ನವದೆಹಲಿ: ಭಾರತೀಯ ಗಡಿ ರಕ್ಷಣಾ ಪಡೆ (ಬಿಎಸ್‍ಎಫ್) ಪಡೆಯ ವಿಶೇಷ ಸ್ನೈಪರ್ಸ್ ತಂಡ ಗಡಿ ನಿಯಂತ್ರಣ ರೇಖೆ ಬಳಿ ಅಕ್ರಮವಾಗಿ ನುಸುಳುತ್ತಿರುವ ಉಗ್ರರನ್ನು ಹತ್ಯೆಗೈದು ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವ ಉಗ್ರರ ಹಲವು ಗುಂಪುಗಳು ಭಾರತಕ್ಕೆ ಪ್ರವೇಶ ಮಾಡಿ ವಿಧ್ವಂಸಕ ಕೃತ್ಯ ನಡೆಸಲು ಸಿದ್ಧರಾಗಿದ್ದಾರೆ ಎಂದು ಭಾರತದ ಗುಪ್ತಚರ ಸಂಸ್ಥೆ ಮಾಹಿತಿ ನೀಡಿದ್ದು, ಅಕ್ರಮ ನುಸುಳುಕೋರರ ದಾಳಿಯನ್ನು ಎದುರಿಸಲು ಬಿಎಸ್‍ಎಫ್ ವಿಶೇಷ ತರಬೇತಿ ನೀಡಿ ಸ್ನೈಪರ್ಸ್ ತಂಡವನ್ನು ತಯಾರು ಮಾಡಿದೆ.
ಆಯ್ಕೆ ಹೇಗೆ?
ಮಧ್ಯಪ್ರದೇಶದ ಇಂದೋರ್ ಕೇಂದ್ರದಲ್ಲಿ ತರಬೇತಿ ಪಡೆಯುವ 100 ಮಂದಿಯಲ್ಲಿ ಓರ್ವ ಸೈನಿಕನನ್ನು ಸ್ನೈಪರ್ಸ್ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಆಯ್ಕೆಯಾದವರನ್ನು ಪ್ರತ್ಯೇಕ ತಂಡವಾಗಿ ರಚಿಸಿ 60 ದಿನಗಳ ಕಾಲ ವಿಶೇಷ ಕಠಿಣ ತರಬೇತಿ ನೀಡಲಾಗುತ್ತದೆ.
ಕಾರ್ಯಾಚರಣೆ ಹೇಗೆ?
ಹೆಚ್ಚಿನ ತರಬೇತಿ ಪಡೆದ ಸೈನಿಕರನ್ನು ಗಡಿ ಭದ್ರತಾ ಪಡೆಯ ವಿಶೇಷ ತಂಡವಾಗಿ ನಿಯೋಜನೆ ಮಾಡಲಾಗುತ್ತದೆ. ಈ ತಂಡ ಉಗ್ರಗಾಮಿಗಳು ಒಳನುಸುಳುವ ಪ್ರಮುಖ ಸ್ಥಳಗಳನ್ನು ಗುರುತಿಸಿ ಅಡಗಿ ಕುಳಿತುಕೊಂಡು ಕಾರ್ಯ ನಿರ್ವಹಿಸುತ್ತದೆ.
ವಿಶೇಷ ವಿನ್ಯಾಸ ಬಟ್ಟೆ: ಉಗ್ರರ ಕಣ್ಣು ತಪ್ಪಿಸಿ ಕಾರ್ಯಾಚರಣೆ ನಡೆಸಲು ಯೋಧರಿಗೆ ವಿಶೇಷ ವಿನ್ಯಾಸ ಮಾಡಲಾಗಿರುವ ಬಟ್ಟೆಯನ್ನು ನೀಡಲಾಗುತ್ತದೆ. ಅರಣ್ಯ, ಹಿಮ ಹಾಗೂ ಬಯಲು ಪ್ರದೇಶಗಳಿಗೆ ಹೊಂದಾಣಿಕೆ ಆಗುವಂತೆ ಬಟ್ಟೆಯನ್ನು ವಿನ್ಯಾಸ ಮಾಡಲಾಗಿರುತ್ತದೆ. ಈ ಯೋಧರು ವಿರೋಧಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಅವರ ವಲಯವನ್ನು ಪ್ರವೇಶ ಮಾಡುವಂತಹ ಸಾಮರ್ಥ್ಯವನ್ನ ಹೊಂದಿರುತ್ತಾರೆ. ಮೊದಲೇ ದಾಳಿ ನಡೆಸಬೇಕಾದ ನಿರ್ಧಿಷ್ಟ ಸ್ಥಳವನ್ನು ಆಯ್ಕೆ ಮಾಡಿ ಗುಂಪಾಗಿ ತೆರಳಿ ಕಾರ್ಯಾಚರಣೆ ನಡೆಸಲಾಗುತ್ತದೆ.
ಒಂದು ಬುಲೆಟ್, ಒಂದು ಗುರಿ: ಸ್ನೈಪರ್ಸ್ ಯೋಧರಿಗೆ `ಒಂದು ಬುಲೆಟ್ ಒಂದು ಟಾರ್ಗೆಟ್’ ನೀಡಲಾಗುತ್ತದೆ. ಒಂದೇ ಬುಲೆಟ್ ನಲ್ಲಿ ಗುರಿಗೆ ನಿಖರವಾಗಿ ಹೊಡೆಯಬೇಕಾಗುತ್ತದೆ.
ಸ್ನೈಪರ್ಸ್ ತಂಡವನ್ನು ಈ ಬಾರಿ ವಿಶೇಷವಾಗಿ ಅಮರನಾಥ ಯಾತ್ರಿಕರ ರಕ್ಷಣೆಗಾಗಿಯೂ ನಿಯೋಜಿಸಲಾಗಿದೆ. ಯಾತ್ರಿಕ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಕಾರಣ ಮುಂಜಾಗೃತವಾಗಿ ಈ ಪಡೆಯನ್ನು ನಿಯೋಜಿಸಲಾಗಿದೆ.
ಕೆಲ ದಿನಗಳ ಹಿಂದೆ ಜಮ್ಮುವಿನ ಸುಂದರ್ ಬನಿ ಪ್ರದೇಶದಲ್ಲಿ ಪಾಕ್ ಸ್ನೈಪರ್ಸ್ ತಂಡದ ದಾಳಿಗೆ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಬಿಎಸ್‍ಎಫ್ ಸಬ್ ಇನ್ಸ್ ಪೆಕ್ಟರ್ ಎಸ್‍ಎನ್ ಯಾದವ್ ಹಾಗೂ ಕಾನ್ ಸ್ಟೇಬಲ್ ವಿ ಪಾಂಡೆ ಹುತಾತ್ಮರಾಗಿದ್ದರು. ರಂಜಾನ್ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಕದನ ವಿರಾಮ ಘೋಷಿಸಿತ್ತು. ಈ ವೇಳೆ ಉಗ್ರರು ದಾಳಿ ನಡೆಸಿ ಯೋಧ ಔರಂಗಜೇಬ್ ಅವರನ್ನು ಅಪಹರಿಸಿ ಹತ್ಯೆ ನಡೆಸಿತ್ತು. ಈ ಪ್ರಕರಣಕ್ಕೆ ತಿರುಗೇಟು ನೀಡಿದ ಸೇನೆ ಸೋಮವಾರ ನಾಲ್ವರು ಉಗ್ರರನ್ನು ಹತ್ಯೆ ಮಾಡಿದೆ.