ನವದೆಹಲಿ: ಒಡಿಶಾ ತೀರಕ್ಕೆ ಫೋನಿ ಚಂಡಮಾರುತ ಶುಕ್ರವಾರ ಬೆಳಗ್ಗೆ ಅಪ್ಪಳಿಸಿದೆ. ಗಂಟೆಗೆ 200 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುತ್ತಿದ್ದು ಜನ ತತ್ತರಿಸಿ ಹೋಗಿದ್ದಾರೆ. ಈ ಚಂಡಮಾರುತಕ್ಕೆ ಫೋನಿ ಎಂದು ಹೆಸರನ್ನು ನೀಡಿದ್ದು ಬಾಂಗ್ಲಾದೇಶ. ಸಂಸ್ಕøತದಲ್ಲಿ ಫಣಿ ಎಂದರೆ ಹಾವಿನ ಹೆಡೆ ಎಂದು ಕರೆಯಲಾಗುತ್ತದೆ. ಬಂಗಾಳಿ ಭಾಷಿಯಲ್ಲಿ ಫಣಿಯನ್ನು ಫೋನಿ ಎಂದು ಉಚ್ಛಾರ ಮಾಡಲಾಗುತ್ತದೆ. ಈ ಕಾರಣಕ್ಕೆ ಈ ಚಂಡಮಾರುತಕ್ಕೆ ಫೋನಿ ಹೆಸರನ್ನು ಇಡಲಾಗಿದೆ.
ಈ ಚಂಡ ಮಾರುತಕ್ಕೆ ಬಾಂಗ್ಲಾ ನೀಡಿದ ಹೆಸರನ್ನು ಯಾಕೆ ಇಡಬೇಕು? ಭಾರತಕ್ಕೆ ಅಪ್ಪಳಿಸಿದ ಈ ಚಂಡಮಾರುತಕ್ಕೆ ಭಾರತದ ಹೆಸರು ನೀಡಬಹುದಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಜಾಗತಿಕ ಹವಾಮಾನ ಸಂಸ್ಥೆ ರೂಪಿಸಿ ವ್ಯವಸ್ಥೆಯನ್ನು ತಿಳಿದುಕೊಂಡರೆ ಚಂಡಮಾರುತಕ್ಕೆ ಯಾಕೆ ಈ ಹೆಸರು ಬಂದಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.
Cyclone foni destroyed every thing in Odisha pic.twitter.com/0T6OvvOpJB
— Aakash Pattanaik (@aakashpattanaik) May 3, 2019
ಹೆಸರು ಹೇಗೆ ನೀಡಲಾಗುತ್ತದೆ?
ಜಾಗತಿಕ ಹವಾಮಾನ ಸಂಸ್ಥೆ ಒಂದು ವ್ಯವಸ್ಥೆ ರೂಪಿಸಿದೆ. ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಳ್ಳುವ ಉಷ್ಣ ವಲಯದ ಚಂಡಮಾರುತಕ್ಕೆ ಈ ಪ್ರದೇಶದಲ್ಲಿರುವ ಭಾರತ, ಶ್ರೀಲಂಕಾ, ಮಾಲ್ದೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಥಾಯ್ಲೆಂಡ್ ದೇಶಗಳು ಹೆಸರನ್ನು ಆಯ್ಕೆ ಮಾಡಿ ಉಷ್ಣ ವಲಯದ ಪ್ರಾದೇಶಿಕ ಚಂಡಮಾರುತ ಸಮಿತಿಗೆ ಕಳುಹಿಸುತ್ತವೆ. ಈ ದೇಶಗಳು ಕಾಲ ಕಾಲಕ್ಕೆ ಒಂದೊಂದು ಹೆಸರನ್ನು ಶಿಫಾರಸು ಮಾಡಬೇಕಾಗುತ್ತದೆ. ಈ ಹೆಸರುಗಳ ಪಟ್ಟಿಯಿಂದ ಚಂಡಮಾರುತದ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಈ ಎಂಟು ರಾಷ್ಟ್ರಗಳು ತಲಾ ಎಂಟು ಹೆಸರುಗಳನ್ನು ಕಳುಹಿಸಿದ್ದು, ಈ 64 ಹೆಸರುಗಳ ಪಟ್ಟಿಯಿಂದ ಈ ಬಾರಿ ಫೋನಿ ಹೆಸರನ್ನು ಆಯ್ಕೆ ಮಾಡಲಾಗಿದೆ.
2018ರಲ್ಲಿ ತಿತ್ಲಿ ಚಂಡಮಾರುತ ಆಂಧ್ರ ಮತ್ತು ಒಡಿಶಾಕ್ಕೆ ಅಪ್ಪಳಿಸಿತ್ತು. ಈ ಹೆಸರನ್ನು ಪಾಕಿಸ್ತಾನ ನೀಡಿತ್ತು. 2017ರಲ್ಲಿ ಓಖಿ ಚಂಡಮಾರುತವು ಕೇರಳ ಮತ್ತು ತಮಿಳುನಾಡಿನಲ್ಲಿ ಹಾನಿ ಮಾಡಿತ್ತು. ಓಖಿ ಹೆಸರನ್ನು ಬಾಂಗ್ಲಾದೇಶ ನೀಡಿತ್ತು.
ಭಾರತ ಅಗ್ನಿ, ಆಕಾಶ, ಬಿಜ್ಲಿ, ಜಲ, ಲೆಹರ್, ಮೇಘ, ಸಾಗರ್ ಹೆಸರನ್ನು ಶಿಫಾರಸು ಮಾಡಿದೆ. ಮುಂದಿನ ಚಂಡಮಾರುತಕ್ಕೆ ಭಾರತ ಶಿಫಾರಸು ಮಾಡಿರುವ ‘ವಾಯು’ ಹೆಸರನ್ನು ಇಡಲಾಗುತ್ತದೆ.
ಹೆಸರು ಇಡೋದು ಯಾಕೆ?
ಚಂಡಮಾರುತ ಪ್ರತಿ ವರ್ಷ ಬರುತ್ತಲೇ ಇರುತ್ತದೆ. ಆದರೆ ಯಾವ ಚಂಡಮಾರುತ ಎಂದು ಸುಲಭವಾಗಿ ನೆನಪಿನಲ್ಲಿರಲು ಇವುಗಳಿಗೆ ಹೆಸರನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಈ ಹಿಂದಿನ ಚಂಡಮಾರುತಕ್ಕೂ ಹೋಲಿಕೆ ಮಾಡಿ ಹಾನಿಯನ್ನು ಅಂದಾಜು ಮಾಡಲು ಆಗುತ್ತದೆ.