ಬೀಜಿಂಗ್: ಜಗತ್ತಿನಲ್ಲಿ ನಡೆದ ಯುದ್ಧಗಳಿಂದಾಗಿ ಸಾವನ್ನಪ್ಪುವುದಕ್ಕಿಂತ ಹೆಚ್ಚಾಗಿ ಮನಷ್ಯರು ಸೊಳ್ಳೆ ಕಡಿತದಿಂದ ಮೃತರಾಗುತ್ತಾರೆ. ಹೀಗಾಗಿ ಸೊಳ್ಳೆಗಳ ಸರ್ವನಾಶಕ್ಕೆ ಚೀನಾ ಹೊಸ ಅಸ್ತ್ರವನ್ನು ಬಳಸಲು ಸಿದ್ಧತೆ ನಡೆಸುತ್ತಿದೆ.
ಹೌದು. ಚೀನಾದ ಬೀಜಿಂಗ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ(ಬಿಟಿಐ) ಪ್ರಯೋಗಾಲಯದಲ್ಲಿ ಸೊಳ್ಳೆಗಳ ನಿರ್ನಾಮಕ್ಕೆಂದು `ರಾಡಾರ್’ ಎಂಬ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿದ್ದು, ಪರೀಕ್ಷೆಯ ವೇಳೆ ಪ್ರಯೋಗ ಯಶಸ್ವಿಯಾಗಿದೆ.
ರಾಡಾರ್ ತಂತ್ರಜ್ಞಾನವು ಕ್ಷಿಪಣಿ, ರಹಸ್ಯ ವಿಮಾನಗಳನ್ನು ಪತ್ತೆ ಹಚ್ಚುವ ಮಾದರಿಯಲ್ಲೇ ಸೊಳ್ಳೆಗಳ ವಿರುದ್ಧ ಹೋರಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಮಲೇರಿಯಾದಿಂದ ಸುಮಾರು 10 ಲಕ್ಷ ಜನ ಸಾವಿಗೀಡಾಗಿದ್ದಾರೆಂದು ವರದಿ ಮಾಡಿತ್ತು. ಇಂತಹ ಸೊಳ್ಳೆಗಳ ಕಾಟದಿಂದ ಮುಕ್ತವಾಗಲು ರಾಡಾರ್ ತಂತ್ರಜ್ಞಾನ ಬಳಸಲು ಬಿಟಿಐ ಸಜ್ಜಾಗಿದೆ.
ಸೊಳ್ಳೆಗಳನ್ನು ಪತ್ತೆ ಮಾಡುವುದು ಹೇಗೆ?: ಇಷ್ಟು ದೊಡ್ಡ ತಂತ್ರಜ್ಞಾನದಿಂದ ಸಣ್ಣ ಗಾತ್ರವಿರುವ ಸೊಳ್ಳೆಗಳನ್ನು ಪತ್ತೆ ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ರಾಡಾರ್ ನಿಂದ ಬೇರೆ ಬೇರೆ ಫ್ರೀಕ್ಷೆನ್ಸಿಗಳಲ್ಲಿ ಎಲೆಕ್ಟ್ರೋಮ್ಯಾಗ್ನಟಿಕ್ ಎಂಬ ಅಲೆಗಳನ್ನು ಹೊರಡಿಸಲಾಗುತ್ತದೆ. ಈ ಅಲೆಗಳು ಸುಮಾರು 2 ಕೀ.ಮೀ ದೂರದ ವ್ಯಾಪ್ತಿಯಲ್ಲಿ ಎಲ್ಲೇ ಸೊಳ್ಳೆಗಳು ಕಂಡುಬಂದರೂ ಅವುಗಳಿಗೆ ಬಡಿದು ರಾಡಾರ್ ಗೆ ಸಂದೇಶ ತಲುಪಿಸುತ್ತದೆ. ಈ ವಿಧಾನದ ಮೂಲಕ ಒಂದು ಪ್ರದೇಶದಲ್ಲಿ ಸೊಳ್ಳೆಗಳ ಪ್ರಮಾಣವನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ.
ಸರ್ವನಾಶ ಹೇಗೆ?: ಒಂದು ಪ್ರದೇಶದಲ್ಲಿ ಸೊಳ್ಳೆಗಳನ್ನು ಪತ್ತೆ ಮಾಡಿದ ಬಳಿಕ ಅವುಗಳು ಹೆಚ್ಚಿರುವ ಪ್ರದೇಶದಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾಶ ಮಾಡಬಹುದು. ಒಂದು ಪ್ರದೇಶದಿಂದ ಸೊಳ್ಳೆಗಳು ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗುತ್ತವೆ. ಈ ವೇಳೆ ರಾಡಾರ್ ತಂತ್ರಜ್ಞಾನದ ಮೂಲಕ ಅವುಗಳನ್ನು ಪತ್ತೆ ಹಚ್ಚಿ ಅಲ್ಲಿನ ಜನರಿಗೆ ಮಾಹಿತಿ ನೀಡಿ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಬಹುದು.
ಒಟ್ಟಿನಲ್ಲಿ ಇದೀಗ ಚೀನಾ ಸೊಳ್ಳೆಗಳ ಸರ್ವನಾಶ ಮಾಡಲು ಕೈ ಹಾಕಿದ್ದು, ಅದರ ಪ್ರಯೋಗದಲ್ಲಿ ಯಶಸ್ವಿ ಕೂಡ ಆಗಿದೆ.