ಅನಾರೋಗ್ಯದ ಕಾರಣ ಕೊಟ್ಟು ಉಪರಾಷ್ಟ್ರಪತಿ (Vice President) ಸ್ಥಾನಕ್ಕೆ ಜಗದೀಪ್ ಧನಕರ್ (Jagdeep Dhankhar) ರಾಜೀನಾಮೆ ಕೊಟ್ಟಿದ್ದಾರೆ. ಜಗದೀಪ್ ಧನಕರ್ ಅವರ ದಿಢೀರ್ ರಾಜೀನಾಮೆ ಬಳಿಕ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಸಂಸತ್ತಿನ ಮೊದಲ ದಿನದ ಅಧಿವೇಶದ ಮೊದಲ ದಿನದ ಕಲಾಪವನ್ನು ನಡೆಸಿ, ಜಗದೀಪ್ ಧನಕರ್ ರಾಜೀನಾಮೆಯನ್ನು ನೀಡಿದ್ದರು. ಇವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಆಂಗೀಕರಿಸಿದ್ದಾರೆ. ಹಾಗಾಗಿ, ಮುಂದಿನ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಕೇಂದ್ರ ಚುನಾವಣಾ ಆಯೋಗ (Election Commission Of India) ಹೇಳಿದೆ. ಹಾಗಿದ್ರೆ ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ? ಅರ್ಹತೆಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದು ಯಾಕೆ?
ಆರೋಗ್ಯದ ಕಾರಣವನ್ನು ನೀಡಿ 74 ವರ್ಷದ ಜಗದೀಪ್ ಧನಕರ್ ಪದತ್ಯಾಗ ಮಾಡಿದ್ದಾರೆ. ಮೊದಲ ದಿನದ ಕಲಾಪವನ್ನು ಸುಮಾರು 65 ನಿಮಿಷ ನಡೆಸಿಕೊಟ್ಟು, ರಾಜ್ಯಸಭೆಯಲ್ಲಿ ವಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಜನ್ಮದಿನದ ಶುಭವನ್ನು ಕೋರಿ, ಐದು ನೂತನ ಸಂಸದರಿಗೆ ಪ್ರಮಾಣವಚನವನ್ನು ಜಗದೀಪ್ ಧನಕರ್ ಬೋಧಿಸಿದ್ದರು. ಆದರೆ, ಅದೇ ದಿನ ರಾಜೀನಾಮೆಯನ್ನು ನೀಡಿ ಎಲ್ಲರಿಗೂ ಶಾಕ್ ನೀಡಿದ್ದರು.
ಜನತಾ ದಳದ ಅಭ್ಯರ್ಥಿಯಾಗಿ 1991ರಲ್ಲಿ ರಾಜಕೀಯ ಜೀವನ ಆರಂಭಸಿದ ಧನಕರ್ ಆ ಬಳಿಕ ಕಾಂಗ್ರೆಸ್ ಸೇರಿದ್ದರು. ನಂತರ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಬಿಜೆಪಿ ನಾಯಕತ್ವದ ಗಮನ ಸೆಳೆದ ಅವರು 2019ರಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ನೇಮಕಗೊಂಡರು. 2022ರಲ್ಲಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇನ್ನು ಸರಿಸುಮಾರು 2 ವರ್ಷಗಳ ಕಾಲ ಉಪರಾಷ್ಟ್ರಪತಿ ಅವಧಿ ಬಾಕಿ ಇದ್ದರೂ ಧನಕರ್ ಆರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಬರೆದ ರಾಜೀನಾಮೆ ಪತ್ರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಸಲಹೆಗಳಿಂದ ಈ ತಕ್ಷಣದಿಂದ ರಾಜೀನಾಮೆ ನೀಡುವುದಾಗಿ ಉಲ್ಲೇಖಿಸಿದ್ದಾರೆ. ಜಗದೀಪ್ ಧನಕರ್ ಅವರ ಮೂರು ವರ್ಷಗಳ ಅಧಿಕಾರಾವಧಿಯಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳೊಂದಿಗೆ ಆಗಾಗ್ಗೆ ಘರ್ಷಣೆಗಳು ನಡೆದವು. ಹಲವು ಬಾರಿ ಅವರು ಸುದ್ದಿಗೆ ಗ್ರಾಸವಾಗಿದ್ದರು.
ರಾಷ್ಟ್ರಪತಿಯ ಹುದ್ದೆ ತೆರವಾದಾಗ ಅಥವಾ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸಂದರ್ಭದಲ್ಲಿ ಹಂಗಾಮಿ ರಾಷ್ಟ್ರಪತಿಯಾಗಿ ಗರಿಷ್ಠ 6 ತಿಂಗಳ ಕಾಲ
ಉಪರಾಷ್ಟ್ರಪತಿಯು ಕಾರ್ಯನಿರ್ವಹಿಸುತ್ತಾರೆ. ಈ ಮೂಲಕ ಆಡಳಿತ ವ್ಯವಸ್ಥೆ ನಿರಾತಂಕವಾಗಿರುವಂತೆ ಖಾತರಿಪಡಿಸುತ್ತಾರೆ. ಉಪರಾಷ್ಟ್ರಪತಿಯು ರಾಜ್ಯಸಭೆಯ ಸಭಾಪತಿಯಾಗಿ, ಚರ್ಚೆಗಳನ್ನು ಮೇಲ್ವಿಚಾರಣೆ ಮಾಡುವ ಜೊತೆಗೆ ಶಿಷ್ಟಾಚಾರಗಳನ್ನು ಖಾತರಿಪಡಿಸುತ್ತಾರೆ. ರಾಜಕೀಯ ಪಕ್ಷಪಾತವಿಲ್ಲದೆ ಉನ್ನತ ಸದನವನ್ನು ನಿರ್ದೇಶಿಸುವ ಮೂಲಕ, ಸಾಂವಿಧಾನಿಕ ಪ್ರಜಾಪ್ರಭುತ್ವದ ನೈತಿಕತೆಯನ್ನು ಬಲಪಡಿಸುತ್ತಾರೆ.
ಉಪರಾಷ್ಟ್ರಪತಿ ಚುನಾವಣೆ ಯಾವಾಗ?
ಹಾಲಿ ಉಪರಾಷ್ಟ್ರಪತಿ 5 ವರ್ಷ ತಮ್ಮ ಅಧಿಕಾರಾವಧಿ ಪೂರ್ಣ ಗೊಳಿಸಿದಾಗ, ಇಲ್ಲವೇ ರಾಜೀನಾಮೆ ನೀಡಿದಾಗ ಚುನಾವಣೆ ನಡೆಯುತ್ತದೆ. ಜೊತೆಗೆ ಈ ಹುದ್ದೆಯಲ್ಲಿರುವವರು ಮರಣ ಹೊಂದಿದರೆ, ಸಂಸದೀಯ ಪ್ರಕ್ರಿಯೆಯ ಮೂಲಕ ಪದಚ್ಯುತಗೊಂಡರೆ ಇಲ್ಲವೇ ಚುನಾವಣೆ ವೇಳೆ ಅನರ್ಹತೆ ಸಾಬೀತಾದಾಗ ಉಪರಾಷ್ಟ್ರಪತಿ ಚುನಾವಣೆಯನ್ನು ನಡೆಸಲಾಗುತ್ತದೆ.
ಆಯೋಗವು ಅಧಿಸೂಚನೆ ಹೊರಡಿಸಿದ ನಂತರ ನಾಪತ್ರ ಸಲ್ಲಿಕೆ, ಅಧಿಸೂಚನೆ, ಹಿಂಪಡೆಯುವಿಕೆ ಮತದಾನ ಹಾಗೂ ಎಣಿಕೆ ಪ್ರಕ್ರಿಯೆ 30 ದಿನಗಳ ಒಳಗಾಗಿ ಪೂರ್ಣಗೊಳ್ಳಬೇಕು.
ಉಪರಾಷ್ಟ್ರಪತಿ ಆಯ್ಕೆ ಹೇಗೆ ನಡೆಯುತ್ತದೆ?
ಉಪರಾಷ್ಟ್ರಪತಿ ಚುನಾವಣೆಯಲ್ಲಿ, ರಾಜ್ಯಸಭೆಯ 233 ಚುನಾಯಿತ ಸಂಸದರು, ರಾಜ್ಯಸಭೆಯ 12 ನಾಮನಿರ್ದೇಶಿತ ಸಂಸದರು ಮತ್ತು ಲೋಕಸಭೆಯ 543 ಸಂಸದರು ತಮ್ಮ ಮತಗಳನ್ನು ಚಲಾಯಿಸಬಹುದು. ಈ ರೀತಿಯಾಗಿ, ಒಟ್ಟು 788 ಜನರು ಮತ ಚಲಾಯಿಸಬಹುದು.
ಪಕ್ಷಗಳ ವಿಪ್ ಅಗತ್ಯವಿಲ್ಲದೆ ಗೌಪ್ಯ ಮತಪತ್ರದ ಮೂಲಕ ಮತದಾನ ನಡೆಯುತ್ತದೆ. ರಾಷ್ಟ್ರಪತಿ ಚುನಾವಣೆಯಂತೆ ರಾಜ್ಯಗಳ ವಿಧಾನಸಭೆ ಶಾಸಕ ರಿಗೆ ಮತದಾನದ ಅವಕಾಶವಿಲ್ಲ. ಏಕಮತದಾನ ವರ್ಗಾವಣೆ ವಿಧಾನದಲ್ಲಿ ಪ್ರತಿಯೊಬ್ಬ ಮತದಾರ ಅಭ್ಯರ್ಥಿಗಳನ್ನು ಪ್ರಾಶಸ್ಯದ ಕ್ರಮದಲ್ಲಿ ಶ್ರೇಣೀಕರಿಸುತ್ತಾರೆ. ಅವರ ಪ್ರಾಶಸ್ಯವನ್ನು ಸಂಖ್ಯೆಗಳ ರೂಪದಲ್ಲಿ ಗುರುತಿಸುತ್ತಾರೆ. (ಮೊದಲ ಪ್ರಾಶಸ್ಯಕ್ಕೆ 1, 2ನೇ ಪ್ರಾಶಸ್ಯಕ್ಕೆ 2, ಇತ್ಯಾದಿ.) ಮತಪತ್ರವು ಮಾನ್ಯವಾಗಿರಲು ಮೊದಲ ಪ್ರಾಶಸ್ಯವನ್ನು ಗುರುತಿಸುವುದು ಕಡ್ಡಾಯವಾಗಿದೆ. ನಂತರದ ಆದ್ಯತೆಗಳು ಐಚ್ಛಿಕವಾಗಿರುತ್ತವೆ. ಎಣಿಕೆ ವೇಳೆ ಎಲ್ಲ ಅಭ್ಯರ್ಥಿಗಳಿಗೆ ಸಿಗುವ ಮೊದಲ ಪ್ರಾಶಸ್ಯದ ಮತಗಳನ್ನು ಆರಂಭಿಕವಾಗಿ ಎಣಿಕೆ ಮಾಡಲಾಗುತ್ತದೆ. ಮೊದಲ ಪ್ರಾಶಸ್ಯದ ಮತಗಳ ಎಣಿಕೆಯಲ್ಲಿ ಬಹುಮತ ದೊರೆಯದಿದ್ದಲ್ಲಿ 2ನೇ ಪ್ರಾಶಸ್ಯದ ಮತದಾನವನ್ನು ಪರಿಗಣಿಸಲಾಗುತ್ತದೆ. ಹೀಗೆಯೇ ಬಹುಮತ ಬರುವವರೆಗೂ ಮುಂದುವರಿಯುತ್ತದೆ.
ಮುಂದಿನ ಚುನಾವಣೆ ಯಾವಾಗ?
ಸಂವಿಧಾನದ ಪ್ರಕಾರ, ಉಪರಾಷ್ಟ್ರಪತಿ ಹುದ್ದೆ ಖಾಲಿಯಾದ 60 ದಿನಗಳ ಒಳಗೆ ಹೊಸ ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ. ಚುನಾವಣಾ ಆಯೋಗವು ಶೀಘ್ರದಲ್ಲೇ ಉಪ ರಾಷ್ಟ್ರಪತಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸುತ್ತದೆ. ಉಪಾಧ್ಯಕ್ಷರನ್ನು ಲೋಕಸಭೆ ಮತ್ತು ರಾಜ್ಯಸಭಾ ಸಂಸದರನ್ನು ಒಳಗೊಂಡಿರುವ ಚುನಾವಣಾ ಕಾಲೇಜಿನಿಂದ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ, 543 ಲೋಕಸಭಾ ಸಂಸದರು ಮತ್ತು 245 ರಾಜ್ಯಸಭಾ ಸಂಸದರು (ನಾಮನಿರ್ದೇಶಿತ ಸದಸ್ಯರು ಸೇರಿದಂತೆ) ಸೇರಿದಂತೆ ಒಟ್ಟು 788 ಮತದಾರರು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಈ ಚುನಾವಣೆಯನ್ನು ರಹಸ್ಯ ಮತದಾನದ ಮೂಲಕ ನಡೆಸಲಾಗುತ್ತದೆ.
ಲೋಕಸಭೆಯಲ್ಲಿ ಎನ್‌ಡಿಎ ಒಕ್ಕೂಟವೂ 542ರ ಪೈಕಿ 293 ಸದಸ್ಯರ ಬೆಂಬಲ ಹೊಂದಿದ್ದು, ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲ ಹೊಂದಿದೆ. ಆಡಳಿತರೂಢ ಒಕ್ಕೂಟವೂ ಒಟ್ಟು 422 ಸದಸ್ಯರ ಬೆಂಬಲ ಹೊಂದಿದೆ.
ಅರ್ಹತೆಗಳೇನು?
*ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯು ಭಾರತದ ನಾಗರಿಕನಾಗಿರಬೇಕು.
*ಕನಿಷ್ಠ 35 ವರ್ಷ ವಯಸ್ಸಾಗಿರಬೇಕು.
*ರಾಜ್ಯಸಭೆಯ ಸದಸ್ಯನಾಗಿ ಚುನಾಯಿತಗೊಳ್ಳಲು ಅರ್ಹತೆಯನ್ನು ಹೊಂದಿರಬೇಕು.
*ಕೇಂದ್ರ ಅಥವಾ ರಾಜ್ಯ ಸರ್ಕಾರಗಳು, ಸ್ಥಳೀಯ ಪ್ರಾಧಿಕಾರಗಳು ಅಥವಾ ಇತರ ಸಾರ್ವಜನಿಕ ಪ್ರಾಧಿಕಾರಗಳ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿರಬಾರದು.
*1974ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ನಿಯಮಗಳ ಅಡಿಯಲ್ಲಿ, ಅಭ್ಯರ್ಥಿಯ ನಾಮನಿರ್ದೇಶನವನ್ನು ಚುನಾವಣಾ ಕಾಲೇಜಿನಿಂದ ಕನಿಷ್ಠ 20 ಪ್ರಸ್ತಾವಕರು ಮತ್ತು 20 ಸಮರ್ಥಕರು ಬೆಂಬಲಿಸಬೇಕು,
*15,000 ರೂ. ಭದ್ರತಾ ಠೇವಣಿಯನ್ನು ಇಡಬೇಕು.
ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆಯಲ್ಲಿ 293 ಸದಸ್ಯರ ಬೆಂಬಲವನ್ನು ಹೊಂದಿದೆ( 542 ಸದಸ್ಯರು) ರಾಜ್ಯಸಭೆಯಲ್ಲಿ 129 ಸದಸ್ಯರ ಬೆಂಬಲವನ್ನು ಹೊಂದಿದೆ. ಇನ್ನು ನಾಮನಿರ್ದೇಶಿತ ಸದಸ್ಯರುಗಳನ್ನು ಸೇರಿಸಿದರೆ, ಆಡಳಿತ ಒಕ್ಕೂಟವು 786 ಸದಸ್ಯರಲ್ಲಿ 422 ಸದಸ್ಯರ ಬೆಂಬಲವನ್ನು ಹೊಂದಿದೆ.
ಸಂಭಾವ್ಯ ಅಭ್ಯರ್ಥಿ ಯಾರು?
ಜನತಾದಳ-ಸಂಯುಕ್ತ ಸಂಸದರಾಗಿರುವ ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ನೋಡಲಾಗುತ್ತಿದೆ. ಅವರು 2020 ರಿಂದ ಈ ಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದು,ಸರ್ಕಾರದ ವಿಶ್ವಾಸವನ್ನು ಹೊಂದಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೂಡ ಮುಂದಿನ ಉಪ ರಾಷ್ಟ್ರಪತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಹೆಸರು ಕೂಡ ಚಾಲ್ತಿಯಲ್ಲಿದೆ. ಅವರು ಮೋದಿ ಮತ್ತು ಅಮಿತ್ ಶಾ ಅವರ ಸಮೀಪದಲ್ಲಿದ್ದು, ಬಿಜೆಪಿ ಅಧ್ಯಕ್ಷತ್ವ ಅವಧಿ ಮುಕ್ತಾಯವಾಗುತ್ತಿರುವುದರಿಂದ ನಡ್ಡಾ ಅವರಿಗೆ ಈ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪರಾಷ್ಟ್ರಪತಿ ಚುನಾವಣೆ ರೇಸ್‌ನಲ್ಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರಿಗೂ ಈ ಹುದ್ದೆಗೇರುವ ಅವಕಾಶವಿದೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.
ಉಪರಾಷ್ಟ್ರಪತಿ ಹುದ್ದೆಯ ಇತಿಹಾಸ:
1950ರಲ್ಲಿ ಭಾರತದ ಸಂವಿಧಾನವನ್ನು ಅಂಗೀಕರಿಸಿದಾಗ ಉಪರಾಷ್ಟ್ರಪತಿ ಹುದ್ದೆಯನ್ನು ಸೃಜಿಸಲಾಯಿತು. ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರು ಭಾರತದ ಮೊದಲ ಉಪರಾಷ್ಟ್ರಪತಿಯಾಗಿ 1952ರಲ್ಲಿ ಆಯ್ಕೆಯಾದರು. ಒಟ್ಟಾರೆಯಾಗಿ, ಭಾರತವು ಇದುವರೆಗೆ 14 ಉಪರಾಷ್ಟ್ರಪತಿಗಳನ್ನು ಕಂಡಿದೆ.