ಹಾಸನ: ಮೈಸೂರಿನ ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂಬುದು ಜನರ ಭಾವನೆಯಾಗಿತ್ತು. ಆದರೆ ಅವರಿಗೆ ಟಿಕೆಟ್ ನೀಡದೇ ಇರುವುದು ಪಕ್ಷದ ತೀರ್ಮಾನ. ಈ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಇಚ್ಚಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ಜಿಲ್ಲೆಯ ಬೇಲೂರಿನಲ್ಲಿ ಮಾತನಾಡಿದ ಅವರು, ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಗೆಲುವು ಬಾದಾಮಿ ತಿಂದಷ್ಟು ಸುಲಭವಲ್ಲ. ಚಾಮುಂಡೇಶ್ವರಿಯಲ್ಲಿ ಚಾಮುಂಡಿ ಆಶೀರ್ವಾದ ಸಿಗದು ಎಂಬ ಕಾರಣದಿಂದ ಬದಾಮಿಯ ಬನಶಂಕರಿ ಆಶೀರ್ವಾದ ಪಡೆಯಲು ಹೋಗಿದ್ದಾರೆ. ಆದರೆ ಅವರಿಬ್ಬರು ಅಕ್ಕ-ತಂಗಿಯರು. ಅಕ್ಕನ ಆಶೀರ್ವಾದ ಸಿಗಲ್ಲ ಎಂದಮೇಲೆ ತಂಗಿಯ ಆಶೀರ್ವಾದ ಹೇಗೆ ಸಿಗಲಿದೆ. ಬದಾಮಿ ಕಾಂಗ್ರೆಸ್ ಗೆ ಕಬ್ಬಿಣದ ಕಡಲೆಯಾಗುವುದು ನಿಶ್ಚಿತ ಎಂದರು. ಇದನ್ನೂ ಓದಿ: ಬಾದಾಮಿಯಾದ್ರು ಹುಡುಕಿಕೊಂಡು ಹೋಗಲಿ, ಗೋಡಂಬಿಯಾದ್ರೂ ಹುಡುಕಿಕೊಂಡು ಹೋಗಲಿ ಸೋಲು ಖಚಿತ: ಎಚ್‍ಡಿಕೆ
Advertisement
Advertisement
ಪಕ್ಷ ಕೈಗೊಂಡಿರುವ ತೀರ್ಮಾನದ ಕುರಿತು ನಾನು ಏನನ್ನೂ ಮಾತನಾಡಲಾರೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆಯೇ ಎಂಬ ಪ್ರಶ್ನೆಗೆ ಅದೆಲ್ಲಾ ಚುನಾವಣೆ ಗೆಲ್ಲುವ ಯುದ್ಧ ನೀತಿ. ಫಲಿತಾಂಶ ಹೊರ ಬರುವವರೆಗೂ ಮಾತನಾಡುವುದಿಲ್ಲ ಎಂದಷ್ಟೇ ಹೇಳಿದರು.