ನವದೆಹಲಿ: ಉತ್ತರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿರುವ ಬಿಜೆಪಿ ವಿಧಾನಸಭೆಯಲ್ಲಿ ಪಕ್ಷದ ಸ್ಥಾನಗಳನ್ನಷ್ಟೇ ಹೆಚ್ಚಿಕೊಂಡಿಲ್ಲ. ಬದಲಾಗಿ ಮುಂಬರುವ ರಾಷ್ಟ್ರಪತಿ ಚುನಾವಣೆಯ ಮೇಲೂ ಬಿಜೆಪಿಯ ಈ ಗೆಲುವು ಭಾರೀ ಪ್ರಭಾವ ಬೀರಲಿದೆ.
ಉತ್ತರಪ್ರದೇಶದಲ್ಲಿ 325 ಸ್ಥಾನ, ಉತ್ತರಾಖಂಡ್‍ನಲ್ಲಿ 56 ಸ್ಥಾನ, ಮಣಿಪುರದಲ್ಲಿ 21, ಪಂಜಾಬ್‍ನಲ್ಲಿ 18 ಹಾಗೂ ಗೋವಾದಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‍ಡಿಎ ರಾಷ್ಟಪತಿ ಚುನಾವಣೆಗೆ ಹಾದಿ ಸುಗಮಗೊಳಿಸಿಕೊಂಡಿದೆ. ರಾಷ್ಟ್ರಪತಿ ಆಯ್ಕೆಗೆ ಮೋದಿ ಪಡೆ ಬಹುಮತದ ಸನಿಹದಲ್ಲಿ ಬಂದು ನಿಂತಿದೆ. ಜುಲೈಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗುತ್ತಿರುವ ಹನ್ನೆಲೆಯಲ್ಲಿ ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರ ಗರಿಗೆದರಿದೆ.
Advertisement
ಎಷ್ಟು ಮತ ಬೇಕು?
ದೇಶದ ರಾಷ್ಟ್ರಪತಿಯನ್ನು 29 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಪುದುಚೆರಿ ಹಾಗೂ ರಾಜಧಾನಿ ದೆಹಲಿಯ ಎಲ್ಲಾ ಸಂಸದರು ಹಾಗೂ ಶಾಸಕರನ್ನೊಳಗೊಂಡ ಎಲೆಕ್ಟೋರಲ್ ಕಾಲೇಜ್ ಆಯ್ಕೆ ಮಾಡುತ್ತದೆ. ಎಲೆಕ್ಟೋರಲ್ ಕಾಲೇಜ್‍ನ ಒಟ್ಟು ಮತಗಳ ಸಂಖ್ಯೆ 10,98,882. ಇದರಲ್ಲಿ ರಾಷ್ಟಪತಿ ಆಯ್ಕೆಗೆ ಬೇಕಿರುವುದು 5,49,442 ಮತಗಳು.
Advertisement
ಎನ್‍ಡಿಎ ಬಳಿ ಎಷ್ಟಿದೆ?
ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. ಇವರ ಎಲ್ಲ ಮತಗಳು ಸೇರಿದರೆ 10,98,882 ಮತಗಳು ಆಗುತ್ತದೆ. ಹೀಗಾಗಿ ರಾಷ್ಟ್ರಪತಿ ಅಭ್ಯರ್ಥಿ ವಿಜಯಿ ಆಗಲು ಒಟ್ಟು ಮತದ ಅರ್ಧಭಾಗಕ್ಕಿಂತ ಹೆಚ್ಚು ಅಂದರೆ 5,49,442 ಮತಗಳ ಅವಶ್ಯಕತೆಯಿದೆ.
Advertisement
ಉತ್ತರಪ್ರದೇಶದ ಗೆಲುವಿನಿಂದ ಎಲೆಕ್ಟೋರಲ್ ಕಾಲೇಜ್‍ನಲ್ಲಿ ರಾಜ್ಯದ ಬಿಜೆಪಿ ಮತಗಳ ಸಂಖ್ಯೆ 67,600ಕ್ಕೆ ಏರಿದೆ. ಹೀಗಾಗಿ ಸದ್ಯ ಎನ್‍ಡಿಎ ಬಳಿ ಒಟ್ಟು 5,24,920 ಮತಗಳಿವೆ. ರಾಷ್ಟ್ರಪತಿ ಆಯ್ಕೆಗೆ ಎನ್‍ಡಿಎಗೆ ಕೇವಲ 24,522 ಮತಗಳು ಕಡಿಮೆ ಬೀಳಲಿದೆ.
Advertisement
ಒಂದು ವೇಳೆ ಬಿಜು ಜನತಾ ದಳ ಹಾಗೂ ಎಐಎಡಿಎಂಕೆ ಪಕ್ಷಗಳು ಬೆಂಬಲ ನೀಡಿದರೆ ಎನ್‍ಡಿಎ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಲಿದೆ.
ಇದನ್ನೂ ಓದಿ:ರಾಷ್ಟ್ರಪತಿ ರೇಸ್‍ನಲ್ಲಿ ಇನ್ಫಿ ನಾರಾಯಣಮೂರ್ತಿ!