ತಮಿಳುನಾಡು ರಾಜಕೀಯ ರಂಗದಲ್ಲಿ ಮುಳುಗದ ಸೂರ್ಯ ಎಂದೇ ಖ್ಯಾತಿ ಪಡೆದಿದ್ದ ಕಲೈಗ್ನಾರ್ ಕರುಣಾನಿಧಿ ನಿಧನರಾಗಿದ್ದಾರೆ. ಮಾಜಿ ಸಿಎಂ, ದ್ರಾವಿಡ ಚಳವಳಿಯ ನೇತಾರ, 60ಕ್ಕೂ ಹೆಚ್ಚು ವರ್ಷಗಳ ಕಾಲ ರಾಜಕೀಯದಲ್ಲಿ ಸೋಲರಿಯದ ಸರದಾರನಾಗಿ ಮೆರೆದಿದ್ದ ಕರುಣಾನಿಧಿ ಮಂಗಳವಾರ ಸಂಜೆ ವಿಧಿವಶರಾದರು.
ದೇಶದ ವಿಭಿನ್ನ ರಾಜಕಾರಣಗಳ ಸಾಲಿನಲ್ಲಿ ಕರುಣಾನಿಧಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ರಾಜಕಾರಣದ ಈ ಪೆರಿಯಾರ್ ಎದೆಗೂಡಲ್ಲಿ ರಾಜನೀತಿಗಿಂತ ಕವಿ ಹೃದಯದ ಮನಸ್ಸಿದೆ. ಕೈಗಳಲ್ಲಿ ಬರವಣಿಗೆ ಮೂಲಕ ಜನರನ್ನು ಬಡಿದೆಬ್ಬಿಸುವ ತಾಕತ್ತಿದೆ. ಒಂದು ವೇಳೆ, ಕರುಣಾನಿಧಿ ರಾಜಕಾರಣಿ ಆಗಿರದಿದ್ದರೆ, ಒಬ್ಬ ಉತ್ಕೃಷ್ಟ ಬರಹಗಾರನಾಗಿರುತ್ತಿದ್ದರು. ಯಾಕಂದ್ರೆ, ಅವರೊಬ್ಬ ಸರ್ವಶ್ರೇಷ್ಠ ಕತೆಗಾರ.
Advertisement
Advertisement
ಕರುಣಾನಿಧಿ ರಾಜಕೀಯ ಬದುಕಿನ ವರ್ಣರಂಜಿತ ಪುಟಗಳನ್ನು ತೆರೆಯುವ ಮುನ್ನ, ಬಾಲ್ಯದ ಬದುಕಿನ ಕತೆ ತಿಳಿಯದಿದ್ದರೆ, ಈ ಕಥೆ ಅರ್ಥ ಹೀನ. 10ನೇ ತರಗತಿ ಫೇಲ್ ಆಗಿದ್ದ ಕರುಣಾನಿಧಿ ಪೆರಿಯಾರರ ಸ್ವಾಭಿಮಾನಿ ಹೋರಾಟದಲ್ಲಿ ಭಾಗಿಯಾಗಿ ತನ್ನ ಹರಿತವಾದ ಕೈಬರಹದಿಂದಲೇ ಅಪಾರ ಜನಮನ್ನಣೆಗಳಿಸಿದ್ರು. `ತಮಿಳುನಾಡು ತಮಿಳು ಮಾನವರ್ ಮನ್ರಮ್’ ಎಂಬ ವಿದ್ಯಾರ್ಥಿ ಸಂಘ ಕಟ್ಟಿಕೊಂಡು ದ್ರಾವಿಡ ಹೋರಾಟಕ್ಕೆ ಅಡಿಯಿಟ್ಟಿದ್ದರು. ಈ ಮೂಲಕ ಚಿಕ್ಕಂದಿನಿಂದಲೇ ಸಂಘಟನಾ ಚತುರನಾಗೇ ಗುರುತಿಸಿ ಕೊಂಡಿದ್ದರು.
Advertisement
Advertisement
ಚಿತ್ರರಂಗದ ನಂಟು:
ಕರುಣಾನಿಧಿ ರಾಜಕೀಯದ ಜೊತೆ ಜೊತೆಗೆ ಥಿಯೇಟರ್ ನಲ್ಲೂ ಕೆಲಸ ನಿರ್ವಹಿಸುತ್ತಿದ್ದರು. ತಮ್ಮ 20ನೇ ವಯಸ್ಸಿನಲ್ಲೇ ತಮಿಳಿನ ರಾಜಕುಮಾರಿ ಚಿತ್ರಕಥೆ ಬರೆದರು. ಇದು ಕರುಣಾನಿಧಿ ಚಿತ್ರಕಥೆ ಬರೆದ ಮೊದಲ ಚಿತ್ರ. ಈ ಚಿತ್ರದಿಂದಾಗಿ ತಮಿಳಿನ ಸೂಪರ್ ಸ್ಟಾರ್ ಎಂಜಿ ರಾಮಚಂದ್ರನ್ ಜೊತೆ ಕರುಣಾ ಸ್ನೇಹ ವೃದ್ಧಿಯಾಯ್ತು. ಚಿತ್ರರಂಗದ ಜೊತೆ ಜೊತೆಗೆ ರಾಜಕೀಯ ನಂಟು ಬೆಳೆಯುವುದಕ್ಕೆ ಒಂದೇ ಒಂದು ಹೋರಾಟ ಸಾಕಾಗಿತ್ತು.
ಅದು 1937 ಭಾರತ ಬ್ರಿಟಿಷರ ದಾಸ್ಯದಲ್ಲಿದ್ದ ದಿನಗಳದು. ಈಗಿನ ತಮಿಳುನಾಡು ಅಂದು ಮದ್ರಾಸ್ ಪ್ರೆಸಿಡೆನ್ಸಿಯಾಗಿದ್ದ ಸಮಯ. ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ವರಿಷ್ಠ ಮುತ್ಸದ್ದಿ ಸಿ ರಾಜಗೋಪಾಲಾಚಾರಿ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಸರ್ಕಾರ ರಚನೆ ಆಯ್ತು. ರಾಜಗೋಪಾಲಾಚಾರಿ ಸರ್ಕಾರ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿತ್ತು. ಇದನ್ನ ಜಸ್ಚೀಸ್ ಪಾರ್ಟಿಯ ಪೆರಿಯಾರ್ ಮತ್ತು ಅಣ್ಣದುರೈ ಅವರಂತಹ ದಕ್ಷಿಣ ಭಾರತದ ನಾಯಕರುಗಳು ವಿರೋಧಿಸಿದ್ರು. ತಮಿಳುನಾಡಿನಾದ್ಯಂತ ಹಿಂದಿ ವಿರೋಧಿ ಚಳುವಳಿ ಆರಂಭಗೊಂಡಿತ್ತು. ಈ ಸಮಯದಲ್ಲಿ ವಿದ್ಯಾರ್ಥಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಒಬ್ಬ ಚಿಗುರು ಮೀಸೆಯ ಯುವಕ ಹೋರಾಟಕ್ಕೆ ಧುಮುಕಿದ್ದ. ಆತನೇ ಎಂ.ಕರುಣಾನಿಧಿ.
ಇವತ್ತು ತಮಿಳುನಾಡಿನಲ್ಲಿ ಡಿಎಂಕೆ ಸೋತು ಮೂಲೆ ಸೇರಿರಬಹುದು. ಜನತೆ ಡಿಎಂಕೆ ವಿರುದ್ಧವೂ ಸೇಡು ತೀರಿಸಿಕೊಂಡಿರಬಹುದು. ಆದ್ರೆ, ಕರುಣಾನಿಧಿ ಮೇಲೆ ಯಾವತ್ತೂ ಕೋಪ ಮಾಡಿಕೊಂಡಿಲ್ಲ. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ. 1947ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟು ಚುನಾವಣೆಗೆ ಸ್ಪರ್ಧಿಸಿದ ಬಳಿಕ ಕರುಣಾನಿಧಿ ಸೋತೆ ಇಲ್ಲ. ಡಿಎಂಕೆಗೆ ಮತಪ್ರಭುಗಳು ಸೋಲಿಸಿದರೂ, ಕರುಣಾನಿಧಿಯನ್ನು ಮಾತ್ರ ಗೆಲ್ಲಿಸಿದ್ದಾರೆ. ಡಿಎಂಕೆ ಉದಯಿಸುತ್ತಿರುವ ಸೂರ್ಯನಾದರೆ, ಕರುಣಾನಿಧಿ ಮುಳುಗದ ಸೂರ್ಯ.
1944ರಲ್ಲಿ ಜಸ್ಟೀಸ್ ಪಾರ್ಟಿಯಿಂದ ಹೊರಬಂದ ಅಣ್ಣಾದುರೈ ಮತ್ತು ಕರುಣಾನಿಧಿ ದ್ರಾವಿಡ ಮುನೇತ್ರ ಕಜಗಂ (ಡಿಎಂಕೆ) ಪಕ್ಷ ಕಟ್ಟಿದರು. ಅಣ್ಣಾದುರೈ ಖಾಸಾ ಶಿಷ್ಯನಾಗಿದ್ದ ಕರುಣಾನಿಧಿ ಪಕ್ಷ ಕಟ್ಟಲು ಹೆಗಲಿಗೆ ಹೆಗಲುಕೊಟ್ಟು ನಿಂತ್ರು. ಸ್ಪರ್ಧಿಸಿದ್ದ ಮೊದಲ ಚುನಾವಣೆಯಲ್ಲೇ ಕರುಣಾನಿಧಿ ಗೆದ್ದರೂ, ಕಾಂಗ್ರೆಸ್ ಎದುರು ಡಿಎಂಕೆ ಸೋತಿತ್ತು. 1962ರಲ್ಲಿ ಚುನಾವಣೆಯಲ್ಲೂ ಇದೇ ಸ್ಥಿತಿ. ಸಂಘಟನೆಯ ಮೂಲಕ ಅತ್ಯುತ್ತಮ ಇಮೇಜ್ ಹೊಂದಿದ್ದ ಕರುಣಾನಿಧಿ ಅವರನ್ನು ವಿಧಾನಸಭೆಯ ವಿರೋಧಪಕ್ಷದ ಉಪನಾಯಕನಾಗಿ ಅಣ್ಣಾದುರೈ ನೇಮಿಸಿ ದೊಡ್ಡ ಜವಾಬ್ದಾರಿಯನ್ನೇ ವಹಿಸಿದ್ದರು.
1965ರ ಹೊತ್ತಿಗೆ ದೇಶದಲ್ಲಿ ಹಿಂದಿ ವಿರೋಧಿ ಹೋರಾಟ ತೀವ್ರವಾಗಿತ್ತು. ಹಿಂದಿ ಹೇರಿಕೆ ವಿರುದ್ಧ ದಕ್ಷಿಣ ಭಾರತ ಕೆಂಡವಾಗಿತ್ತು. ಸಂಘಟನಾ ಚತುರ ಕರುಣಾನಿಧಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ರಾಜ್ಯವನ್ನೆಲ್ಲಾ ಸುತ್ತಾಡಿದ್ರು. ಪಕ್ಷವನ್ನು ಸಂಘಟಿಸಿದ್ರು. ಇದಾದ ಐದೇ ವರ್ಷಗಳಲ್ಲಿ ರಾಜ್ಯದ ಚಿತ್ರಣ ಬದಲಾಗಿ ಹೋಗಿತ್ತು. ಡಿಎಂಕೆಯ ಹಿಂದಿ ವಿರೋಧಿ ಹೋರಾಟ ತಮಿಳುನಾಡಿನ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. 1967ರ ಚುನಾವಣೆಯಲ್ಲಿ ಡಿಎಂಕೆ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು. ತಮಿಳುನಾಡಿನ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿ ಅಣ್ಣಾದುರೈ ಅಧಿಕಾರ ವಹಿಸಿಕೊಂಡ್ರು. ಪ್ರಭಾವಿ ಮುಖಂಡ ಕರುಣಾನಿಧಿಗೆ ಲೋಕ ಪ್ರಬಂಧನ ಹಾಗೂ ರಾಜಮಾರ್ಗ ಸಚಿವ ಸ್ಥಾನ ನೀಡಲಾಯ್ತು.
ಅಧಿಕಾರಕ್ಕೇರಿದ ಕೇವಲ ಎರಡೇ ವರ್ಷಕ್ಕೆ ಕ್ಯಾನ್ಸರ್ ನಿಂದಾಗಿ ಅಣ್ಣಾದುರೈ ವಿಧಿವಶವಾದ್ರು. ತೆರವಾದ ಮುಖ್ಯಮಂತ್ರಿ ಸ್ಥಾನ ಕರುಣಾನಿಧಿಗೆ ಒಲಿದು ಬಂದಿತ್ತು. ಆ ಸಮಯದಲ್ಲಿ ಎಂಜಿ ರಾಮಚಂದ್ರನ್ ಕೂಡಾ ಕರುಣಾ ಬೆಂಬಲಕ್ಕೆ ನಿಂತರು. ಹೀಗಾಗಿ ಅನಾಯಸವಾಗಿ ಸಿಎಂ ಸ್ಥಾನ ಅಲಂಕರಿಸಿದ್ರು. ಆದ್ರೆ ಸರ್ಕಾರದಲ್ಲಿ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದರಿಂದ ಡಿಎಂಕೆ ಸರ್ಕಾರವನ್ನೇ ಪ್ರಧಾನಿ ಇಂದಿರಾಗಾಂಧಿ ವಜಾಗೊಳಿಸಿಬಿಟ್ಟರು.
ರಾಜ್ಯ ಸರ್ಕಾರವನ್ನು ವಜಾಗೊಳಿಸಿದ್ದು ಡಿಎಂಕೆಗೆ ವರದಾನವಾಗಿ ಪರಿಣಮಿಸಿತ್ತು. 1971ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿಗೆ ಕರುಣಾನಿಧಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ರು. ಆದರೆ, ಪಕ್ಷದಲ್ಲಿ ಎಂಜಿಆರ್ ಹಾಗೂ ಕರುಣಾನಿಧಿ ನಡುವೆ ಸಂಬಂಧ ಹಳಸಿ ಹೋಗಿತ್ತು. ಭ್ರಷ್ಟಾಚಾರ ಆರೋಪ ಹೊರಿಸಿದ್ದ ಎಂಜಿಆರ್, ಕರುಣಾನಿಧಿ ವಿರುದ್ಧ ಸಿಡಿದೆದ್ದು ಹೊಸ ಪಕ್ಷವೊಂದನ್ನು ಹುಟ್ಟು ಹಾಕಿದ್ದರು. ಅದುವೇ ಅಣ್ಣಾಡಿಎಂಕೆ.
ಅಣ್ಣಾಡಿಎಂಕೆಯನ್ನು ಎಂಜಿಆರ್ ಹುಟ್ಟು ಹಾಕಿದ ಬಳಿಕ ತಮಿಳುನಾಡು ರಾಜಕೀಯದಲ್ಲಿ ಬಹಳಷ್ಟು ಏರಿಳಿತ ಉಂಟಾಯ್ತು. 1976ರಲ್ಲಿ ಕರುಣಾನಿಧಿ ವಿರುದ್ಧ ತೊಡೆತಟ್ಟಿದ್ದ ಎಂಜಿ ರಾಮಚಂದ್ರನ್ ಮುಖ್ಯಮಂತ್ರಿಯಾದ್ರು. ಇದಾದ ಬಳಿಕ ಕರುಣಾನಿಧಿ ಬಹುದಿನಗಳ ಕಾಲ ಅಧಿಕಾರದಿಂದ ದೂರವೇ ಉಳಿಯಬೇಕಾಯ್ತು. ಸತತ ಮೂರು ಚುನಾವಣೆಯಲ್ಲಿ ಸೋತು ಸುಣ್ಣವಾದ ಕರುಣಾನಿಧಿಗೆ ಗೆಲುವು ದಕ್ಕಿದ್ದು 1989ರ ಚುನಾವಣೆಯಲ್ಲೇ. ಮುಂದೆ 1996 ಹಾಗೂ 2006ರಲ್ಲಿಯೂ ಕರುಣಾನಿಧಿ ಮುಖ್ಯಮಂತ್ರಿಯಾದ್ರು.