ಎಲ್ಲೆಡೆ ದಸರಾ ಹಬ್ಬದ ಸಂಭ್ರಮ ಜೋರಾಗಿದೆ. ದಸರಾ ಎಂದಾಕ್ಷಣ ಮೊದಲಿಗೆ ನೆನಪಾಗುವುದೇ ಬಣ್ಣಬಣ್ಣದ ಲೈಟಿಂಗ್ಸ್‌ನಿಂದ ಕಣ್ಮನ ಸೆಳೆಯುವ ಮೈಸೂರು ದಸರಾ (Mysuru Dasara) ಹಾಗೂ ಜಂಬೂಸವಾರಿ. ದಸರಾ ಕೇವಲ ಮೈಸೂರಿಗಷ್ಟೇ ಸೀಮಿತವಾಗದೇ ರಾಜ್ಯದ ನಾನಾ ಭಾಗಗಳಲ್ಲಿಯೂ ಈ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯುವ ದಸರಾದಂತೆಯೇ ಐತಿಹಾಸಿಕ ಮಂಜಿನ ನಗರಿ ಮಡಿಕೇರಿಯ ದಸರಾ (Madikeri Dasara) ಆಚರಣೆಯೂ ಅಷ್ಟೇ ಪ್ರಸಿದ್ಧಿಯಾಗಿದೆ. ಮೈಸೂರು ದಸರಾ ಅರಮನೆ ಆವರಣದಲ್ಲಿ ಮಧ್ಯಾಹ್ನ ಆರಂಭವಾಗಿ ಸಂಜೆ ಸೂರ್ಯಾಸ್ತಮಾನದ ವೇಳೆಗೆ ಪೂರ್ಣಗೊಂಡರೆ, ಮಡಿಕೇರಿ ದಸರಾ ಆರಂಭವಾಗುವುದೇ ರಾತ್ರಿಯ ವೇಳೆ. ಹಾಗಾಗಿ ದಸರಾ ಮೈಸೂರಿನಲ್ಲಿ ಆರಂಭವಾಗಿ ಮಡಿಕೇರಿಯಲ್ಲಿ ಮುಳುಗುತ್ತದೆ ಎಂಬ ಮಾತು ಚಾಲ್ತಿಯಲ್ಲಿದೆ. ಇಂತಹ ಅದ್ಧೂರಿಯಾದ ಮಡಿಕೇರಿ ದಸರಾ ಹಬ್ಬದ ಹಿನ್ನೆಲೆಯನ್ನು ಏನು? 9 ದಿನಗಳ ದಸರಾ ಆಚರಣೆ ಹೇಗಿರುತ್ತದೆ ಎಂಬ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಮೈಸೂರಿನಲ್ಲಿ ಯದುವಂಶದ ರಾಜ ಮನೆತನದವರು ನವರಾತ್ರಿ ಹಬ್ಬವನ್ನು ಹೇಗೆ ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿದರೋ ಹಾಗೆ ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು. ಕೊಡಗನ್ನು ಆಳಿದ ದೊಡ್ಡವೀರರಾಜೇಂದ್ರ ಮಹಾರಾಜರು ಸಹ ಆಯುಧಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬುದಕ್ಕೆ ಅನೇಕ ಉಲ್ಲೇಖಗಳಿವೆ.
Advertisement
Advertisement
ಮನೆಮನೆಗೆ ತೆರಳಿ ಪೂಜೆ ಪಡೆಯುವ ಶಕ್ತಿದೇವತೆಗಳು:
ಭಕ್ತರು ಸಾಮಾನ್ಯವಾಗಿ ತಮ್ಮ ಭಕ್ತಿ – ಭಾವಗಳನ್ನು ಸಲ್ಲಿಸಲು ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಇಲ್ಲಿ ನಾಲ್ಕು ಶಕ್ತಿ ದೇವತೆಗಳು ಮಡಿಕೇರಿ ನಗರದ ಪ್ರತಿ ಮನೆಗಳಲ್ಲೂ ನಗರದ ಪೂಜೆ ಪಡೆಯುತ್ತಾರೆ. ಹೌದು. ಸುಮಾರು ನೂರಾರು ವರ್ಷಗಳ ಹಿಂದೆ ಮಡಿಕೇರಿಯ ಸುತ್ತ ಮುತ್ತಲೂ ಭಾರೀ ಸಾಂಕ್ರಮಿಕ ರೋಗ ತಲೆದೋರಿ ನೂರಾರು ಮಂದಿ ಸಾವನ್ನಪ್ಪಿದ್ದರಂತೆ. ಆಗ ಊರಿನ ಜನರೆಲ್ಲಾ ಸೇರಿ ತಮ್ಮ ಊರಿನ ಶಕ್ತಿದೇವತೆಗಳ ಮೊರೆ ಹೋದಾಗ, ಅವರ ಮೊರೆಯನ್ನು ಆಲಿಸಿದ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿ, ಕುಂದುರುಮೊಟ್ಟೆ ಚೌಟಿಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮನ ಶಕ್ತಿದೇವತೆಗಳು ರೋಗವನ್ನು ದೂರ ಮಾಡಿದರು ಎಂಬ ಪ್ರತೀತಿ ಇದೆ.
Advertisement
ಅಂದಿನಿಂದ ಪ್ರತೀ ವರ್ಷವೂ ನವರಾತ್ರಿಯ ಒಂಭತ್ತು ದಿನಗಳ ಕಾಲ ಕರಗವನ್ನು ಆಚರಿಸಿ, ಆ ಒಂಭತ್ತು ದಿನಗಳ ಕಾಲ ನಗರ ಪ್ರದಕ್ಷಿಣೆ ಮಾಡಿ ಈ ಶಕ್ತಿದೇವತೆಗಳು ಭಕ್ತರಿಗೆ ಆಶೀರ್ವಾದ ನೀಡುತ್ತಾರೆ. ಪ್ರತಿವರ್ಷವೂ ವಿಜಯದಶಮಿಯ ಮುನ್ನಾ ದಿನ ಶಕ್ತಿದೇವತೆಗಳ ಆರಾಧನೆ ಮಾಡಲಾಗುತ್ತದೆ.
Advertisement
ಇನ್ನೂ ಈ ಶಕ್ತಿ ದೇವತೆಗಳ ಕರಗಗಳು ಮಡಿಕೇರಿ ನಗರದ ಮತ್ತು ಸುತ್ತಮುತ್ತ 9 ದಿನಗಳು ಕಾಲ ಸಂಚರಿಸುತ್ತವೆ. ಹಾಗೆ ಕರಗ ಬರುವ ಬೀದಿಯಲ್ಲಿ ಪ್ರತೀ ಮನೆಯವರೂ ಬಹಳ ಶ್ರದ್ಧಾ ಭಕ್ತಿಯಿಂದ ಮನೆ ಮುಂದೆ ಸಾರಿಸಿ, ಗುಡಿಸಿ, ಬಣ್ಣ ಬಣ್ಣದ ರಂಗೋಲಿಯನ್ನು ಇಟ್ಟು ತಮ್ಮ ಮನೆಯ ಮುಂದೆ ಶಕ್ತಿ ದೇವತೆಗಳ ಕರಗ ಬಂದಾಗ ಅದಕ್ಕೆ ಮಂಗಳಾರತಿ ಮಾಡಿ ನಮಿಸುವುದು ಇಲ್ಲಿನ ಸಂಪ್ರದಾಯ.
ಆಚರಣೆ ಹೇಗೆ?
ಮಡಿಕೇರಿಯಲ್ಲಿ ದಸರಾ ಆಚರಣೆ ತಯಾರಿ ಸುಮಾರು 3 ತಿಂಗಳ ಮೊದಲೇ ಆರಂಭವಾಗಿ ಸ್ಥಳೀಯರಿಂದ ಹಣ ಸಂಗ್ರಹ ಮಾಡಿ ದಸರಾ ಸಿದ್ಧತೆಗೆ ಕಾರ್ಯಾರಂಭ ಮಾಡಲಾಗುತ್ತದೆ. ಮಹಾಲಯ ಅಮವಾಸ್ಯೆಯ ಮಾರನೆಯ ದಿನದಂದು ಈ ನಾಲ್ಕು ದೇವಾಲಯಗಳ ಅರ್ಚಕರು ಕರಗ ಕಟ್ಟಲು ಬೇಕಾದ ಪರಿಕರಗಳನ್ನು ತಲೆಯ ಮೇಲೆ ಹೊತ್ತುಕೊಂಡು ಊರ ಹೊರಭಾಗದಲ್ಲಿರುವ ಪಂಪಿನ ಕೆರೆ ಎಂಬ ಸ್ಥಳಕ್ಕೆ ಭಾಜಾಭಜಂತ್ರಿ ತಂಡದೊಂದಿಗೆ ಹೋಗುತ್ತಾರೆ.
ಕರಗವನ್ನು ಹೊರುವ ಪೂಜಾರಿಯು ತಲೆಯ ಕೂದಲನ್ನು ನುಣ್ಣಗೆ ತೆಗಿಸಿ, ಹಳದಿ ಬಣ್ಣದ ಕಚ್ಚೆಯನ್ನು ಧರಿಸಿ, ಒಂದು ಕೈಯಲ್ಲಿ ಸಣ್ಣದಾದ ಕತ್ತಿ ಮತ್ತು ಇನ್ನೊಂದು ಕೈಯಲ್ಲಿ ಮರದ ಬೆತ್ತವನ್ನು ಹಿಡಿದಿರುತ್ತಾರೆ. ದೇವಸ್ಥಾನದ ಅರ್ಚಕರು ಮಲ್ಲಿಗೆ, ಕನಕಾಂಬರ, ಸೇವಂತಿಗೆ ಮೊದಲಾದ ಹೂವುಗಳನ್ನು ಬಳಸಿ ಕರಗ ಕಟ್ಟಲು ಪ್ರಾರಂಭಿಸುತ್ತಾರೆ ಕರಗ ಕಟ್ಟಿದ ನಂತರ ಈ ನಾಲ್ಕು ಕರಗಗಳಿಗೆ ಪೂಜೆ ಇರುತ್ತದೆ. ಈ ಪೂಜೆಯ ನಂತರ ದೇವಾಲಯದ ಅರ್ಚಕರು ತಮ್ಮ ತಲೆಯ ಮೇಲೆ ಕರಗವನ್ನು ಹೊತ್ತುಕೊಂಡು ರಥಬೀದಿಲ್ಲಿರುವ ದೇವಸ್ಥಾನಗಳಿಗೆ ಹೋಗಿ ಪೂಜೆಯನ್ನು ಸಲ್ಲಿಸುತ್ತಾರೆ. ಕರಗದ ನೃತ್ಯ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಈ ರೀತಿ ಕರಗದ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆಗೊಂಡು ಈ ಶಕ್ತಿ ದೇವತೆಗಳ ಕರಗ ಉತ್ಸವ 9 ದಿನಗಳ ಕಾಲ ನಗರದ ಬೀದಿಗಳಲ್ಲಿ ನಡೆಯುತ್ತದೆ.
ದಶಮಂಟಪಗಳ ಮೆರವಣಿಗೆ:
ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನೂ ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ. ಕೆ.ಎಸ್. ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸಿ, ಭಜನಾಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.
ಮಡಿಕೇರಿ ನಗರದ ವಿವಿಧ ದೇವಾಲಯಗಳಾದ ಶ್ರೀ ಪೇಟೆ ರಾಮಮಂದಿರ, ಶ್ರೀ ಕೋಟೆಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ, ಶ್ರೀಕುಂದುರುಮೊಟ್ಟೆ ಚೌಟಿಮಾರಿಯಮ್ಮ, ಶ್ರೀದಂಡಿನಮಾರಿಯಮ್ಮ, ಶ್ರೀಕೋದಂಡರಾಮಮಂದಿರ, ಶ್ರೀಚೌಡೇಶ್ವರಿ, ಶ್ರೀದೇಚೂರು ರಾಮಮಂದಿರ, ಕರವಲೆ ಬಾಡಗದ ಶ್ರೀಭಗವತಿ ಹಾಗೂ ಶ್ರೀಕೋಟೆಗಣಪತಿ ದೇವಾಲಯಗಳ ದಶಮಂಟಪಗಳು ಮೆರವಣಿಗೆಯಲ್ಲಿ ಸಾಗುತ್ತವೆ. ಈ ವೇಳೆ ಜಗಮಗಿಸುವ ವಿದ್ಯುತ್ ದೀಪಗಳೊಂದಿಗೆ ಹೈಟೆಕ್ ಮಾದರಿಯ ಚಲನವಲನಗಳನ್ನೊಳಗೊಂಡ ಪೌರಾಣಿಕ ಕಥಾಹಂದರದ ಕಲಾಕೃತಿಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ, ಇಡೀ ನಗರ ವಿದ್ಯುದ್ದೀಪಗಳಿಂದ ಸಿಂಗಾರಗೊಂಡು ಕಣ್ಮನ ಸೆಳೆಯುತ್ತದೆ. ಕೊನೆಗೆ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮಡಿಕೇರಿ ದಸರಾಕ್ಕೆ ತೆರೆ ಬೀಳುತ್ತದೆ.