ಜನಪ್ರಿಯ ನಾಯಕನಾಗದೇ ಇದ್ದರೂ ಮನಮೋಹನ್ ಸಿಂಗ್ (Manmohan Singh) ಅವರಿಗೆ 2004ರಲ್ಲಿ ಪ್ರಧಾನಿ ಪಟ್ಟ ಸಿಕ್ಕಿದ್ದೇ ಒಂದು ಅಚ್ಚರಿಯ ವಿಚಾರ. ವಿಷಯದಲ್ಲಿ ಆಳವಾದ ಜ್ಞಾನದ ಜೊತೆ ಅದೃಷ್ಟ ಇದ್ದರೆ ಕೆಲವೊಂದು ಪಟ್ಟ ತಾನಾಗಿಯೇ ಬರುತ್ತದೆ ಎನ್ನುವುದಕ್ಕೆ ಮನಮೋಹನ್ ಸಿಂಗ್ ಉತ್ತಮ ಉದಾಹರಣೆ.
ಹೌದು. ಅಟಲ್ ಬಿಹಾರಿ (Atal Bihari Vajpayee) ಸರ್ಕಾರ 1999 ರಿಂದ ಕೇಂದ್ರದಲ್ಲಿ ಆಡಳಿತ ನಡೆಸಿತ್ತು. ಮೂಲಸೌಕರ್ಯ ಇತ್ಯಾದಿ ಯೋಜನೆಗಳಿಂದಾಗಿ ನಾವೇ ಮತ್ತೆ ಆಯ್ಕೆ ಆಗುತ್ತೇವೆ ಎಂಬ ವಿಶ್ವಾಸದಿಂದ 6 ತಿಂಗಳು ಮೊದಲೇ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಹೋಗಿತ್ತು. ʼಭಾರತ ಪ್ರಕಾಶಿಸುತ್ತದೆʼ ಅಡಿ ಎನ್‌ಡಿಎ ನಾಯಕರು ಭರ್ಜರಿ ಪ್ರಚಾರ ನಡೆಸಿದರು. ಆದರೆ 2004ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ (Sonia Gandhi) ನೇತೃತ್ವದ ಯುಪಿಎ (UPA) ಹೆಚ್ಚಿನ ಸ್ಥಾನ ಪಡೆಯಿತು.
Advertisement
Advertisement
ಅಧಿಕಾರಕ್ಕೆ ಯುಪಿಎ ಏರುವುದು ನಿಶ್ಚಿತವಾಗುತ್ತಿದ್ದಂತೆ ಸೋನಿಯಾ ಗಾಂಧಿ ಅವರೇ ಮುಂದೆ ಪ್ರಧಾನಿ ಆಗುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದಲೇ ಬರತೊಡಗಿತು. ವಿದೇಶಿ ಮಹಿಳೆ ಭಾರತದ ಪ್ರಧಾನಿ ಹುದ್ದೆ ಅಲಂಕರಿಸುವುದು ಸರಿಯಲ್ಲ ಎಂದು ವಿಪಕ್ಷಗಳು ಟೀಕಿಸಲು ಆರಂಭಿಸುತ್ತವೆ. ಈ ಮಧ್ಯೆ ಸೋನಿಯಾ ಗಾಂಧಿ ತಮಗೆ ಸಿಕ್ಕಿದ್ದ ಆಫರ್‌ನಿಂದ ಹಿಂದೆ ಸರಿಯುತ್ತಾರೆ. ಕೈ ನಾಯಕರು ಮನವೊಲಿಸುವ ಪ್ರಯತ್ನ ಮಾಡಿದರೂ ಅವರು ನಾನು ಪಟ್ಟ ಏರುವುದಿಲ್ಲ ಎಂದು ಖಡಕ್ ಆಗಿಯೇ ಹೇಳುತ್ತಾರೆ.
Advertisement
ಸೋನಿಯಾ ಹಿಂದೇಟು ಹಾಕುತ್ತಿದ್ದಂತೆ ಹಲವು ಕೈ ನಾಯಕರು ಪ್ರಧಾನಿ ಪಟ್ಟ ಏರುವ ಕನಸು ಕಾಣತೊಡಗಿದರು. ಮಾಧ್ಯಮಗಳಲ್ಲಿ ಕೆಲವರ ಹೆಸರುಗಳು ಬರತೊಡಗಿತು. ಒಂದು ದಿನ ಯಾರೂ ನಿರೀಕ್ಷೆ ಮಾಡದ ಹೆಸರನ್ನು ಸೋನಿಯಾ ಗಾಂಧಿ ಫೈನಲ್ ಮಾಡಿದರು. ಆ ಹೆಸರು ಬೇರೆ ಯಾರು ಅಲ್ಲ, ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಕಟ್ಟುವುದಾಗಿ ಘೋಷಿಸಿದರು.
Advertisement
ಮನಮೋಹನ ಸಿಂಗ್ ಆರ್ಥಿಕ ತಜ್ಞ ಹೌದು. ಆದರೆ ಜನಪ್ರಿಯ ನಾಯಕನಲ್ಲ. ಮಿತ ಭಾಷಿ. ಹೀಗಿದ್ದರೂ ಪಿವಿ ನರಸಿಂಹ ರಾವ್ ಅವಧಿಯಲ್ಲಿ ಕೈಗೊಂಡ ಆರ್ಥಿಕ ಸುಧಾರಣೆಯನ್ನು ಗಮನಿಸಿ ಮನಮೋಹನ ಸಿಂಗ್ ಅವರಿಗೆ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆಯನ್ನು ನೀಡಿದರು. ಇದನ್ನೂ ಓದಿ: ಭಾರತದ ಆರ್ಥಿಕತೆಗೆ ಚೇತರಿಕೆಯ ಟಾನಿಕ್ ನೀಡಿದ ಆರ್ಥಿಕ ತಜ್ಞ ಸಿಂಗ್
ಚುನಾವಣೆಯಲ್ಲಿ ಕಾಂಗ್ರೆಸ್ (Congress) ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಏಕಾಂಗಿಯಾಗಿ ಸರ್ಕಾರ ನಡೆಸುವಷ್ಟು ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್‌ನಲ್ಲಿ ಯಾರೇ ಪ್ರಧಾನಿಯಾದರೂ ಮಿತ್ರ ಪಕ್ಷಗಳನ್ನು ಸಂಭಾಳಿಸುವುದು ಕಷ್ಟ ಎನ್ನುವುದು ಸೋನಿಯಾಗೆ ತಿಳಿದಿತ್ತು. ಮನಮೋಹನ್ ಸಿಂಗ್ ಪ್ರಧಾನಿಯಾದರೆ ಮಿತ್ರ ಪಕ್ಷಗಳು ವಿರೋಧ ಮಾಡುವುದಿಲ್ಲ ಎನ್ನುವುದನ್ನು ತಿಳಿದಿದ್ದ ಸೋನಿಯಾ ಗಾಂಧಿ ಸಿಂಗ್ ಅವರಿಗೆ ಪ್ರಧಾನಿ ಹುದ್ದೆ ನೀಡಿದ್ದರು ಎಂಬ ಅಭಿಪ್ರಾಯ ಅಂದು ವ್ಯಕ್ತವಾಗಿದ್ದವು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಅವರ ಸರ್ಕಾರಕ್ಕೆ ಸಲಹೆ ನೀಡಲು ರಾಷ್ಟ್ರೀಯ ಸಲಹಾ ಮಂಡಳಿ(National Advisory Council) ರಚನೆಯಾಗಿತ್ತು. ಈ ಮಂಡಳಿಗೆ ಸೋನಿಯಾ ಗಾಂಧಿ ಅವರು ಮುಖ್ಯಸ್ಥರಾಗಿದ್ದರು. ಈ ಮಂಡಳಿ ರಚನೆಯಿಂದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೂ ಸೋನಿಯಾ ಗಾಂಧಿ ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಟೀಕೆಗಳು ಬಂದಿದ್ದವು. ಈ ಬಾರಿಯ ಸಂವಿಧಾನ ಕುರಿತ ಚರ್ಚೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರೀಯ ಸಲಹಾ ಮಂಡಳಿ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜನರು ಸಂಸದರನ್ನು ಆಯ್ಕೆ ಮಾಡುತ್ತಾರೆ. ಸಂಸದರು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಸರ್ಕಾರದಲ್ಲಿ ಪ್ರಧಾನಿಯೇ ದೊಡ್ಡವರು. ಹಾಗಿರುವ ಪ್ರಧಾನಿ ಹುದ್ದೆಯನ್ನು ಓವರ್‌ಟೇಕ್ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು.