ಚಿಕ್ಕಬಳ್ಳಾಪುರ: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸದ್ಯ ಪೊಲೀಸರಿಗೆ ಶರಣಾಗಿರುವ ಆದಿತ್ಯ ರಾವ್, ಈ ಹಿಂದೆ 2018ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದನು. ಆಗ ಈತನನ್ನು ಬೆಂಗಳೂರು ಪೊಲೀಸರು ಹರಸಾಹಸ ಪಟ್ಟು ಹಿಡಿದಿದ್ದರು.
ಉಡುಪಿ ಜಿಲ್ಲೆ ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿ ವಾಸವಾಗಿದ್ದ ಆದಿತ್ಯ ರಾವ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದ. ಉದ್ಯೋಗ ಸಂಬಂಧ ಬೆಂಗಳೂರಿಗೆ ತೆರಳಿದ್ದ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಕೆಲಸದ ಕನಸು ಹೊತ್ತಿದ್ದನು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನಿಗೆ ಸೆಕ್ಯೂರಿಟಿ ಕೆಲಸ ಸಿಗದಿದ್ದಾಗ ಬಾಂಬ್ ಇಡುವುದಾಗಿ ಹುಸಿ ಕರೆ ಮಾಡಿ ಸಿಕ್ಕಿಬಿದ್ದು, 9 ತಿಂಗಳು ಚಿಕ್ಕಬಳ್ಳಾಪುರ ಕಾರಾಗೃಹದಲ್ಲಿದ್ದನು. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!
Advertisement
Advertisement
ಪ್ರಕರಣದ ಹಿನ್ನೆಲೆ ಏನು?
2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆದಿತ್ಯ ರಾವ್ ಸೆಕ್ಯೂರಿಟಿ ಕೆಲಸ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದನು. ಆದರೆ ಆತನಿಗೆ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಸೇಡು ತೀರಿಸಿಕೊಳ್ಳುವ ಸಂಚು ರೂಪಿಸಿದ್ದ ಆರೋಪಿ ಅಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದನು. ಇದನ್ನೂ ಓದಿ: ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ
Advertisement
Advertisement
ಈ ಪ್ರಕರಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆಗ ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಪಿಎಸ್‍ಐ ವರುಣ್ ಕುಮಾರ್ ಸಾಕಷ್ಟು ಹರಸಾಹಸ ಪಟ್ಟು ಆದಿತ್ಯನನ್ನು ಬಂಧಿಸಿದ್ದರು. ಹುಸಿ ಬಾಂಬ್ ಕರೆ ಮಾಡಿದ ಸ್ಥಳದ ಮಾಹಿತಿ ಕಲೆಹಾಕಿ, ರಾಮಮೂರ್ತಿ ನಗರದ ಬಳಿ ಇರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಆದಿತ್ಯ ಮುಖ ಪರಿಚಯ ಆಗಿತ್ತು. ಹೀಗಾಗಿ ಆತನ ಫೋಟೋ ಹಿಡಿದು ಪೊಲೀಸರು ಎಲ್ಲಾ ಕಡೆ ಹುಡುಕಾಟ ಆರಂಭಿಸಿದ್ದರು. ಕೊನೆಗೆ ಪೊಲೀಸರ ಕೈಗೆ ಆದಿತ್ಯ ಮೆಟ್ರೋ ರೈಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದನು. ಕೊನೆಗೆ ಆತನನ್ನು ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಧೀಶರು ಆದಿತ್ಯನಿಗೆ ಸರಿಸುಮಾರು ಒಂದೂವರೆ ವರ್ಷ ಜೈಲುವಾಸ ಶಿಕ್ಷೆ ವಿಧಿಸಿದ್ದರು. ಇದನ್ನೂ ಓದಿ: ಬಾಂಬ್ ತಯಾರಿಸಲು ಉಗ್ರ ಸಂಘಟನೆಯ ಜೊತೆ ಸಂಪರ್ಕಕ್ಕೆ ಯತ್ನಿಸಿದ್ದ ಆದಿತ್ಯ ರಾವ್
ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಒಂಬತ್ತು ತಿಂಗಳು ಸೆರೆವಾಸವನ್ನು ಅನುಭವಿಸಿ ಇತ್ತೀಚೆಗಷ್ಟೇ ಆದಿತ್ಯ ಬಿಡುಗಡೆಯಾಗಿ ಉಡುಪಿ ಸೇರಿದ್ದನು. ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಈಗ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನು ಆದಿತ್ಯ ರಾವ್ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಸೇಡು ತೀರಿಸಿಕೊಳ್ಳುವ ಮನೋಭಾವ ಹೊಂದಿರುವ ವ್ಯಕ್ತಿಯಾಗಿದ್ದು, ತನ್ನ ಹೆಸರು ಸದಾ ಪ್ರಚಲಿತದಲ್ಲಿರಬೇಕು, ತಾನು ಹೆಸರು ಮಾಡಬೇಕು ಎಂದು ಪದೇ ಪದೇ ಇಂತಹ ದುಷ್ಕೃತ್ಯಗಳನ್ನು ಎಸಗಿರಬಹುದು ಅಂತ ಪೊಲೀಸರು ಹೇಳಿದ್ದಾರೆ.