Cyclone Biparjoy: ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ ಸೈಕ್ಲೋನ್

Public TV
1 Min Read
BIPARJOY CYCLONE

ಗಾಂಧಿನಗರ: ಬಿಪರ್ ಜಾಯ್ ಚಂಡಮಾರುತ (Biparjoy Cyclone) ಗುಜರಾತ್‍ನಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದೆ. ಗುರುವಾರ ಮಧ್ಯರಾತ್ರಿ ನಂತರ ಸೈಕ್ಲೋನ್ ಕಛ್ ಬಳಿ ತೀರವನ್ನು ಪೂರ್ಣಪ್ರಮಾಣದಲ್ಲಿ ದಾಟಿದ್ದು, ಕ್ರಮೇಣ ದುರ್ಬಲಗೊಳ್ತಿದೆ.

ಸದ್ಯ ಚಂಡಮಾರುತ ಈಶಾನ್ಯ ದಿಕ್ಕಿನಲ್ಲಿ ಕರಾಚಿಯತ್ತ ತೆರಳುತ್ತಿದೆ. ಯಾವುದೇ ಕ್ಷಣದಲ್ಲಿ ಇದು ವಾಯುಭಾರ ಕುಸಿತವಾಗಿ ಬದಲಾಗಲಿದೆ. ಬಿಪರ್‌ ಜಾಯ್ ತೀರ ದಾಟುವ ಸಂದರ್ಭದಲ್ಲಿ 140 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದೆ. ಬಿರುಗಾಳಿ ಸಹಿತ ಭಾರೀ ಮಳೆ ದೊಡ್ಡ ಮಟ್ಟದಲ್ಲಿ ಅನಾಹುತ ಸೃಷ್ಟಿಸಿದೆ. ಅನೇಕ ಕಡೆ ಸಾವಿರಾರು ಮರಗಿಡಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. 500ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ ಕಾರ್ಯಕ್ರಮವೊಂದಕ್ಕೆ ಹಾಕಿದ್ದ ಬೃಹತ್ ಟೆಂಟ್ ಧರಾಶಾಯಿಯಾಗಿದೆ.

ಮನೆ ಶೀಟ್‍ಗಳು, ಹೋರ್ಡಿಂಗ್‍ಗಳು ತರಗೆಲೆಯಂತೆ ಹಾರಿವೆ. 1000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ದಿಢೀರ್ ಪ್ರವಾಹ ಸೃಷ್ಟಿಯಾಗಿ ತಗ್ಗು ಪ್ರದೇಶಗಳೆಲ್ಲಾ ಜಲಮಯವಾಗಿವೆ. ಮಾಂಡ್ವಿಯಲ್ಲಿ ಹಲವು ಮನೆ, ಆಸ್ಪತ್ರೆಗಳಿಗೆ ನೀರು ನುಗ್ಗಿದೆ. ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ನಿನ್ನೆಯಿಂದ ನೂರಕ್ಕೂ ಹೆಚ್ಚು ರೈಲು ಬಂದ್ ಆಗಿವೆ. ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾಗ್ತಿದೆ. ಇದನ್ನೂ ಓದಿ: ಟ್ಯೂಷನ್ ಮುಗಿಸಿ ಬರುತ್ತಿದ್ದಾಗ 10ನೇ ಕ್ಲಾಸ್ ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ರು

ಭಾವ್‍ನಗರದ ಪ್ರವಾಹದಲ್ಲಿ ಸಿಲುಕಿದ್ದ ಮೇಕೆಗಳನ್ನು ಕಾಪಾಡಲು ಹೋದ ತಂದೆ ಮಗ ನೀರು ಪಾಲಾಗಿದ್ದಾರೆ. 23 ಮಂದಿ ಗಾಯಗೊಂಡಿದ್ದಾರೆ. 24 ಜಾನುವಾರು ಮೃತಪಟ್ಟಿವೆ. ಗುಜರಾತ್ ಸಿಎಂಗೆ ಕರೆ ಮಾಡಿದ ಪ್ರಧಾನಿ ಎಲ್ಲಾ ಮಾಹಿತಿ ಪಡೆದಿದ್ದಾರೆ. ಗಿರ್ ಅರಣ್ಯದಲ್ಲಿ ಪ್ರಾಣಿಗಳ ಸುರಕ್ಷತೆಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಗತ್ಯ ನೆರವಿನ ಭರವಸೆ ನೀಡಿದ್ದಾರೆ. ಸಂಜೆಯಿಂದ ರಾಜಸ್ಥಾನದಲ್ಲಿ ತೂಫಾನ್ ಪ್ರಭಾವ ಕಾಣಿಸಿಕೊಂಡಿದೆ. ಹಲವು ಜಿಲ್ಲೆಗಳಲ್ಲಿ ಮಳೆ ಆಗ್ತಿದೆ. ಬರ್ಮೇರ್ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಪ್ರಕಟಿಸಲಾಗಿದೆ. ಮುಂಬೈ‌ನಲ್ಲೂ ಮಳೆ (Mumbai Rain) ಆಗ್ತಿದ್ದು, ಸಮುದ್ರ ಪ್ರಕ್ಷುಬ್ಧವಾಗಿಯೇ ಇದೆ.

Share This Article