ಬೆಂಗಳೂರು: ಬಳ್ಳಾರಿ ಉಪಚುನಾವಣೆಯಲ್ಲಿ ಶ್ರೀರಾಮುಲು ಸೋಲಿಗೆ ತೆರೆಮರೆಯಲ್ಲಿ ಕುಚುಕು ಗೆಳೆಯ ಜನಾರ್ದನ ರೆಡ್ಡಿ ಹೇಳಿಕೆಯೇ ಮುಳುವಾಯ್ತಾ ಎನ್ನುವ ಚರ್ಚೆಯೊಂದು ಈಗ ಬಳ್ಳಾರಿಯಲ್ಲಿ ಆರಂಭವಾಗಿದೆ.
ಹೌದು, ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 2.43 ಲಕ್ಷಕ್ಕೂ ಅಧಿಕ ಮತ ಪಡೆಯುವ ಮೂಲಕ ಜೆ.ಶಾಂತಾರನ್ನು ಸೋಲಿಸಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿದ್ದಂತೆ ಶಾಸಕ ಶ್ರೀರಾಮುಲು ಬಿಜೆಪಿ ಅಭ್ಯರ್ಥಿ ಹಾಗು ಸೋದರಿ ಜೆ.ಶಾಂತಾ ಪರವಾಗಿ ಏಕಾಂಗಿಯಾಗಿ ಹೋರಾಟ ನಡೆಸಿದ್ದರು. ತಮ್ಮ ರಾಜೀನಾಮೆಯಿಂದ ತೆರವಾದ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಬೇಕೆಂಬ ಹಠವು ಶ್ರೀರಾಮುಲು ಅವರಲ್ಲಿ ಕಂಡಿತ್ತು. ಫಲಿತಾಂಶಕ್ಕೂ ಮುನ್ನ ಶ್ರೀರಾಮುಲು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಕಡಿಮೆ ಅಂತರದಿಂದ ಗೆಲುವು ಕಾಣುತ್ತೇವೆ ಎಂದು ಸ್ಫರ್ಧೆ ಕಠಿಣವಾಗಿದೆ ಎಂದು ಸೂಚನೆಯನ್ನು ನೀಡಿದ್ದರು.
Advertisement
Advertisement
ಬಳ್ಳಾರಿಯಲ್ಲಿ ಅಭ್ಯರ್ಥಿಗಳು ನೆಪಕ್ಕೆ ಮಾತ್ರ. ಇಲ್ಲಿ ಸಚಿವ ಡಿ.ಕೆ.ಶಿವಕುಮಾರ್ ವರ್ಸಸ್ ಶ್ರೀರಾಮುಲು ನಡುವಿನ ಯುದ್ಧವೆಂದೇ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ಕೇಳಿಬಂದಿತ್ತು. ಚುನಾವಣೆಗೂ ಮುನ್ನ ಮಾಜಿ ಸಚಿವ ಜನಾರ್ದನ ರೆಡ್ಡಿ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ ನನ್ನ ಶಾಪದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯರ ಪುತ್ರ ರಾಕೇಶ್ ನಿಧನರಾಗಿದ್ದು ಎಂದು ಹೇಳುವ ಮೂಲಕ ಸಾವಿನಲ್ಲೂ ರಾಜಕೀಯ ಮಾಡಿದ್ದರು. ಇದೇ ಹೇಳಿಕೆಯನ್ನು ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಬಳ್ಳಾರಿ ಜನತೆಯನ್ನು ಭಾವನಾತ್ಮಕವಾಗಿ ಸೆಳೆದುಕೊಂಡರು. ಅಷ್ಟೇ ಅಲ್ಲದೇ ಸಿದ್ದರಾಮಯ್ಯನವರು ಭಾವನಾತ್ಮಕ ಟ್ವೀಟ್ ಮಾಡಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾದರು.
Advertisement
ರೆಡ್ಡಿ ಹೇಳಿಕೆಗೆ ಸ್ವಪಕ್ಷಿಯರಿಂದಲೇ ಖಂಡನೆ ವ್ಯಕ್ತವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಹ ಖಂಡಿಸಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. ಇದಾದ ನಂತರ ರೆಡ್ಡಿ ಕ್ಷಮೆ ಕೇಳಿ ವಿಚಾರವನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು ಕಾಣಬೇಕಾಯಿತು ಎಂದು ವಿಶ್ಲೇಷಣೆ ಕೇಳಿಬಂದಿದೆ. ಪ್ರತಿಯೊಂದು ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡುವ ಜನಾರ್ದನ ರೆಡ್ಡಿ ಉದ್ದೇಶ ಪೂರ್ವಕವಾಗಿಯೇ ಈ ರೀತಿ ಹೇಳಿದ್ರಾ ಎನ್ನುವ ಚರ್ಚೆ ಈಗ ಆರಂಭವಾಗಿದೆ.
Advertisement
ಚರ್ಚೆ ಹುಟ್ಟಿದ್ದು ಹೇಗೆ?
ಶ್ರೀರಾಮುಲು ಬಳ್ಳಾರಿಯಲ್ಲಿ ಮೆರೆಯುತ್ತಿದ್ದಾರೆ. ಆದ್ರೆ ಈ ಅಧಿಕಾರಕ್ಕೆ ಮೂಲ ಕಾರಣವಾದ ಪತಿ ಬಳ್ಳಾರಿಗೆ ಬಾರದೇ ಸಂಕಷ್ಟದಲ್ಲಿದ್ದಾರೆ ಎಂದು ಜನಾರ್ದನ ರೆಡ್ಡಿ ಪತ್ನಿ ಅರುಣಾ ಅಸಮಾಧಾನಗೊಂಡಿದ್ದರಂತೆ. ಈಗ ಶಾಸಕರಾಗಿರುವ ಶ್ರೀರಾಮುಲು ಗೆಳೆಯನ ಸಂಕಷ್ಟದಲ್ಲಿಯೂ ಭಾಗಿ ಅಗುತ್ತಿಲ್ಲ. ಎಂದು ಅರುಣಾ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಹೀಗಾಗಿ ಮತದಾನಕ್ಕೂ ಮುನ್ನ ಜನಾರ್ದನ ರೆಡ್ಡಿ ಪಕ್ಷಕ್ಕೆ ಹಾನಿಯುಂಟು ಮಾಡುವ ಹೇಳಿಕೆಯನ್ನು ನೀಡಿದ್ದಾರೆ ಎನ್ನುವ ಚರ್ಚೆಗಳು ಬಳ್ಳಾರಿಯ ರಾಜಕೀಯ ಅಂಗಳದಲ್ಲಿ ಆರಂಭಗೊಂಡಿವೆ.
ಸೋಲು ಅನಾಥ:
ಫಲಿತಾಂಶ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀರಾಮುಲು, ಸೋಲು ಅನಾಥ, ಸಹೋದರಿ ಶಾಂತ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರಕ್ಕೆ ಬಂದಿದ್ದರು. ಶಾಸಕರಾದ ಸೋಮಣ್ಣ, ಸಿ.ಟಿ.ರವಿ ಸೇರಿದಂತೆ ಅನೇಕ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ ಜಿಲ್ಲೆಯ ಜನರು ನಮ್ಮನ್ನು ತಿರಸ್ಕಾರ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಗೆಲುವಿಗಾಗಿ ಹರಸಾಹಸ ಪಟ್ಟಿದ್ದರು. ಆದರೆ ಭಗವಂತ ನಮಗೆ ಫಲ ಕೊಟ್ಟಿಲ್ಲ. ಆದರೆ ಸರ್ಕಾರವನ್ನು ದುರುಪಯೋಗ ಪಡೆಸಿಕೊಂಡು ವಿ.ಎಸ್.ಉಗ್ರಪ್ಪ ಅವರನ್ನು ಗೆಲ್ಲಿಸಲಾಗಿದೆ. ಜಿಲ್ಲೆಯ ಜನರು ನನಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಈಗ ಕೈ ಬಿಟ್ಟರು ಅಂತಾ ನಾನು ಅವರನ್ನು ದ್ವೇಷಿಸುವುದಿಲ್ಲ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv