2024ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್ 19 ರಿಂದ ಮೊದಲ ಹಂತದ ಚುನಾವಣೆ ಆರಂಭವಾಗಲಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಚುನಾವಣೆಗೆ ಆಗುವ ಖರ್ಚು ಸಾವಿರಾರು ಕೋಟಿ ರೂ.ಗಳ ಗಡಿ ದಾಟಿದೆ. 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ ಸುಮಾರು 10.45 ಕೋಟಿ ರೂ. ಖರ್ಚಾಗಿತ್ತು. ಆದ್ರೆ 2004ರ ಚುನಾವಣೆಯಿಂದ ಸಾವಿರ ಕೋಟಿ ರೂ.ಗಳ ಗಡಿ ದಾಟಿದೆ. ಈ ಬಾರಿ ಚುನಾವಣೆಗೆ ಒಟ್ಟು 7,000 ಕೋಟಿ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
Advertisement
ಇದು ಜಗತ್ತಿನ ಅತಿ ವೆಚ್ಚದಾಯಕ ಚುನಾವಣೆಗಳಲ್ಲಿ ಒಂದಾಗಿದ್ದು, ಆಯೋಗದ ವೆಚ್ಚದ ಜೊತೆಗೆ ಅಭ್ಯರ್ಥಿಗಳ ಲೆಕ್ಕಕ್ಕೆ ಸಿಗದ ಚುನಾವಣಾ ಖರ್ಚನ್ನು ಲೆಕ್ಕ ಹಾಕಿದರೆ ಹತ್ತಾರು ಸಾವಿರ ಕೋಟಿ ರೂ. ವೆಚ್ಚದ ಬಾಬ್ತು ಹಿಗ್ಗುತ್ತದೆ. ಆದ್ರೆ ಚುನಾವಣಾಧಿಕಾರಿಗಳು ಜನರಿಗೆ ಆಮಿಷ ಒಡ್ಡುವುದನ್ನು ತಡೆಯಲು ಅಲ್ಲಲ್ಲಿ ಅಭ್ಯರ್ಥಿಗಳು ಹಂಚುವ ಹಣ, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿದ್ದು, ಪಾರದರ್ಶಕ ಚುನಾವಣೆಗೆ ಪ್ರಯತ್ನಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳ ಪ್ರಕಾರ ನಗದು, ಮಧ್ಯ, ಡ್ರಗ್ಸ್, ಉಚಿತ ಉಡುಗೊರೆ ಸೇರಿದಂತೆ ಒಟ್ಟು 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. 75 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಚುನಾವಣೆ ಮುಗಿಯುವಷ್ಟರಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ.
Advertisement
Advertisement
ಚುನಾವಣಾ ಪ್ರಚಾರ ತಂತ್ರ ಹೇಗೆ?
ಮತದಾರರನ್ನು ತಲುಪಲು ಅಭ್ಯರ್ಥಿಗಳು ನಾನಾ ರೀತಿಯ ಪ್ರಚಾರದ ಮೊರೆ ಹೋಗುತ್ತಾರೆ. ತಾರಾ ಪ್ರಚಾಕರನ್ನು ಕರೆತಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಜೊತೆಗೆ ಬಿರುಸಿನ ಪ್ರಚಾರಕ್ಕಾಗಿ ಬಾಡಿಗೆ ವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದಕ್ಕೆಲ್ಲಾ ಆಯೋಗ ವಿಧಿಸಿರುವ ವೆಚ್ಚದ ಮಿತಿಯಲ್ಲೇ ವಿನಿಯೋಗ ಆಗಬೇಕು. 2022ರ ಜ.6ರಿಂದ ಜಾರಿಯಲ್ಲಿರುವಂತೆ ಲೋಕಸಭೆ ಕ್ಷೇತ್ರದ ಪ್ರತಿ ಅಭ್ಯರ್ಥಿಯು ಗರಿಷ್ಠ 95 ಲಕ್ಷ ರೂ.ವರೆಗೆ ವೆಚ್ಚ ಮಾಡಬಹುದು. ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ. ಉಮೇದುವಾರಿಕೆ ಸಲ್ಲಿಸುವ ಸಮಯದಿಂದಲೇ ಅಭ್ಯರ್ಥಿಯ ವೆಚ್ಚದ ಲೆಕ್ಕ ಶುರುವಾಗುತ್ತದೆ. ಅಂದಿನಿಂದ ನಿತ್ಯ ಅವರು ಬಳಸುವ ವಾಹನದ ಇಂಧನ ವೆಚ್ಚ ಸೇರಿದಂತೆ ಇತರೆ ವೆಚ್ಚಗಳು ಅವರ ಲೆಕ್ಕಕ್ಕೆ ಜಮೆಯಾಗುತ್ತಾ ಹೋಗುತ್ತದೆ. ಹಾಗಾಗಿ ಚುನಾವಣಾ ವೆಚ್ಚವನ್ನು ಯೋಜಿತ ರೀತಿಯಲ್ಲಿ ನಿಭಾಯಿಸಿ ಲೆಕ್ಕ ತಪ್ಪದಂತೆ ಪ್ರಚಾರ ನಡೆಸಬೇಕಿದೆ.
Advertisement
ತಾರಾ ಪ್ರಚಾರಕರ ವೆಚ್ಚ ಹೇಗೆ ನಡೆಯುತ್ತೆ?
ಚುನಾವಣೆ ವೇಳೆ ಸಮಾವೇಶ, ರೋಡ್ ಶೋ, ರ‍್ಯಾಲಿ ಈ ರೀತಿ ಬೇರೆ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದ್ದರಿಂದ ಬೃಹತ್ ಸಮಾವೇಶ ಮತ್ತು ರೋಡ್ ಶೋಗಳು ಚುನಾವಣಾ ವೆಚ್ಚ ರಾಜಕೀಯ ಪಕ್ಷಗಳ ಲೆಕ್ಕಕ್ಕೇ ಸೇರುತ್ತದೆ. ಅಲ್ಲದೇ ತಾರಾ ಪ್ರಚಾರಕರೂ ಪಾಲ್ಗೊಳ್ಳುವ ಸಭೆ, ಸಮಾವೇಶ, ರೋಡ್ ಶೋಗಳಲ್ಲಿ ಅಭ್ಯರ್ಥಿಯ ಫೋಟೋ, ವೀಡಿಯೋಗಳು ಇಲ್ಲದೇ ಇದ್ದರೇ, ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರನ್ನೇ ಹೇಳದಿದ್ದರೆ ಅದರ ಸಂಪೂರ್ಣ ಖರ್ಚು ಸಹ ಪಕ್ಷದ ಲೆಕ್ಕಕ್ಕೇ ಬರುತ್ತದೆ. ಒಂದು ವೇಳೆ ತಾರಾ ಪ್ರಚಾರಕರೊಂದಿಗೆ ಅಭ್ಯರ್ಥಿಯೂ ಪಾಲ್ಗೊಂಡರೆ, ಅಭ್ಯರ್ಥಿಯ ಫೋಟೋ ವೀಡಿಯೋಗಳನ್ನು ಬಳಕೆ ಮಾಡಿಕೊಂಡರೆ, ಆ ವೆಚ್ಚವು ಪಕ್ಷ ಹಾಗೂ ಅಭ್ಯರ್ಥಿಗಳಿಗೆ ಹಂಚಿಕೆಯಾಗುತ್ತದೆ. ಅಭ್ಯರ್ಥಿ ಪಾಲ್ಗೊಳ್ಳದೇ ತಾರಾ ಪ್ರಚಾರಕರು ಅಭ್ಯರ್ಥಿಯ ಹೆಸರು ಪ್ರಸ್ತಾಪಿಸಿ ಪ್ರಚಾರ ನಡೆಸಿದರೆ, ವೆಚ್ಚದ ಅರ್ಧಪಾಲು ಅಭ್ಯರ್ಥಿಯ ಲೆಕ್ಕಕ್ಕೆ ಬರುತ್ತದೆ.
ಅಲ್ಲದೇ ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ಬಳಿಕ, ಮತದಾನದ ಅವಧಿ ಮುಗಿಯುವವರೆಗಿನ ಅಭ್ಯರ್ಥಿಗಳ ವೆಚ್ಚ, ವಿವರವನ್ನು ಮೂರು ಬಾರಿ ಪರಿಶೀಲಿಸಲಾಗುತ್ತದೆ. ಅಭ್ಯರ್ಥಿಯು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚಿನ ವೆಚ್ಚ ಮಾಡಿದ್ದರೆ, ವೀಡಿಯೋ ದಾಖಲೆ ಆಧರಿಸಿ ಅದನ್ನು ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ.
ಪಕ್ಷ ಬೇರೆ-ಅಭ್ಯರ್ಥಿ ಲೆಕ್ಕ ಬೇರೆ:
ಪ್ರಚಾರ ದೃಷ್ಟಿಯಿಂದ ನಡೆಸುವ ಸಭೆ, ಸಮಾರಂಭ, ಸಮಾವೇಶ, ರೋಡ್ ಶೋಗೆ ತಗಲುವ ವೆಚ್ಚವನ್ನು ಅನುಮತಿ ಪಡೆಯುವ ಪಕ್ಷ ಹಾಗೂ ಅಭ್ಯರ್ಥಿಗೆ ಹಂಚಿಕೆ ಮಾಡಲು ನಿರ್ದಿಷ್ಟ ವರ್ಗೀಕರಣವಿದೆ. ಕಣದಲ್ಲಿರುವ ಅಭ್ಯರ್ಥಿಗಳು ನಿತ್ಯ ವಾಹನಗಳಿಗೆ ಬಳಸುವ ಇಂಧನ, ಇತರೇ ಖರ್ಚು ವೆಚ್ಚಗಳು ಅಭ್ಯರ್ಥಿಯ ಲೆಕ್ಕಕ್ಕೆ ಸೇರುತ್ತದೆ. ಜೊತೆಗೆ ರೋಡ್ ಶೋ, ರ‍್ಯಾಲಿ, ಸಮಾವೇಶಗಳಿಗೆ ಪಡೆಯುವ ಅನುಮತಿ ಆಧರಿಸಿ, ವೆಚ್ಚವನ್ನು ಲೆಕ್ಕ ಹಾಕಿ, ಪಕ್ಷ ಅಥವಾ ಅಭ್ಯರ್ಥಿ ಲೆಕ್ಕಕ್ಕೆ ಸೇರಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಇರುವಂತೆ ಪಕ್ಷಕ್ಕೆ ಮಿತಿಯಿಲ್ಲ, ಅದ್ರೆ ಪ್ರತಿ ಖರ್ಚಿಗೂ ಲೆಕ್ಕ ಕೊಡುವುದು ಕಡ್ಡಾಯ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇವಿಎಂ ಬೆಲೆ ಏರಿಕೆಯ ಪರಿಣಾವೂ ಇದೆ:
ಚುನಾವಣಾ ಆಯೋಗವು ಸಾರ್ವತ್ರಿಕ ಚುನಾವಣೆಗಾಗಿ ಒಂದು ವರ್ಷದ ಮೊದಲೇ ಸಕಲ ಸಿದ್ಧತೆಗಳ ಪ್ರಕ್ರಿಯೆ ಆರಂಭಿಸುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಹಿಡಿದು, ಚುನಾವಣೆ ಘೋಷಣೆ, ಮತದಾನಪೂರ್ಣಗೊಳ್ಳುವವರೆಗೆ ನಾನಾ ಹಂತಗಳಲ್ಲಿ ಆಯೋಗ ವೆಚ್ಚ ವಿನಿಯೋಗಿಸಬೇಕಾಗುತ್ತದೆ. ಇವಿಎಂ ಖರೀದಿಯೂ ಸಹ ಚುನಾವಣಾ ವೆಚ್ಚದ ಅಡಿಗೆ ಬರುತ್ತದೆ. ವರ್ಷದಿಂದ ವರ್ಷಕ್ಕೆ ಇವಿಎಂಗಳ ಬೆಲೆ ಏರಿಕೆಯಾಗುತ್ತಿರುವ ಕಾರಣ, ಚುನಾವಣಾ ವೆಚ್ಚದ ಬೆಲೆ ಏರಿಕೆ ಪರಿಣಾಮ ಬೀರುತ್ತಿದೆ ಎಂಬುದಾಗಿಯೂ ಮೂಲಗಳು ತಿಳಿಸಿವೆ.
ಚುನಾವಣಾ ವೆಚ್ಚ ಯಾವ ವರ್ಷದಲ್ಲಿ ಎಷ್ಟಿತ್ತು? ಈ ವರ್ಷ ಎಷ್ಟು?
ಪ್ರಸಕ್ತ ವರ್ಷ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರಸಕ್ತ ವರ್ಷದ ಚುನಾವಣಾ ಪ್ರಕ್ರಿಯೆಗೆ 7000 ಕೋಟಿ ರೂ.ನಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಿದ್ದು, ಈ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.
* 1952ರಲ್ಲಿ ನಡೆದ ದೇಶದ ಮೊದಲ ಲೋಕಸಭಾ ಚುನಾವಣೆಗೆ 10.45 ಕೋಟಿ ರೂ. ವೆಚ್ಚ ತಗುಲಿತ್ತು.
* 2004ರಲ್ಲಿ ಚುನಾವಣಾ ವೆಚ್ಚ ಸಾವಿರ ಕೋಟಿ ಗಡಿ ದಾಟಿತ್ತು. ಆಗ 1,113 ಕೋಟಿ ರೂ. ಖರ್ಚಾಗಿತ್ತು.
* 2009ರಲ್ಲಿ 1,483 ಕೋಟಿ ರೂ.ಗಳಷ್ಟು ಚುನಾವಣಾ ವೆಚ್ಚ ಖರ್ಚಾಗಿತ್ತು.
* 2014ರ ಚುನಾವಣೆಯಲ್ಲಿ ಒಟ್ಟು 3,870 ಕೋಟಿ ರೂ. ವೆಚ್ಚವಾಗಿತ್ತು.
* 2019ರ ಚುನಾವಣೆಯಲ್ಲಿ 4,000 ಕೋಟಿ ರೂ. ಖರ್ಚಾಗಿತ್ತು. ಈ ಬಾರಿ 7,000 ಕೋಟಿ ರೂ. ವೆಚ್ಚ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.