ಲೋಕಸಭಾ ಚುನಾವಣೆ (Lok Sabha Election) ಸನ್ನಿಹಿತವಾಗುತ್ತಿದ್ದಂತೆ ಕೇರಳದ ವಯನಾಡಿನಲ್ಲಿ (Wayanad) ಸುಲ್ತಾನ್ ಬತ್ತೇರಿ (Sulthan Bathery) ಹೆಸರು ಸಾಕಷ್ಟು ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಗೆದ್ದರೆ ವಯನಾಡು ಜಿಲ್ಲೆಯಲ್ಲಿರುವ ಸುಲ್ತಾನ್ ಬತ್ತೇರಿ ಎಂಬ ಹೆಸರನ್ನು ಗಣಪತಿವಟ್ಟಂ (Ganapathyvattam) ಎಂದು ಬದಲಾಯಿಸುತ್ತೇನೆ ಎಂದು ವಯನಾಡು ಲೋಕಸಭಾ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಭರವಸೆ ನೀಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ರೆ ಸುಲ್ತಾನ್ ಬತ್ತೇರಿಯ ಪೂರ್ವ ಹೆಸರು ಮತ್ತು ಇತಿಹಾಸವೇನು? ಗಣಪತಿವಟ್ಟಂ ಸುಲ್ತಾನ್ ಬತ್ತೇರಿಯಾಗಿ ಬದಲಾಗಿದ್ದು ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಸುಲ್ತಾನ್ ಬತ್ತೇರಿ ಹೆಸರು ಬಂದಿದ್ದು ಹೇಗೆ?
ಸುಲ್ತಾನ್ ಬತ್ತೇರಿ ಕೇರಳದ ಸ್ವಚ್ಛ ನಗರಿ ಎಂಬ ಹೆಸರನ್ನು ಪಡೆದಿದೆ. ಮಲಬಾರ್‌ನಲ್ಲಿ ಮೈಸೂರು ಅರಸರು ಆಡಳಿತ ನಡೆಸುತ್ತಿದ್ದ ಸಂದರ್ಭ ಈ ಜಾಗ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳ ಡಂಪಿಂಗ್ ಯಾರ್ಡ್ ಆಗಿತ್ತು ಎಂದು ಕೇರಳ ಪ್ರವಾಸೋದ್ಯಮದ ಅಧಿಕೃತ ವೆಬ್ಸೈಟ್ ಹೇಳುತ್ತದೆ. ಈ ಪಟ್ಟಣವನ್ನು ಮೂಲತಃ ಗಣಪತಿವಟ್ಟಂ ಎಂದು ಕರೆಯಲಾಗುತ್ತಿತ್ತು. ಸುಲ್ತಾನ್ ಬತ್ತೇರಿಯ ಪುರಸಭಾ ವೆಬ್‌ಸೈಟ್‌ನ ಪ್ರಕಾರ ಗಣಪತಿ ದೇವಸ್ಥಾನದ ಹೆಸರನ್ನು ಇಡಲಾಗಿತ್ತು.
Advertisement
Advertisement
ವಯನಾಡಿನ ಮೂರು ಮುನ್ಸಿಪಲ್ ಪಟ್ಟಣಗಳಲ್ಲಿ ಒಂದಾದ ಸುಲ್ತಾನ್ ಬತ್ತೇರಿ (ಇನ್ನೆರಡು ಮಾನಂತವಾಡಿ ಮತ್ತು ಕಲ್ಪೆಟ್ಟಾ), ಒಂದು ಕಾಲದಲ್ಲಿ ಗಣಪತಿವಟ್ಟಂ ಎಂದು ಕರೆಯಲ್ಪಡುವ ಕಲ್ಲಿನ ದೇವಾಲಯವನ್ನು ಹೊಂದಿತ್ತು. ವಿಜಯನಗರ ರಾಜವಂಶದ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯವನ್ನು 13ನೇ ಶತಮಾನದಲ್ಲಿ ಇಂದಿನ ತಮಿಳುನಾಡು ಮತ್ತು ಕರ್ನಾಟಕದ ಪ್ರದೇಶಗಳಿಂದ ವಯನಾಡಿಗೆ ವಲಸೆ ಬಂದ ಜೈನರು ನಿರ್ಮಿಸಿದ್ದರು.
Advertisement
18ನೇ ಶತಮಾನದ ದ್ವಿತೀಯಾರ್ಧದಲ್ಲಿ ಮೈಸೂರಿನ ಆಡಳಿತಗಾರ ಟಿಪ್ಪು ಸುಲ್ತಾನನ (Tipu Sultan) ಆಕ್ರಮಣದ ಸಮಯದಲ್ಲಿ ದೇವಾಲಯವು ಭಾಗಶಃ ನಾಶವಾಯಿತು. 1750 ಮತ್ತು 1790ರ ನಡುವೆ, ಇಂದಿನ ಉತ್ತರ ಕೇರಳವನ್ನು ಮೈಸೂರು, ಹೈದರಾಲಿ ಮತ್ತು ಅವನ ಮಗ ಟಿಪ್ಪು ಹಲವಾರು ಬಾರಿ ಆಕ್ರಮಣ ಮಾಡಿ ದೇವಾಲಯವನ್ನು ಕೆಡವಿದ್ದರು. ಬಳಿಕ ಅದನ್ನು ಸುಮಾರು 150ವರ್ಷಗಳ ಕಾಲ ಹಾಗೆಯೇ ಬಿಡಲಾಗಿತ್ತು. ನಂತರ ಇದನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸ್ವಾಧೀನಪಡಿಸಿಕೊಂಡು ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕವೆಂದು ಘೋಷಿಸಿತು.
Advertisement
ಟಿಪ್ಪುವಿನ ಸೇನೆಯು ಗಣಪತಿವಟ್ಟಂ ಪಟ್ಟಣವನ್ನು ತನ್ನ ಬ್ಯಾಟರಿಯನ್ನು (ಕ್ಯಾನನ್‌ಗಳ ಸಮೂಹ) ಶೇಖರಿಸುವ ಸ್ಥಳವಾಗಿ ಬಳಸಿಕೊಂಡಿತು. ಬ್ರಿಟಿಷರ ಈ ಜಾಗವನ್ನು ವಶಪಡಿಸಿದ ಬಳಿಕ ಈ ಪಟ್ಟಣವನ್ನು ‘ಸುಲ್ತಾನರ ಬ್ಯಾಟರಿ’ ಎಂದು ಕರೆಯುತ್ತಿದ್ದರು. ಕಾಲಾನಂತರದಲ್ಲಿ ಈ ಹೆಸರು ʼಸುಲ್ತಾನ್ ಬತ್ತೇರಿʼಯಾಗಿ ಬದಲಾಯಿತು.
ಸಮುದ್ರ ಮಟ್ಟದಿಂದ 1000ಮೀ ಎತ್ತರದಲ್ಲಿರುವ ಸುಲ್ತಾನ್ ಬತ್ತೇರಿಯು ವರ್ಷವಿಡೀ ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ. ಕಣಿವೆಗಳು, ಬಯಲು ಪ್ರದೇಶಗಳು ಮತ್ತು ಪರ್ವತಮಯ ಭೂಪ್ರದೇಶಗಳೊಂದಿಗೆ ಹೆಣೆದುಕೊಂಡಿರುವ ಸ್ಥಳಾಕೃತಿಯು ಇಲ್ಲಿಗೆ ಭೇಟಿ ನೀಡುವವರನ್ನು ಮೋಡಿ ಮಾಡುತ್ತದೆ.
ಒಂದು ಕಾಲದಲ್ಲಿ ಮಲಬಾರ್ ಪ್ರದೇಶದಲ್ಲಿ ಆಯಕಟ್ಟಿನ ಸ್ಥಳವೆಂದು ಹೆಸರಾಗಿದ್ದ ಸುಲ್ತಾನ್ ಬತ್ತೇರಿಯು ಈಗ ವಯನಾಡು ಜಿಲ್ಲೆಯ ಅತಿ ದೊಡ್ಡ ಪಟ್ಟಣವಾಗಿದೆ ಮತ್ತು ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.ಪೂರ್ವ-ಐತಿಹಾಸಿಕ ಗುಹೆಗಳು, ಕಾಡಿನ ಹಾದಿಗಳು, ಹೊಳೆಯುವ ತೊರೆಗಳು ಮತ್ತು ನದಿಗಳು ಮತ್ತು ಬೆಟ್ಟಗಳ ಹಚ್ಚ ಹಸಿರಿನ ಪ್ರದೇಶವು ಪ್ರತಿವರ್ಷ ಈ ಪ್ರದೇಶಕ್ಕೆ ಬಹಳಷ್ಟು ಪ್ರವಾಸಿಗರನ್ನು ಸೆಳೆಯುತ್ತದೆ.
ಈ ಸ್ಥಳವು NH 212 ಕೋಝಿಕ್ಕೋಡ್ – ಮೈಸೂರು ರಾಷ್ಟ್ರೀಯ ಹೆದ್ದಾರಿಯೊಂದಿಗೆ ವಿವಿಧ ಸ್ಥಳಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.
ಸುಲ್ತಾನ್ ಬತ್ತೇರಿ ಎಲ್ಲಿದೆ?
ಕಲ್ಪೆಟ್ಟದಿಂದ 26 ಕಿ.ಮೀ ದೂರದಲ್ಲಿ, ಕೋಜಿಕೋಡ್‌ನಿಂದ 99 ಕಿ.ಮೀ, ಊಟಿಯಿಂದ 95 ಕಿ.ಮೀ ಮತ್ತು ಮೈಸೂರಿನಿಂದ 116 ಕಿ.ಮೀ ದೂರದಲ್ಲಿದೆ. ಹಿಂದೆ ಸುಲ್ತಾನ್ ಬತ್ತೇರಿ ಎಂದು ಕರೆಯಲಾಗುತ್ತಿದ್ದ ಸುಲ್ತಾನ್ ಬತ್ತೇರಿ, ಕೇರಳದ ವಯನಾಡ್ ಜಿಲ್ಲೆಯ ಒಂದು ಪಟ್ಟಣ ಮತ್ತು ಪುರಸಭೆಯಾಗಿದೆ. ಸಮುದ್ರ ಮಟ್ಟದಿಂದ 930 ಮೀಟರ್ ಎತ್ತರದಲ್ಲಿದೆ ಇದು ಕೇರಳದ ಒಂದು ಗಿರಿಧಾಮ ಮತ್ತು ಕೇರಳದ ಜನಪ್ರಿಯ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.
ಸುಲ್ತಾನ್ ಬತ್ತೇರಿ ಭವ್ಯವಾದ ಸೌಂದರ್ಯ ಮತ್ತು ಮಸಾಲೆ ತೋಟಗಳಿಗೆ ಹೆಸರುವಾಸಿಯಾಗಿದೆ. ಹಚ್ಚ ಹಸಿರಿನ ಬೆಟ್ಟಗಳು ಮತ್ತು ತಂಪಾದ ಹವಾಮಾನವನ್ನು ಇಲ್ಲಿ ಆಹ್ಲಾದಿಸಬಹುದು. 13 ನೇ ಶತಮಾನದಲ್ಲಿ ನಿರ್ಮಿಸಲಾದ ಜೈನ ದೇವಾಲಯವು ಪಟ್ಟಣದ ಪ್ರಮುಖ ಆಕರ್ಷಣೆಯಾಗಿದೆ. ಗಣಪತಿ ದೇವಸ್ಥಾನ ಮತ್ತು ಮರಿಯಮ್ಮನ್ ದೇವಾಲಯವು ಪಟ್ಟಣದ ಇತರ ಆಕರ್ಷಣೆಗಳು. ಗಣಪತಿ ದೇವಾಲಯವು ಎಂಟು ಶತಮಾನಗಳಷ್ಟು ಹಳೆಯದಾದ ದೇವಾಲಯವಾಗಿದ್ದು, ಗಣೇಶನಿಗೆ ಅರ್ಪಿತವಾಗಿದೆ, ಇದು ಬುಡಕಟ್ಟು ಜನರಿಗೆ ಪೂಜಾ ಸ್ಥಳವಾಗಿದೆ.
ತಲುಪುವುದು ಹೇಗೆ?
ಸುಲ್ತಾನ್ ಬತ್ತೇರಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕೋಜಿಕೋಡ್‌ನ ಕರಿಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇದು 111 ಕಿ.ಮೀ ದೂರದಲ್ಲಿದೆ. ಕೋಜಿಕೋಡ್ ಹತ್ತಿರದ ರೈಲುಮಾರ್ಗವಾಗಿದ್ದು, ಇದು 100 ಕಿ.ಮೀ ದೂರದಲ್ಲಿದೆ. ಸುಲ್ತಾನ್ ಬತ್ತೇರಿ ಮೈಸೂರು, ಬೆಂಗಳೂರು, ಕೋಜಿಕೋಡ್, ಊಟಿ, ಕೊಯಮತ್ತೂರು, ಮಂಗಳೂರು, ಕಣ್ಣೂರು, ತಲಚೇರಿ ಮತ್ತು ಕಾಸರಗೋಡುಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ.
ಸುಲ್ತಾನ್ ಬತ್ತೇರಿ ವಯನಾಡ್ ಜಿಲ್ಲೆಯ ಅತಿದೊಡ್ಡ ಸಾರಿಗೆ ಕೇಂದ್ರವಾಗಿದೆ. ಇದು ಕರ್ನಾಟಕ ರಾಜ್ಯದ ಗಡಿಯ ಸಮೀಪದಲ್ಲಿದೆ. ಸುಲ್ತಾನ್ ಬತ್ತೇರಿಯಲ್ಲಿ ಕೇರಳದ ಪ್ರಮುಖ ಸಾರಿಗೆ ಡಿಪೋ ಇದೆ. ಕೋಜಿಕೋಡ್, ಊಟಿ ಮತ್ತು ಬೆಂಗಳೂರಿಗೆ ಬಸ್ಸುಗಳು ಈ ಡಿಪೋದಿಂದ ಪ್ರಾರಂಭವಾಗುತ್ತವೆ. ಪಟ್ಟಣದಲ್ಲಿ ಸ್ಥಳೀಯ ಪ್ರಯಾಣಿಕರಿಗಾಗಿ ಎರಡು ಸಣ್ಣ ಬಸ್ ನಿಲ್ದಾಣಗಳಿವೆ. ಪೆರಿಯಾ ಘಾಟ್ ರಸ್ತೆ ಮನಂತವಾಡಿಯನ್ನು ಕಣ್ಣೂರು ಮತ್ತು ತಲಚೇರಿಗೆ ಸಂಪರ್ಕಿಸುತ್ತದೆ.