ಬೆಂಗಳೂರು: ಜಲ ಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರ ಕಾರ್ಯತಂತ್ರಕ್ಕೆ ಬಿಜೆಪಿಯ ಭದ್ರಕೋಟೆಯಲ್ಲಿ ಕೈ ಅರಳಿದ್ದು, ವಿ.ಎಸ್.ಉಗ್ರಪ್ಪ ಗೆದ್ದಿದ್ದಾರೆ. ಈ ಮೂಲಕ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಶಾಸಕ ಶ್ರೀರಾಮುಲು, ಜನಾರ್ದನ ರೆಡ್ಡಿ ಅವರ ಬಳ್ಳಾರಿ ಕೋಟೆಯನ್ನು ಉರುಳಿಸಿ ಬಳ್ಳಾರಿಯಲ್ಲಿ ಧೂಳೆಬ್ಬಿಸಿದ್ದಾರೆ.
ಚುನಾವಣೆಗೂ ಮುನ್ನ ಬಳ್ಳಾರಿ ಲೋಕಸಭಾ ಉಪಚುನಾವಣೆಯ ಅಭ್ಯರ್ಥಿಯಾಗಿ ಯಾರನ್ನು ಆಯ್ಕೆ ಮಾಡಬೇಕೆಂಬುದು ಕಾಂಗ್ರೆಸ್‍ಗೆ ದೊಡ್ಡ ತಲೆನೋವಾಗಿತ್ತು. ಏಕೆಂದರೆ ಬಳ್ಳಾರಿಯಲ್ಲಿ ಬಿಜೆಪಿ ಗೆಲುವಿಗಾಗಿ ಟೊಂಕ ಕಟ್ಟಿದ್ದ ನಾಯಕ ಸಮುದಾಯದ ಪ್ರಬಲ ಮುಖಂಡ ಶ್ರೀರಾಮುಲು ವಿರುದ್ಧ ಅದೇ ಜನಾಂಗದ ಅಭ್ಯರ್ಥಿ ಹಾಕುವ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿತ್ತು. ಅಲ್ಲದೇ ಈ ಮೊದಲು ಶಾಸಕ ನಾಗೇಂದ್ರ ಸಹೋದರನನ್ನು ಕಾಂಗ್ರೆಸ್ ಅಭ್ಯರ್ಥಿಯೆಂದು ಹೇಳಲಾಗುತ್ತಿತ್ತು. ಆದರೆ ಸ್ಥಳೀಯ ನಾಯಕರಲ್ಲಿ ನಾಗೇಂದ್ರ ಸಹೋದರನ ವಿರುದ್ಧ ವೈಮನಸ್ಸಿದ್ದ ಕಾರಣ ಕಾಂಗ್ರೆಸ್ ಅಂತಿಮವಾಗಿ ಮತ್ತೊಬ್ಬ ಪ್ರಮುಖ ನಾಯಕ ಸಮುದಾಯ ಮುಖಂಡರಾದ ವಿ.ಎಸ್.ಉಗ್ರಪ್ಪನವರೇ ಸೂಕ್ತ ಎನ್ನುವ ನಿರ್ಧಾರಕ್ಕೆ ಡಿಕೆ ಶಿವಕುಮಾರ್ ಬಂದಿದ್ದರು. ಈ ಪ್ರಸ್ತಾಪಕ್ಕೆ ಆರಂಭದಲ್ಲೇ ಪಕ್ಷದಲ್ಲೇ ವಿರೋಧ ಕೇಳಿ ಬಂದಿತ್ತು. ಕೊನೆಗೆ ರಾಹುಲ್ ಗಾಂಧಿ ಅವರ ಮನ ಒಲಿಸಿದ ಪರಿಣಾಮ ಉಗ್ರಪ್ಪ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಇದನ್ನೂ ಓದಿ: ರಾಮುಲು ಅಣ್ಣ ಎಲೆಕ್ಷನ್ ಶಾಂತಿಯುತವಾಗಿ ನಡೆಸಿಕೊಟ್ಟಿದ್ದಾರೆ- 3 ಜನರಿಗೆ ಡಿಕೆಶಿಯಿಂದ ಥ್ಯಾಂಕ್ಸ್
Advertisement
Advertisement
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಲ್ಲಿ ನಡೆದ ಬಳ್ಳಾರಿ ಉಪಚುನಾವಣೆ ಉಸ್ತುವಾರಿಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಿದ್ದು ಪ್ರಮುಖ ತಿರುವು ಪಡೆದುಕೊಂಡಿತು. ಚುನಾವಣೆಯ ಕಾರ್ಯತಂತ್ರದ ಭಾಗವಾಗಿ ಒಟ್ಟು ಮಾಜಿ ಸಚಿವರು, ಹಾಲಿ ಶಾಸಕರು ಹಾಗೂ ಸಂಸದರು ಸೇರಿದಂತೆ 52 ನಾಯಕರನ್ನು ಬಳ್ಳಾರಿಗೆ ಕೆಪಿಸಿಸಿ ನಿಯೋಜಿಸಿತ್ತು. ಇದನ್ನೂ ಓದಿ: ತೆರೆಮರೆಯಲ್ಲಿ ಶ್ರೀರಾಮುಲುಗೆ ಖೆಡ್ಡಾ ತೋಡಿದ್ರಾ ಕುಚುಕು ಗೆಳೆಯ?
Advertisement
ಶಾಸಕ ಶ್ರೀರಾಮುಲು ವಿರುದ್ಧ ಡಿ.ಕೆ.ಶಿವಕುಮಾರ್ ಅವರು ತಂತ್ರವನ್ನು ಮತದಾನದವರೆಗೂ ಕಾಯ್ದುಕೊಂಡರು. ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಂದುಗೂಡಿದ ಸಚಿವರು, ಚುನಾವಣೆಯನ್ನು ಪ್ರಬಲವಾಗಿ ಎದುರಿಸಿದರು. ಡಿ.ಕೆ.ಶಿವಕುಮಾರ್ ಅವರು ಮೈತ್ರಿ ಸರ್ಕಾರದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅಷ್ಟೇ ಅಲ್ಲದೆ ಶ್ರೀರಾಮುಲು ಗೌಡ ಜಾತಿ ಆಧಾರಿತ ಹೇಳಿಕೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಶ್ರೀರಾಮುಲು ಅಣ್ಣ ಎಂದು ಗೌರವ ನೀಡಿಯೇ ಟಾಂಗ್ ನೀಡತೊಡಗಿದರು.
Advertisement
ಇದರ ಜೊತೆಯಲ್ಲಿ ಶಿವಕುಮಾರ್ ಲಿಂಗಾಯತ ಧರ್ಮ ವಿಚಾರಕ್ಕೆ ನಾವು ಕೈ ಹಾಕಿ ತಪ್ಪು ಮಾಡಿದ್ದೇವೆ. ಧರ್ಮ ಒಡೆಯಲು ಹೋಗಿಯೇ ನಾವು ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಕಾಣುವಂತಾಯಿತು. ಈ ವಿಚಾರದದಲ್ಲಿ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು. ಮತಯಾಚನೆ ಮಾಡುವಾಗಲೂ ಡಿಕೆಶಿವಕುಮಾರ್ ಲಿಂಗಾಯದ ಸಮುದಾಯಗಳ ಜನರ ಜೊತೆ ಕ್ಷಮೆ ಕೇಳಿದ್ದರು. ಕ್ಷಮೆ ಕೇಳಿದ ಪರಿಣಾಮ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಹಿಂದೆ ಸರಿದಿದ್ದ ಲಿಂಗಾಯತ ಸಮುದಾಯದ ಜನ ಮತ್ತೆ ಕೈ ಹಿಡಿದ ಕಾರಣ ಉಗ್ರಪ್ಪ ಜಯಗಳಿಸಲು ನೆರವಾಯಿತು ಎನ್ನುವ ವಿಶ್ಲೇಷಣೆ ಕೇಳಿಬಂದಿದೆ. ಇದನ್ನೂ ಓದಿ: ಸೋಲು ಅನಾಥ, ನಾನೇ ಬಳ್ಳಾರಿ ಸೋಲಿನ ಹೊಣೆ ಹೊರುತ್ತೇನೆ: ಶ್ರೀರಾಮುಲು
ನಾನು ಚೆಸ್ ಆಡಿಯೇ ಚೆಕ್ ಕೊಡುತ್ತೇನೆ ಎಂದು ಹೇಳಿದ್ದ ಡಿಕೆಶಿ ಬಳ್ಳಾರಿ ಶಾಸಕರಿಗೆ ಟಾರ್ಗೆಟ್ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಮೂಲಕವೇ ಟಾರ್ಗೆಟ್ ಅಸ್ತ್ರವನ್ನು ಪ್ರಯೋಗಿಸಿದ್ದರು. ಯಾರು ಅತಿ ಹೆಚ್ಚು ಲೀಡ್ ತಂದುಕೊಡುತ್ತಾರೋ ಅವರಿಗೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡಲಾಗುವುದು ಎಂದು ಸಿದ್ದರಾಮಯ್ಯ ಸಭೆ ನಡೆಸಿ ಟಾರ್ಗೆಟ್ ನೀಡಿದ್ದರು. ಈ ಸಭೆಯಲ್ಲಿ ಡಿಕೆ ಶಿವಕುಮಾರ್ ಸಹ ಭಾಗಿಯಾಗಿದ್ದರು. ಮಂತ್ರಿಗಿರಿ ಸಿಗುತ್ತದೆ ಎನ್ನುವ ಕಾರಣಕ್ಕೆ ಶಾಸಕರು ಮತ್ತು ಕಾರ್ಯಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೆ ತಳ್ಳಿ ಒಗ್ಗಟ್ಟಾಗಿ ಹೋರಾಡಿದ ಪರಿಣಾಮ ಬಳ್ಳಾರಿಯಲ್ಲಿ ಕಾಂಗ್ರೆಸ್ ಈಗ ನಗೆಯನ್ನು ಬೀರಿದೆ.
ಕಮಲ ಸೋಲಿಗೆ ಕಾರಣಗಳೇನು?:
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದ ಜನಾರ್ದನ ರೆಡ್ಡಿ, ನನ್ನ ಶಾಪದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನನ್ನು ಕಳೆದುಕೊಂಡರು ಎಂದಿದ್ದರು. ಈ ಹೇಳಿಕೆಗೆ ರಾಜಕೀಯ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಜೊತೆ ಬಿಜೆಪಿಯ ಅನೇಕ ನಾಯಕರು ಕೂಡ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ್ದರು. ಜನಾರ್ದನ ರೆಡ್ಡಿ ಹೇಳಿಕೆಗಳನ್ನೇ ಕಾಂಗ್ರೆಸ್ ನಾಯಕರು, ಶಾಸಕರು ಚುನಾವಣಾ ಪ್ರಚಾರದ ಅಸ್ತ್ರ ಪ್ರಯೋಗಿಸಿದರು. 2013ರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಜನಾರ್ದನ ರೆಡ್ಡಿ ಅವರೇ ಕಾರಣವಾಗಿದ್ದರು. ಈಗಲೂ ಅವರ ಹೇಳಿಕೆಯಿಂದ ಮತ್ತೆ ಸೋಲಬೇಕಾಯಿತು ಎನ್ನುವುದು ಬಿಜೆಪಿ ವಲಯದಲ್ಲಿ ಭಾರೀ ಚರ್ಚೆ ಆಗುತ್ತಿದೆ.
ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರ ಪ್ರಚಾರದಲ್ಲಿ ಶ್ರೀರಾಮುಲು ಅವರು ಏಕಾಂಗಿಯಾಗಿ ಹೋರಾಡಿದರು. ಬಳ್ಳಾರಿ ಉಪಚುನಾವಣೆ ಬಗ್ಗೆ ಬಿಜೆಪಿ ನಾಯಕರು ನಿರ್ಲಕ್ಷ್ಯ ತೋರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪುತ್ರ ಬಿ.ವೈ.ರಾಘವೇಂದ್ರ ಪರ ಪ್ರಚಾರಕ್ಕೆ ಇಳಿದು, ಸ್ವ ಕ್ಷೇತ್ರದ ಉಳಿವಿಗಾಗಿ ಹೋರಾಡಿದರು.
ಉಪ ಚುನಾವಣೆ ಬಳಿಕ ಶ್ರೀರಾಮುಲು ಅವರೇ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಳ್ಳಾರಿಯಲ್ಲಿ ಶಾಸಕ ಸೋಮಣ್ಣ ಪ್ರಚಾರ ಮಾಡಿದ್ದರು. ಇದರಿಂದಾಗಿ ಬಿಜೆಪಿ ವಲಯದಲ್ಲಿ ಒಡಕು ಉಂಟಾಗಿತ್ತು. ಸೋಮಣ್ಣ ಅವರ ಹೇಳಿಕೆಯಿಂದ ವಿಚಲಿತಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರು ಶ್ರೀರಾಮುಲು ಬೆನ್ನಿಗೆ ನಿಲ್ಲಲು ಹಿಂದೇಟು ಹಾಕಿದರು ಎನ್ನುವ ವಿಶ್ಲೇಷಣೆಯೂ ಕೇಳಿಬರುತ್ತಿದೆ.
ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಸಹೋದರರ 14 ವರ್ಷಗಳ ಆಟಕ್ಕೆ ಕಾಂಗ್ರೆಸ್ ಟ್ರಬಲ್ ಶೂಟರ್ ಬ್ರೆಕ್ ಹಾಕಿದರು ಎನ್ನಲಾಗುತ್ತಿದೆ. ಅಷ್ಟೇ ಬದಾಮಿ ವಿಧಾನಸಭಾ ಚುನಾವಣೆ ಸೋಲಿನ ಬಳಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎರಡನೇ ದೊಡ್ಡ ಸೋಲನ್ನು ಶ್ರೀರಾಮುಲು ಬಳ್ಳಾರಿಯಲ್ಲಿ ಅನುಭವಿಸಿದ್ದಾರೆ. ಒಂದು ಕಾಲದಲ್ಲಿ ಗೆಳೆಯರಾಗಿದ್ದ ಹಾಗೂ ಹಾಲಿ ಶಾಸಕರಾದ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರಿಂದಲೇ ಶ್ರೀರಾಮುಲು ವಿರುದ್ಧವೇ ಪ್ರಚಾರ ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv