ಭಾರತದ (India) ಮೊದಲ ಮಾನವಸಹಿತ ಗಗನಯಾನ ಬಾಹ್ಯಾಕಾಶ ಯೋಜನೆಯನ್ನು 2027ರ ಮೊದಲ ತ್ರೈಮಾಸಿಕದಲ್ಲಿ ಕಾರ್ಯಗತಗೊಳಿಸಲು ಇಸ್ರೋ ನಿರ್ಧರಿಸಿದೆ. 2018ರಲ್ಲಿ ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಗಗನಯಾನ ಯೋಜನೆ (Gaganyaan Mission) ಘೋಷಿಸಿದ್ದರು. ಈ ಯೋಜನೆ ಅನುಷ್ಠಾನಕ್ಕೆ 2022ರ ಗುರಿ ನಿಗದಿ ಮಾಡಿದ್ದರೂ ಕಾರಣಾಂತರಗಳಿಂದ ಈಗ ಮುಂದೂಡಲ್ಪಟ್ಟಿದೆ.
ಈ ಯೋಜನೆಯಲ್ಲಿ ಗಗನಯಾನಿಗಳ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇದೇ ಕಾರಣಕ್ಕೆ ಕ್ರೂ ಎಸ್ಕೇಪ್ ಸಿಸ್ಟಮ್ (CES) ಅಳವಡಿಸಿಕೊಳ್ಳಲಾಗಿದೆ. ಕ್ರೂ ಎಸ್ಕೇಪ್ ಸಿಸ್ಟಮ್ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ. ಇದರಿಂದ ಅಪಾಯದಲ್ಲಿರುವ ಗಗನ ಯಾತ್ರಿಗಳು ಹೇಗೆ ಬಚಾವ್ ಆಗ್ತಾರೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಕ್ರೂ ಎಸ್ಕೇಪ್ ಸಿಸ್ಟಮ್
LVM3 (HLVM3) ರಾಕೆಟ್‌ನ್ನು ಉಡಾವಣಾ ವಾಹನವಾಗಿ ಬಳಸಿಕೊಂಡು ಭಾರತೀಯ ಗಗನಯಾತ್ರಿಗಳನ್ನು ಸುಮಾರು 400 ಕಿಮೀ ಎತ್ತರದ ಭೂಮಿಯ ಕಕ್ಷೆಗೆ ಸುರಕ್ಷಿತವಾಗಿ ಸಾಗಿಸುವುದು ಮತ್ತು ಅವರನ್ನು ಸುರಕ್ಷಿತವಾಗಿ ಹಿಂದಿರುಗಿಸುವುದು ಗಗನಯಾನ ಮಿಷನ್ ಗುರಿಯಾಗಿದೆ. ಈ ಸಂದರ್ಭದಲ್ಲಿ ಎದುರಾಗಬಹುದಾದ ತುರ್ತು ಸಂದರ್ಭಗಳಿಂದ ಬಾಹ್ಯಾಕಾಶ ಯಾನವು ವಿಫಲಗೊಂಡರೆ ಅಂತರಿಕ್ಷ ನೌಕೆಯಲ್ಲಿನ ಕ್ರೂ ಮಾಡ್ಯೂಲ್‌ನಿಂದ ಗಗನ ಯಾನಿಗಳನ್ನು ಸುರಕ್ಷಿತವಾಗಿ ಪಾರು ಮಾಡುವ ವ್ಯವಸ್ಥೆಯೇ ಕ್ರೂ ಎಸ್ಕೇಪ್ ಸಿಸ್ಟಮ್ ಆಗಿದೆ.
ಉಡಾವಣಾ ವಾಹನ ಅಪಘಾತಕ್ಕೊಳಗಾದರೆ CES ( ಕ್ರೂ ಎಸ್ಕೇಪ್ ಸಿಸ್ಟಮ್) ಸಿಬ್ಬಂದಿಯೊಂದಿಗೆ ಪೂರ್ತಿ ಮಾಡ್ಯೂಲ್‌ನ್ನು ಉಡಾವಣಾ ವಾಹನದಿಂದ ಬೇರ್ಪಡಿಸಿ, ಸುರಕ್ಷಿತವಾಗಿ ದೂರಕ್ಕೆ ತಳ್ಳುತ್ತದೆ. ಅಪಘಾತದ ಸಮಯದಲ್ಲಿ ಸುಲಭವಾಗಿ ಇದು ಕಾರ್ಯ ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ತಂತ್ರಜ್ಞಾನವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅಭಿವೃದ್ಧಿಪಡಿಸಿದೆ.
CES ಎಂಜಿನ್‌ಗಳ ಶಕ್ತಿ
ಉಡಾವಣೆ ವೇಳೆ ಆರೋಹಣ ಹಂತ ಅತ್ಯಂತ ನಿರ್ಣಾಯಕ ಹಂತವಾಗಿದೆ. ಈ ಸಮಯದಲ್ಲಿ ರಾಕೆಟ್ ಹೈಪರ್‌ಸಾನಿಕ್ ವೇಗ ಪಡೆದುಕೊಳ್ಳುತ್ತದೆ. ಅಂದರೆ ಶಬ್ಧದ ವೇಗಕ್ಕಿಂತ ಐದು ಪಟ್ಟು ಹೆಚ್ಚಿನ ವೇಗದಲ್ಲಿ ಚಲಿಸುತ್ತದೆ. ಇದಕ್ಕಾಗಿ ರಾಕೆಟ್ ಎತ್ತಲು ಎರಡು ಶಕ್ತಿಶಾಲಿ S200 ಘನ-ಇಂಧನ ಬೂಸ್ಟರ್ (ಘನ ಇಂಧನ ಚಾಲಿತ ರಾಕೆಟ್ ಎಂಜಿನ್) ಬಳಸಲಾಗಿರುತ್ತದೆ. ಘನ ಇಂಧನ ಎಂಜಿನ್ ಒಮ್ಮೆ ಆರಂಭಗೊಂಡರೆ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ಕ್ರೂ ಎಸ್ಕೇಪ್ ಸಿಸ್ಟಮ್, ಅಪಘಾತವಾದಾಗ ಉಡಾವಣಾ ವಾಹನಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸಬೇಕಾಗುತ್ತದೆ.
CES ಉಡಾವಣಾ ವಾಹನದ ಮುಂಭಾಗದ ತುದಿಯಲ್ಲಿ ಇರಿಸಲಾಗಿರುತ್ತದೆ. ಇದಕ್ಕೆ ವಿಶೇಷವಾದ ಘನ ಇಂಧನ ಎಂಜಿನ್‌ಗಳನ್ನು ಅಳವಡಿಸಲಾಗುತ್ತದೆ. ಇವು ಸಾಮಾನ್ಯ ಎಂಜಿನ್‌ಗಳಿಗಿಂತ ವೇಗವಾಗಿ ಇಂಧನವನ್ನು ಬಳಸಿಕೊಂಡು ಕೆಲಸ ಮಾಡುತ್ತವೆ.
ಗಗನಯಾತ್ರಿಗಳು ಹೇಗೆ ಪಾರಾಗ್ತಾರೆ?
ಅಪಘಾತದ ಸಮಯದಲ್ಲಿ CES ಸಿಬ್ಬಂದಿ ಇರುವ ಮಾಡ್ಯೂಲ್‌ನ್ನು ಅತಿ ಹೆಚ್ಚಿನ ವೇಗವಾಗಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತದೆ. ಬಳಿಕ ಬಹು ಹಂತದ ಪ್ಯಾರಾಚೂಟ್ ವ್ಯವಸ್ಥೆ ಮಾಡ್ಯೂಲ್‌ನ್ನು ಹಂತ ಹಂತವಾಗಿ ನಿಧಾನಗೊಳಿಸುತ್ತದೆ. ಬಳಿಕ ಸುರಕ್ಷಿತ ಸಮುದ್ರದಲ್ಲಿ ಇಳಿಸುತ್ತದೆ.
ಈ ವ್ಯವಸ್ಥೆಯನ್ನು ಇಂಟಿಗ್ರೇಟೆಡ್ ವೆಹಿಕಲ್ ಹೆಲ್ತ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತದೆ. ಅಗತ್ಯವಿದ್ದರೆ ಮಾತ್ರ CESನ್ನು ಸಕ್ರಿಯಗೊಳಿಸುತ್ತದೆ.
ವ್ಯೋಮಮಿತ್ರ
ಈ ಯೋಜನೆಗೂ ಮುನ್ನ, ಮಾನವನನ್ನೇ ಹೋಲುವ ವ್ಯೋಮಮಿತ್ರ ರೊಬೋಟ್‌ನ್ನು ಬಾಹ್ಯಾಕಾಶಕ್ಕೆ ಕಳಿಸಲಾಗುವುದು. ನಂತರ, ಗಗನಯಾನಿಗಳನ್ನು ಹೊತ್ತ ಗಗನನೌಕೆಯನ್ನು ಕೆಳ ಭೂ ಕಕ್ಷೆಗೆ ಉಡ್ಡಯನ ಮಾಡಲಾಗುತ್ತದೆ.
ಯೋಜನೆಯ ಕೆಲಸ 90% ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾರ್ಯ ನಡೆಯುತ್ತಿದೆ. ಈ ಯೋಜನೆಯಲ್ಲಿ ನಾವು ಯಶಸ್ಸು ಸಾಧಿಸಿದಲ್ಲಿ, ರಷ್ಯಾ, ಅಮೆರಿಕ ಹಾಗೂ ಚೀನಾ ನಂತರ. ಮಾನವನನ್ನು ಸ್ವತಂತ್ರವಾಗಿ ಬಾಹ್ಯಾಕಾಶಕ್ಕೆ ಕಳುಹಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದದ್ದಾಗಲಿದೆ.
ಗಗನಯಾನ್ ಯೋಜನೆಗಾಗಿ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್‌ಗಳು ರಷ್ಯಾದಲ್ಲಿ ತರಬೇತಿ ಪೂರ್ಣಗೊಳಿಸಿದ್ದಾರೆ.






