ಹಾಸನ: ಕರ್ನಾಟಕದಲ್ಲಿ ಕನ್ನಡ ಭಾಷೆಗಾಗಿ ನಟ ಡಾ.ರಾಜ್‍ಕುಮಾರ್ ಹೇಗೆ ಜನರನ್ನು ಒಗ್ಗೂಡಿಸಿ ಶಕ್ತಿಯಾಗಿ ನಿಂತಿದ್ದರೋ, ಹಾಗೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ಶಕ್ತಿಯಾಗಿ ನಿಂತಿದ್ದಾರೆ ಎಂದು ನಟಿ ಹಾಗೂ ಬಿಜೆಪಿ ನಾಯಕಿ ತಾರಾ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ದೇಶದ ಚುನಾವಣೆ, ಮೋದಿ ಅವರ ಮರು ಆಯ್ಕೆಯನ್ನು ಅನೇಕರು ಬಯಸಿದ್ದಾರೆ. ಮೋದಿ ಅಲೆ ಕಡಿಮೆಯಾಗಿದೆ ಎನ್ನುವುದು ಸುಳ್ಳು. 2014ರಲ್ಲಿದ್ದ ಅಲೆಗಿಂತ ಈ ಬಾರಿ ದೇಶದಲ್ಲಿ ಮೋದಿ ಪರ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಡಾ.ರಾಜ್ ಹೆಸರು ಹೇಗೆ ಶಕ್ತಿಯೋ, ಹಾಗೆ ದೇಶದಲ್ಲಿ ಮೋದಿ ಅವರು ಒಂದು ಶಕ್ತಿ. ಮೋದಿ ಹೆಸರಲ್ಲೇ ಮೋಡಿ ಇದೆ. ಹೀಗಾಗಿ ನಾವು ಮೋದಿ ಹೆಸರನ್ನು ಎಲ್ಲೆಡೆ ಚಲಾವಣೆ ಮಾಡುತ್ತಿದ್ದೇವೆ. ಮೋದಿ ಅವರು ಪ್ರಧಾನಿಯಾದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಬಹಳಷ್ಟು ಮುಂದೆ ಬಂದಿದೆ. ಜಗತ್ತಿನಲ್ಲಿರುವ ಪ್ರಭಾವಿ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ಅವರೇ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಪ್ರಧಾನಿಯ ನಾಮ ಬಲ ಗುಣಗಾನ ಮಾಡಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಗೆ 5 ವರ್ಷ ಸಾಲದು, ಮತ್ತೈದು ವರ್ಷ ಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದರು. ಬಳಿಕ ಅನಂತ್‍ಕುಮಾರ್ ಪತ್ನಿ ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಕೈ ತಪ್ಪಿರುವುದಕ್ಕೆ ನಾನು ಪ್ರತಿಕ್ರಿಯಿಸಲ್ಲ ಅಂತ ಹೇಳಿದರು. ಹಾಗೆಯೇ ರಾಜ್ಯದಲ್ಲಿ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವುದು ನನಗೂ ಖುಷಿ ವಿಷಯ ಎಂದು ಅಭಿಪ್ರಾಯ ತಿಳಿಸಿದರು.
ಸದ್ಯ ನಾನು ಅರಕಲಗೂಡು, ಹಳೇ ಮೈಸೂರಲ್ಲಿ ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಪ್ರಚಾರ ಮಾಡಲಿದ್ದೇನೆ. ಹಾಸನದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲಿದೆ. ನಮ್ಮ ವರಿಷ್ಠರು ಸೂಚನೆ ಕೊಟ್ಟರೆ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುವೆ. ಸುಮಲತಾ, ನಿಖಿಲ್ ಇಬ್ಬರೂ ಸಿನಿಮಾ ಕ್ಷೇತ್ರದವರೇ ಆಗಿದ್ದಾರೆ. ಆದರೆ ನನ್ನ ಪಕ್ಷ ಯಾರ ಪರ ಪ್ರಚಾರ ಮಾಡಿ ಎಂದು ಸೂಚನೆ ನೀಡುತ್ತದೋ ಹಾಗೆ ಮಾಡುತ್ತೇನೆ ಎಂದು ಹೇಳಿದರು.