ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಬಾಹ್ಯಾಕಾಶ ವಲಯದಲ್ಲಿ ಮತ್ತೊಂದು ಸಾಧನೆಗೆ ಮುಂದಡಿಯಿಟ್ಟಿದೆ. 2040 ಕ್ಕೆ ಚಂದ್ರನಲ್ಲಿ ಮಾನವನ ಹೆಜ್ಜೆ ಗುರುತು ಮೂಡಿಸುವ ಗುರಿ ಹೊಂದಿರುವ ಇಸ್ರೋ, ಅದಕ್ಕೆ ಪೂರಕವಾಗಿ 2027ಕ್ಕೆ ಚಂದ್ರಯಾನ-4 ಉಡಾವಣೆಗೆ ಸಜ್ಜಾಗಿದೆ. ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚು ಮಾಡುವ ಇರಾದೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಚಂದ್ರಯಾನ-4 ಯೋಜನೆಗೆ ಹಸಿರು ನಿಶಾನೆ ತೋರಿದೆ. ಹಾಗಿದ್ರೆ ಚಂದ್ರಯಾನ-3ಕ್ಕಿಂತ ಚಂದ್ರಯಾನ-4 ಹೇಗೆ ವಿಭಿನ್ನ? ತಯಾರಿ ಹೇಗಿದೆ? ಚಂದ್ರಯಾನ 4 ಗಗನಯಾತ್ರಿಗಳಿಗೆ ಹೇಗೆ ಸಹಕಾರಿಯಾಗಬಹುದು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಚಂದ್ರಯಾನ -4 ಯೋಜನೆಯಡಿ ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವುದಷ್ಟೇ ಅಲ್ಲದೇ, ಅಲ್ಲಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಭೂಮಿಗೆ ತರುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಈ ಯೋಜನೆಯಲ್ಲಿ ಚಂದ್ರಯಾನ- 3ರ ಯೋಜನೆಯಲ್ಲಿದ್ದ ಪ್ರೊಪಲ್ಷನ್ ಮಾಡ್ಯೂಲ್, ಡಿಸೆಂಡರ್ ಮಾಡ್ಯೂಲ್, ಅಸೆಂಡರ್ ಮಾಡ್ಯೂಲ್ ಜತೆಗೆ ಟ್ರಾನ್ಸಫರ್ ಮಾಡ್ಯೂಲ್, ರೀ -ಎಂಟ್ರಿ ಮಾಡ್ಯೂಲ್ ಎಂಬ ಎರಡು ಹೊಸ ಘಟಕಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.
ಈ ಮಿಷನ್ ಯಶಸ್ವಿ ಚಂದ್ರನ ಲ್ಯಾಂಡಿಂಗ್, ಚಂದ್ರನ ಮಾದರಿಗಳ ಸಂಗ್ರಹಣೆ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳಲು ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳನ್ನು ಭೂಮಿಯ ಮೇಲೆ ಪ್ರದರ್ಶನ ಮಾಡುವ ಗುರಿಯನ್ನು ಹೊಂದಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಚಂದ್ರಯಾನ-4 ಯೋಜನೆ ಸೇರಿದಂತೆ ಹಲವಾರು ಮಹತ್ವದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅನುಮೋದನೆಯನ್ನು ಘೋಷಿಸಿದರು. ಚಂದ್ರಯಾನ-4 ಮಿಷನ್ ಅನ್ನು ವಿಸ್ತರಿಸಲಾಗಿದೆ. ಮುಂದಿನ ಹಂತವು ಚಂದ್ರನಿಗೆ ಮಾನವಸಹಿತ ಮಿಷನ್ ಅನ್ನು ಜಾರಿ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಅನುಮೋದಿಸಲಾಗಿದೆ. ವೀನಸ್ ಆರ್ಬಿಟರ್ ಮಿಷನ್, ಗಗನ್‌ಯಾನ್ ಫಾಲೋ-ಆನ್ ಮತ್ತು ಭಾರತೀಯ ಅಂತರಿಕ್ಷ್ ನಿಲ್ದಾಣ ಮತ್ತು ಮುಂದಿನ ಪೀಳಿಗೆ ಲಾಂಚ್ ವೆಹಿಕಲ್ ಅಭಿವೃದ್ಧಿಗೂ ಅನುಮೋದನೆ ನೀಡಲಾಗಿದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಚಂದ್ರಯಾನ-4 ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಪ್ರಮುಖವಾದ ಅಡಿಪಾಯ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಡಾಕಿಂಗ್ ಮತ್ತು ಅನ್‌ಡಾಕಿಂಗ್ ಕಾರ್ಯವಿಧಾನಗಳು, ಸುರಕ್ಷಿತ ಲ್ಯಾಂಡಿಂಗ್ ತಂತ್ರಗಳು ಮತ್ತು ಚಂದ್ರನ ಮಾದರಿಗಳನ್ನು ಭೂಮಿಗೆ ಹಿಂದಿರುಗಿಸುವ ಸಾಮರ್ಥ್ಯ 2040 ರಲ್ಲಿ ಯೋಜಿಸಲಾದ ಮಾನವಸಹಿತ ಚಂದ್ರನ ಲ್ಯಾಂಡಿಂಗ್‌ನ ಭಾರತದ ಗುರಿಯತ್ತ ಪ್ರಮುಖ ಹೆಜ್ಜೆಯಾಗಿದೆ.
2035 ರ ವೇಳೆಗೆ ಭಾರತೀಯ ಅಂತರಿಕ್ಷ್ ನಿಲ್ದಾಣವನ್ನು (ಭಾರತೀಯ ಬಾಹ್ಯಾಕಾಶ ನಿಲ್ದಾಣ) ಸ್ಥಾಪಿಸುವುದು ಮತ್ತು 2040 ರ ವೇಳೆಗೆ ಮಾನವಸಹಿತ ಚಂದ್ರನ ಲ್ಯಾಂಡಿಂಗ್ ಅನ್ನು ಸಾಧಿಸುವುದು ಮತ್ತು ಅದರ ತಾಂತ್ರಿಕ ಸಾಧನೆಗಳನ್ನು ನಿರ್ಮಿಸುವುದು ಭಾರತ ಸರ್ಕಾರ ಹಾಗೂ ಇಸ್ರೋದ ಪ್ರಮುಖ ಉದ್ದೇಶವಾಗಿದೆ.
ಚಂದ್ರಯಾನ 4ಕ್ಕೆ ವೆಚ್ಚವೆಷ್ಟು?
ಚಂದ್ರಯಾನ 4 ಯೋಜನೆಗೆ 2,104.06 ಕೋಟಿ ರೂ. ಖರ್ಚಾಗಲಿದೆ. 2040ರ ಹೊತ್ತಿಗೆ ಚಂದ್ರನ ಅಂಗಳದಲ್ಲಿ ಗಗನಯಾತ್ರಿಗಳನ್ನು ಇಳಿಸಲು ಇಸ್ರೋ ಯೋಜನೆ ಹಾಕಿಕೊಂಡಿದೆ. 2040ರ ಸುಮಾರಿಗೆ ಭೂಮಿಯಿಂದ ಚಂದ್ರನಿಗೆ, ಚಂದ್ರನಿಂದ ಭೂಮಿಗೆ ಸುಲಭವಾಗಿ ಹೋಗಬಹುದಾಗ ಪರಿಸ್ಥಿತಿ ನಿರ್ಮಾಣವಾಗಬೇಕು ಎಂಬುದು ಇದರ ಗುರಿ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶ ನೌಕೆಯ ಅಭಿವೃದ್ಧಿಯ ನೇತೃತ್ವವನ್ನು ವಹಿಸುತ್ತದೆ ಮತ್ತು ಮಿಷನ್ ಅನ್ನು ಮೇಲ್ವಿಚಾರಣೆ ಮಾಡುತ್ತದೆ. 36 ತಿಂಗಳುಗಳ ಟೈಮ್‌ಲೈನ್ ಇದಕ್ಕೆ ನೀಡಲಾಗಿದೆ. ಯೋಜನೆಯು ಉದ್ಯಮ ಮತ್ತು ಶಿಕ್ಷಣದೊಂದಿಗೆ ಸಹಯೋಗವನ್ನು ಒಳಗೊಂಡಿರುತ್ತದೆ, ತಾಂತ್ರಿಕ ಪ್ರಗತಿಗಳು ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತದೆ.
ಚಂದ್ರಯಾನ4ರ ವಿಶೇಷತೆ ಏನು?
ಚಂದ್ರಯಾನ 4ರ ಕಾರ್ಯಾಚರಣೆಯಲ್ಲಿ ಎರಡು ವಿಭಿನ್ನ ರಾಕೆಟ್‌ಗಳಾದ ಹೆವಿ-ಲಿಫ್ಟರ್ LVM-3 ಮತ್ತು PSLV ಬಳಸಲಾಗುತ್ತದೆ. ಇವೆರಡೂ ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತವೆ.
ಚಂದ್ರಯಾನ 4ರ ಗಮನ ಚಂದ್ರನ ಮೇಲೆ ನಿಖರ ಲ್ಯಾಂಡಿಂಗ್, ಮಾದರಿ ಸಂಗ್ರಹಣೆ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳುವುದಾಗಿದೆ. ಇದರ ಮೂಲಕ ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ. ಒಟ್ಟು 5 ಮಾಡ್ಯೂಲ್‌ಗಳನ್ನು ತನ್ನೊಂದಿಗೆ ಚಂದ್ರಯಾನ 4 ಹೊತ್ತೊಯ್ಯಲಿದೆ. ಈ ಎಲ್ಲಾ ಮಾಡ್ಯೂಲ್‌ಗಳು ಒಟ್ಟಾಗಿ ಕೆಲಸ ಮಾಡುತ್ತವೆ ಮತ್ತು ಚಂದ್ರನಿಂದ ಅಗತ್ಯ ಮಾದರಿಗಳನ್ನು ಸಂಗ್ರಹಿಸುತ್ತವೆ. ಇದುವರೆಗೆ ಚೀನಾ ಮತ್ತು ಅಮೆರಿಕ ದೇಶಗಳು ಮಾತ್ರ ಇಂತಹ ಕಠಿಣ ಕಾರ್ಯಾಚರಣೆಯನ್ನು ನಿರ್ವಹಿಸಿವೆ.
ಭಾರತಕ್ಕೆ ಜಪಾನ್ ನೆರವು:
ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಈ ಕುರಿತು ಮಾತನಾಡಿ, ಚಂದ್ರಯಾನ 4 ಕೇವಲ ಚಂದ್ರನಿಂದ ಕಲ್ಲುಗಳನ್ನು ತರುವ ಮಿಷನ್ ಅಲ್ಲ. ಭವಿಷ್ಯದಲ್ಲಿ ಮನುಷ್ಯರು ಚಂದ್ರನಲ್ಲಿಗೆ ಹೋಗಲು ಮತ್ತು ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಲು ಸಾಧ್ಯವಾಗುವಂತಹ ಸಾಮರ್ಥ್ಯವನ್ನು ರಚಿಸುವುದಾಗಿದೆ ಎಂದರು.
ಈ ಯೋಜನೆಯಲ್ಲಿ ಭಾರತ ಮತ್ತು ಜಪಾನ್ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ದೊರೆತಿದೆ. ಇಸ್ರೋ ತನ್ನ ಲ್ಯಾಂಡರ್ ಅನ್ನು ಸಿದ್ಧಪಡಿಸುತ್ತಿದ್ದು, ಚಂದ್ರನ ರೋವರ್‌ನ ಜವಾಬ್ದಾರಿಯನ್ನು JAXA ವಹಿಸಿಕೊಂಡಿದೆ. ಲ್ಯಾಂಡರ್ ರೋವರ್ ಅನ್ನು ಹೊತ್ತೊಯ್ಯುತ್ತದೆ. ಹೀಗಾಗಿ ಎರಡೂ ದೇಶಗಳು ಚಂದ್ರಯಾನ 4ರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ಭಾರತೀಯ ಬಾಹ್ಯಾಕಾಶ ನಿಲ್ದಾಣ:
ಗಗನಯಾನ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣದ (ಬಿಎಎಸ್-1) ಮೊದಲ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪರಿಷ್ಕೃತ ಗಗನಯಾನ ಕಾರ್ಯಕ್ರಮ BAS-1 ಘಟಕ ಸೇರಿದಂತೆ ಎಂಟು ಕಾರ್ಯಾಚರಣೆಗಳನ್ನು ಒಳಗೊಂಡಿದೆ. ಇದು ಡಿಸೆಂಬರ್ 2028ರೊಳಗೆ ಪೂರ್ಣಗೊಳ್ಳಲಿದೆ.
ಗಗನಯಾನ ಕಾರ್ಯಕ್ರಮದ ಒಟ್ಟು ನಿಧಿಯನ್ನು 11,170 ಕೋಟಿ ರೂಪಾಯಿಗಳಿಂದ 20,193 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಗಗನಯಾನದಲ್ಲಿ 3 ಗಗನಯಾತ್ರಿಗಳನ್ನು 400 ಕಿ.ಮೀ ಮೇಲಿನ ಭೂಮಿಯ ಕಕ್ಷೆಗೆ 3 ದಿನಗಳ ಕಾರ್ಯಾಚರಣೆಗಾಗಿ ಕಳುಹಿಸಲಾಗುತ್ತದೆ. ಇದಾದ ನಂತರ ಸಿಬ್ಬಂದಿ ಇರುವ ಮಾಡ್ಯೂಲ್ ಅನ್ನು ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಸಲಾಗುತ್ತದೆ.
ವೀನಸ್ (ಶುಕ್ರ) ಆರ್ಬಿಟರ್ ಮಿಷನ್:
ಈ ಯೋಜನೆಗೆ ಕೇಂದ್ರ ಸರ್ಕಾರ 1,236 ಕೋಟಿ ರೂ.ಗಳ ಬಜೆಟ್ ಮೀಸಲಿಟ್ಟಿದೆ. 2028ರ ಮಾರ್ಚ್‌ನಲ್ಲಿ ಯೋಜನೆ ಪ್ರಾರಂಭವಾಗಲಿದೆ. ಇದರ ಪ್ರಾಥಮಿಕ ಉದ್ದೇಶ ಶುಕ್ರನ ಮೇಲ್ಮೈ ಮತ್ತು ವಾತಾವರಣದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವುದು, ವಾತಾವರಣದ ಮೇಲೆ ಸೂರ್ಯನ ಪ್ರಭಾವದ ಕುರಿತು ಅಧ್ಯಯನ ಮಾಡುವುದಾಗಿದೆ.