ರಹ್ಲಾದನು ಬೆಂಕಿಯಿಂದ ಹೊರ ಬಂದನು. ಈ ಹಿನ್ನೆಲೆಯಲ್ಲಿಯೇ ಹೋಳಿಯ ಹಬ್ಬವನ್ನು ಆಚರಿಸಲಾಯಿತು ಎಂದು ಹೇಳಲಾಗುವುದು.
Advertisement
ಹೀಗೆ ದೇಶದ ವಿವಿಧೆಡೆ ಹೋಳಿ ಹಬ್ಬಕ್ಕೆ ಸಂಬಂಧಿಸಿದ ಅನೇಕ ಕಥೆಗಳಿವೆ. ಒಂದೊಂದು ರಾಜ್ಯದಲ್ಲಿ ಒಂದೊಂದು ಹೆಸರಿನಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಅವುಗಳಲ್ಲಿ ಪ್ರಮುಖವಾಗಿ ಆಚರಿಸುವ ಕೆಲವು ರಾಜ್ಯಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
ಬಿಹಾರ:
ಬಿಹಾರದಲ್ಲಿ ಜನರು ಹೋಳಿ ಹಬ್ಬಕ್ಕೂ ಒಂದು ವಾರ ಮುಂಚಿತವಾಗಿ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಹೋಳಿ ಹಬ್ಬದ ಮೊದಲ ದಿನದಂದು ಬಣ್ಣದ ಥಾಲಿಗಳು ಮತ್ತು ಬಣ್ಣ ತುಂಬಿದ ಮಡಿಕೆಯನ್ನು ಜೋಡಿಸಲಾಗುತ್ತದೆ. ಬಿಹಾರದ ಹೋಳಿ ಆಚರಣೆಗಳು ಹಲವಾರು ದಿನಗಳವರೆಗೆ ಇರುತ್ತದೆ. ಹೋಳಿ ಆಚರಣೆ ಸಂದರ್ಭದಲ್ಲಿ ಜನರು ‘ಫಾಗುವಾ’ ಎಂಬ ಸಾಂಪ್ರದಾಯಿಕ ಜಾನಪದ ಹಾಡುಗಳನ್ನು ಹಾಡುತ್ತಾರೆ. ‘ಹೋಲಿಕಾ ದಹನ್’ ಹೋಳಿ ಆಚರಣೆಯ ಮಹತ್ವದ ಭಾಗವಾಗಿದೆ.
ಉತ್ತರ ಪ್ರದೇಶ:
ಹೋಳಿ ಹಬ್ಬದ ಸಂದರ್ಭದಲ್ಲಿ ಮಥುರಾ ಮತ್ತು ವೃಂದಾವನದಲ್ಲಿ ನಾನಾರೀತಿಯ ಜಾನಪದ ಹಾಡು ಹಾಗೂ ನೃತ್ಯಗಳನ್ನು ಏರ್ಪಡಿಸಲಾಗುತ್ತದೆ. ಅಲ್ಲದೇ ಹೋಲಿಕಾ ಪ್ರತಿಕೃತಿ ದಹಿಸಲಾಗುತ್ತದೆ. ಹೋಳಿ ಹಬ್ಬದಂದು ಜನರು ಬೆಂಕಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಉತ್ತಮ ಫಸಲುಗಾಗಿ ಪ್ರಾರ್ಥಿಸುತ್ತಾರೆ. ಈ ದಿನವನ್ನು ‘ಪುನೋ’ ಎಂದೂ ಕರೆಯುತ್ತಾರೆ. ಅವರು ಕೃತಜ್ಞತೆಯನ್ನು ಸಲ್ಲಿಸಲು ತೆಂಗಿನಕಾಯಿ ಮತ್ತು ಹೂವುಗಳ ಜೊತೆಗೆ ಸುಗ್ಗಿಯ ಕಾಳು ಮತ್ತು ಕಾಂಡಗಳನ್ನು ಅರ್ಪಿಸುತ್ತಾರೆ. ಬಳಿಕ ಸುಟ್ಟ ತೆಂಗಿನಕಾಯಿಯನ್ನು ಮನೆಗೆ ಪ್ರಸಾದವಾಗಿ ತೆಗೆದುಕೊಂಡು ಹೋಗುತ್ತಾರೆ. ಇಲ್ಲಿನ ಜನರು ಹೋಳಿ ಹಬ್ಬದ ದಿನ ‘ಗುಲಾಲ್’ ಎಂಬ ಮೆರವಣಿಗೆಯಲ್ಲಿ ಪಾಲ್ಗೊಂಡು ಪರಸ್ಪರ ಬಣ್ಣಗಳನ್ನು ಎರಚಿ ಸಂಭ್ರಮಿಸುತ್ತಾರೆ. ಲತ್ಮಾರ್ ಹೋಳಿ ಈ ಹಬ್ಬಕ್ಕೆ ಇರುವ ಇನ್ನೊಂದು ಹೆಸರು.
ಬಂಗಾಳ:
ಬಂಗಾಳದಲ್ಲಿ ಹೋಳಿಯನ್ನು ‘ಡೋಲ್ ಜಾತ್ರೆ’ ಅಥವಾ ‘ಡೋಲ್ ಪೂರ್ಣಿಮಾ’ ಎಂದು ಕರೆಯಲಾಗುತ್ತದೆ. ಹೋಳಿಯಂದು ಇಲ್ಲಿನ ಜನರು ಹಳದಿ ಬಟ್ಟೆಗಳನ್ನು ಧರಿಸಿ ಜಾತ್ರೆಗೆ ಹಾಜರಾಗುತ್ತಾರೆ. ಇದು ಶಾಂತಿಯುತ ಸಮಾರಂಭವಾಗಿದೆ. ಇದನ್ನು ಮಹಾಪ್ರಭು ಚೈತನ್ಯರ ಜನ್ಮದಿನವೆಂದು ಆಚರಿಸಲಾಗುತ್ತದೆ. ಜನರು ಶ್ರೀಕೃಷ್ಣ ಮತ್ತು ರಾಧೆಯ ವಿಗ್ರಹವನ್ನು ಅಲಂಕರಿಸುತ್ತಾರೆ ಮತ್ತು ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಅದನ್ನು ಬೀದಿಗಳಲ್ಲಿ ಮೆರವಣಿಗೆ ಮಾಡುವುದರ ಮೂಲಕ ಹೋಳಿ ಆಚರಿಸುತ್ತಾರೆ.
ಒಡಿಶಾ:
ಒಡಿಶಾದ ಜನರು ಜಗನ್ನಾಥ ದೇವರನ್ನು ಪೂಜಿಸುವ ಮೂಲಕ ಹೋಳಿ ಆಚರಿಸುತ್ತಾರೆ ಮತ್ತು ಈ ದಿನ ಒಡಿಶಾದ ಪುರಿ ದೇವಸ್ಥಾನಕ್ಕೆ ಜನರು ಭೇಟಿ ನೀಡುತ್ತಾರೆ. ಅಲಂಕರಿಸಿದ ಪಲ್ಲಕ್ಕಿಯಲ್ಲಿ ಜಗನ್ನಾಥನ ವಿಗ್ರಹವನ್ನು ಇರಿಸಲಾಗುತ್ತದೆ ಮತ್ತು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಈ ಸಂದರ್ಭ ದಂಡಿ ಖೇಲಾ ಮುಂತಾದ ಆಟಗಳನ್ನು ಆಡುತ್ತಾರೆ. ರಾತ್ರಿಯ ವೇಳೆ ಜಗನ್ನಾಥನ ವಿಗ್ರಹವನ್ನು ಇರಿಸಲು ವಿಶೇಷ ಡೇರೆಗಳು, ಜೂಲನ್ ಮಂಟಪಗಳನ್ನು ಸ್ಥಾಪಿಸುತ್ತಾರೆ.
ಈಶಾನ್ಯ ಭಾರತ:
18ನೇ ಶತಮಾನದಲ್ಲಿ ವೈಷ್ಣವರೊಂದಿಗೆ ಪ್ರಾರಂಭವಾದ ಹೋಳಿಯನ್ನು ಮಣಿಪುರದಲ್ಲಿ ಆರು ದಿನಗಳ ಕಾಲ ಆಚರಿಸಲಾಗುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಇಲ್ಲಿ ʼಯೋಸಾಂಗ್ʼ ಎಂಬ ಮತ್ತೊಂದು ಹಳೆಯ ಹಬ್ಬವನ್ನು ಆಚರಿಸಲಾಗುತ್ತದೆ. ಮಣ್ಣಿನ ಮತ್ತು ಮಣ್ಣಿನ ಹುಲ್ಲಿನ ಗುಡಿಸಲು ಮಾಡಿ ಸಂಜೆ ಸುಡಲಾಗುತ್ತದೆ. ಮಣಿಪುರದಲ್ಲಿ ಹುಡುಗರು ತಮ್ಮೊಂದಿಗೆ ಹೋಳಿ ಆಡಲು ಹುಡುಗಿಯರಿಗೆ ಹಣ ನೀಡಬೇಕು. ದೇವಾಲಯಗಳಲ್ಲಿ ನೃತ್ಯಗಳು, ಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಭಕ್ತರು ಬಿಳಿ ಉಡುಪುಗಳು ಮತ್ತು ಹಳದಿ ಪೇಟಗಳನ್ನು ಧರಿಸಿ ದೇವಸ್ಥಾನದ ಮುಂದೆ ಬಣ್ಣಗಳನ್ನು ಆಡುತ್ತಾರೆ. ಕೊನೆಯ ದಿನ ಇಂಫಾಲದ ಬಳಿಯ ಕೃಷ್ಣ ದೇವಸ್ಥಾನದಲ್ಲಿ ಮೆರವಣಿಗೆ ಇರುತ್ತದೆ.
ವಾಯುವ್ಯ ಭಾರತದ ಇತರ ಬುಡಕಟ್ಟುಗಳು ಈ ವಸಂತ ಹಬ್ಬವನ್ನು ಆಚರಿಸಲು ತಮ್ಮದೇ ಆದ ವಿಧಾನಗಳನ್ನು ಹೊಂದಿವೆ. ಅವರು ಹೋಳಿಯ ಮುನ್ನಾದಿನದಂದು ಬೆಂಕಿಯನ್ನು ಹಚ್ಚುತ್ತಾರೆ ಮತ್ತು ದೇವಿಯನ್ನು ಪೂಜಿಸುತ್ತಾರೆ. ಬುಡಕಟ್ಟು ಜನರು ಹೋಳಿ ಆಚರಣೆ ವೇಳೆ ಕೆಸುಡೋ ಮತ್ತು ಮಾವಿನ ವಸಂತ ಹೂವುಗಳು ಮತ್ತು ಧಾನ್ಯಗಳನ್ನು ಅರ್ಪಿಸುತ್ತಾರೆ.
ಹಿಮಾಚಲ ಪ್ರದೇಶ:
ಹಿಮಾಚಲ ಪ್ರದೇಶದಲ್ಲಿ ಯಮುನಾ ನದಿಯ ದಡದಲ್ಲಿರುವ ಸಿರ್ಮೌರ್ ಜಿಲ್ಲೆಯ ಪಾಂಟಾ-ಸಾಹಿಬ್‌ನಲ್ಲಿ ಸಾವಿರಾರು ಜನರು ಸೇರುತ್ತಾರೆ. ಇಲ್ಲಿನ ಜನರು ಬಣ್ಣಗಳನ್ನು ಆಡುವುದರಲ್ಲಿ ಹೆಚ್ಚು ಉತ್ಸುಕರಾಗಿರುತ್ತಾರೆ. ಕುಲುವಿನಲ್ಲಿ ಆಕರ್ಷಕ ಐಸ್ ಹೋಳಿ ಆಡಲಾಗುತ್ತದೆ. ಜನರು ಬಣ್ಣ ಮತ್ತು ಹಿಮವನ್ನು ಬೆರೆಸುವ ಮೂಲಕ ವರ್ಣರಂಜಿತ ಸ್ನೋಬಾಲ್‌ಗಳನ್ನು ಮಾಡಿ ಒಬ್ಬರಮೇಲೋಬ್ಬರು ಎಸೆಯುತ್ತಾರೆ.
ಪಂಜಾಬ್:
ಹೋಲಾ ಮೊಹಲ್ಲಾ ಪಂಜಾಬ್‌ನ ಸಿಖ್ ಸಮುದಾಯದಲ್ಲಿ ವಾರ್ಷಿಕ ಹಬ್ಬವಾಗಿದೆ. ಇದನ್ನು ಗುರು ಗೋಬಿಂದ್ ಸಿಂಗ್ ಪ್ರಾರಂಭಿಸಿದರು. ಇದು ಪಂಜಾಬ್‌ನ ಅನಂತಪುರ ಸಾಹಿಬ್‌ನಲ್ಲಿ ಹೋಳಿ ಹಬ್ಬದ ಎರಡನೇ ದಿನದಂದು ಪ್ರಾರಂಭವಾಗುತ್ತದೆ. ಇದು ಮೂರು ದಿನಗಳ ಹಬ್ಬವಾಗಿದ್ದು, ಎರಡು ಓಡುವ ಕುದುರೆಗಳ ಮೇಲೆ ನಿಲ್ಲುವುದು, ಬೇರ್‌ಬ್ಯಾಕ್ ಕುದುರೆ ಸವಾರಿ, ಅಣಕು ಕಾದಾಟಗಳು ಮತ್ತು ಟೆಂಟ್ ಪೆಗ್ಗಿಂಗ್ ಅನ್ನು ಇದು ಒಳಗೊಂಡಿದೆ. ಶ್ರೀ ಗುರು ಗ್ರಂಥ ಸಾಹಿಬ್ ಅವರ ಉಪಸ್ಥಿತಿಯಲ್ಲಿ ಕೀರ್ತನೆ ಮತ್ತು ಧಾರ್ಮಿಕ ಉಪನ್ಯಾಸಗಳನ್ನು ಸಹ ದರ್ಬಾರ್‌ಗಳಲ್ಲಿ ಏರ್ಪಡಿಸಲಾಗುತ್ತದೆ. ಕೊನೆಯ ದಿನ ತಖ್ತ್ ಕೇಶ್ಗಢ ಸಾಹಿಬ್‌ನಿಂದ ಪಂಜ್ ಪ್ಯಾರಸ್ ನೇತೃತ್ವದಲ್ಲಿ ಮೆರವಣಿಗೆ ನಡೆಯುತ್ತದೆ.