ಊಟವಿಲ್ಲ, ಬರೀ ನೀರು – 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿದ್ದ ಪದಕ ವಿಜೇತ ಅಮನ್‌

Public TV
3 Min Read
Aman Sehrawat 1

ಪ್ಯಾರಿಸ್‌: ಒಲಿಂಪಿಕ್ಸ್‌ (Paris Olympics 2024) ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಫ್ರೀಸ್ಟೈಲ್‌ ಕುಸ್ತಿಯಲ್ಲಿ ಫೈನಲ್‌ ಪ್ರವೇಶಿಸಿದ್ದ ವಿನೇಶ್‌ ಫೋಗಟ್‌ (Vinesh Phogat) ಕೇವಲ 100 ಗ್ರಾಂ ಅಧಿಕ ತೂಕ ಹೊಂದಿದ್ದ ಕಾರಣ ಒಲಿಂಪಿಕ್ಸ್‌ ಸ್ಪರ್ಧೆಯಿಂದಲೇ ಅನರ್ಹಗೊಂಡರು. ಇದರಿಂದ ಒಂದೆಡೆ ಅನರ್ಹತೆಯ ನಿಯಮ ಚರ್ಚೆಯಾಗುತ್ತಿದ್ದರೆ, ಮತ್ತೊಂದೆಡೆ ವಿನೇಶ್‌ ತೂಕ ಇಳಿಸಲು ಆ ದಿನ ಇಡೀ ರಾತ್ರಿ ನಡೆಸಿದ್ದ ಕಸರತ್ತಿನ ಬಗ್ಗೆ ಚರ್ಚೆಯಾಗುತ್ತಿವೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆಯೊಂದು ಕಂಡುಬಂದಿದೆ.

Aman Sehrawat

ಶುಕ್ರವಾರ ನಡೆದ 57 ಕೆಜಿ ವಿಭಾಗದ ಪುರುಷರ ಪ್ರೀಸ್ಟೈಲ್‌ ಕುಸ್ತಿಯಲ್ಲಿ (Wrestling)  ಕಂಚಿನ ಪದಕ ಗೆದ್ದ ಭಾರತದ ಅಮನ್‌ ಸೆಹ್ರಾವತ್‌ (Aman Sehrawat) ಪಂದ್ಯಕ್ಕೂ ಮುನ್ನ ಕೇವಲ 10 ಗಂಟೆಯಲ್ಲಿ 4.6 ಕೆಜಿ ತೂಕ ಇಳಿಸಿ ಅಚ್ಚರಿ ಮೂಡಿಸಿದ್ದಾರೆ ಎಂದು ವರದಿಯಾಗಿದೆ.

ಹೌದು. ಸೆಮಿಫೈನಲ್‌ ಸೋಲಿನ ಬಳಿಕ 61 ಕೆಜಿ ತೂಕ ಹೊಂದಿದ್ದ ಅಮನ್‌ ಕಂಚಿನ ಪದಕಕ್ಕೆ ಹೋರಾಡಬೇಕಿತ್ತು. ನಿಗದಿತ ಮಿತಿಗಿಂತ ಅಮನ್‌ 4.5 ಕೆಜಿ ಹೆಚ್ಚುವರಿ ತೂಕವಿದ್ದ ಕಾರಣ ಭಾರೀ ಕಸರತ್ತು ನಡೆಸಿ ತೂಕ ಇಳಿಸಿದ್ದಾರೆ. ಭಾರತೀಯ ತರಬೇತುದಾರರೊಂದಿಗೆ ಸತತ 10 ಗಂಟೆಗಳ ಕಾಲ ಕಸರತ್ತು ನಡೆಸಿ 4.6 ಕೆಜಿ ತೂಕ ಇಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

21 ವರ್ಷ ವಯಸ್ಸಿನ ಅಮನ್ ಅವರು ಜಪಾನ್‌ನ ರೇ ಹಿಗುಚಿ ವಿರುದ್ಧ ಗುರುವಾರ ಸಂಜೆ 6:30ರ ವೇಳೆಗೆ ಸೆಮಿಸ್‌ನಲ್ಲಿ ಸೋಲು ಕಂಡಿದ್ದರು. ಬಳಿಕ ಪ್ಯೂಟೋರಿಕೋದ ಕುಸ್ತಿಪಟು ಕರ್ಜ್‌ ವಿರುದ್ಧ ಕಂಚಿನ ಪದಕಕ್ಕೆ ಅವರು ಸೆಣಸಬೇಕಿತ್ತು. ಕೊಂಚವೂ ಸಮಯ ವ್ಯರ್ಥ ಮಾಡದ ಅಮನ್‌ ನಿರಂತರವಾಗಿ ದೇಹ ದಂಡಿಸುವ ಮೂಲಕ ಹಿಡಿದ ಕಾರ್ಯವನ್ನು ಸಾಧಿಸಿದ್ದಾರೆ.

ರೋಚಕ ಕಸರತ್ತು:
ಸೆಮಿಫೈನಲ್‌ ಪಂದ್ಯ ಮುಗಿದ ಬಳಿಕ ಗುರುವಾರ ಮಧ್ಯಾಹ್ನ 12:30ರ ವೇಳೆಗೆ ಅಮನ್‌ ಜಿಮ್‌ಗೆ ಬಂದು ಟ್ರೆಡ್‌ಮಿಲ್‌ನಲ್ಲಿ 1 ಗಂಟೆ ನಾನ್‌ಸ್ಟಾಪ್‌ ಓಟ ಅಭ್ಯಾಸ ಮಾಡಿದ್ರು. ಇದಕ್ಕೂ ಮುನ್ನ ಅವರು ಹಿರಿಯ ಕೋಚ್‌ಗಳೊಂದಿಗೆ ಸತತ ಒಂದೂವರೆ ಗಂಟೆ ಮ್ಯಾಚ್‌ ಸೆಷನ್‌ ಅಭ್ಯಾಸ ಮಾಡಿದ್ದರು. ನಂತರ 30 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು, 5 ನಿಮಿಷಗಳ ಕಾಲ ಸೌನಾ ಸ್ನಾನ ಮಾಡಿದರು. ಆದ್ರೆ ಸೆಷನ್‌ ಮುಕ್ತಾಯದ ಹೊತ್ತಿಗೆ ಇನ್ನೂ 900 ಗ್ರಾಂ ಹೆಚ್ಚು ತೂಕ ಹೊಂದಿದ್ದರು. ಇದರಿಂದ ಅವರಿಗೆ ಇನ್ನಷ್ಟು ಮಸಾಜ್‌ ಮಾಡಿಸಿ, ಲಘು ಜಾಗಿಂಗ್ ಮಾಡಿಸಲಾಯಿತು. ಹೀಗೆ ಬಿಡುವಿಲ್ಲದೇ ಮಾಡಿದ ಕಸರತ್ತಿನ ಪರಿಣಾಮ ಶುಕ್ರವಾರ ಮುಂಜಾನೆ 4:30ರ ವೇಳೆಗೆ ಅಮನ್‌ ದೇಹದ ತೂಕವನ್ನು 56.9 ಕೆಜಿಗೆ ಇಳಿಸಿದರು. ಆ ಬಳಿಕವೇ ಕೋಚ್‌ ನಿಟ್ಟುಸಿರು ಬಿಟ್ಟರು.

ಊಟವಿಲ್ಲ ಬರೀ ನೀರು ಸೇವನೆ:
ವಿನೇಶ್‌ ಫೋಗಟ್‌ ಅನರ್ಹತೆಯ ಬಳಿಕ ಎಚ್ಚೆತ್ತುಕೊಂಡಿದ್ದ ಕೋಚ್‌ಗಳು ಅಮನ್‌ ಅವರ ತೂಕ ಇಳಿಸುವ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿದ್ದರು. ಈ ಸಂದರ್ಭದಲ್ಲಿ ಅಮನ್‌ಗೆ ಯಾವುದೇ ಆಹಾರ ಪದಾರ್ಥಗಳನ್ನು ನೀಡಲಿಲ್ಲ. ಜೇನುತುಪ್ಪ ಬೆರಸಿದ ಉಗುರುಬೆಚ್ಚಗಿನ ನೀರು ಹಾಗೂ ಸ್ವಲ್ಪ ಕಾಫಿ ಕುಡಿಯಲು ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೇ ಕಂಚಿನ ಪದಕದ ಪಂದ್ಯ ಮುಗಿಯುವವರೆಗೂ ಅಮನ್‌ ನಿದ್ರೆಗೆ ಜಾರಲೇ ಇಲ್ಲ ಎಂದು ಕೋಚ್‌ಗಳು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ.

ಪದಕ ತಂದೆ-ತಾಯಿಗೆ ಅರ್ಪಣೆ:
ಚೊಚ್ಚಲ ಪ್ರಯತ್ನದಲ್ಲೇ ಪದಕ ಗೆದ್ದ ಅಮನ್​ ಸೆಹ್ರಾವತ್​ ಈ ಪದಕವನ್ನು ಅಗಲಿದ ತಂದೆ-ತಾಯಿಗೆ ಅರ್ಪಿಸಿದ್ದಾರೆ. ಕಂಚು ಗೆಲ್ಲುವ ಮೂಲಕ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಇತಿಹಾಸವನ್ನೂ ಅಮನ್​ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಪಿ.ವಿ ಸಿಂಧು ಅವರ ಹೆಸರಿನಲ್ಲಿತ್ತು. ಸಿಂಧು ರಿಯೋ ಒಲಿಂಪಿಕ್ಸ್​ನಲ್ಲಿ 21 ವರ್ಷ 1 ತಿಂಗಳು, 14 ದಿನ ವಯಸ್ಸಿನಲ್ಲಿದ್ದಾಗ ಕಂಚಿನ ಪದಕ ಗೆದ್ದಿದ್ದರು.

ಭಾರತದಿಂದ ಸ್ಪರ್ಧಿಸಿದ್ದ ಏಕೈಕ ಕುಸ್ತಿಪಟು:
ಅಮನ್​ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗಿದ್ದ ಭಾರತದ ಏಕೈಕ ಪುರುಷ ಕುಸ್ತಿಪಟು ಎನಿಸಿಕೊಂಡಿದ್ದರು. 57 ಕೆಜಿ ವಿಭಾಗದ ಕುಸ್ತಿಯಲ್ಲಿ ಕಳೆದ ಟೋಕಿಯೊ ಬೆಳ್ಳಿ ಪದಕ ಗೆದ್ದಿದ್ದ ರವಿ ದಹಿಯಾ ಅವರನ್ನ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನಲ್ಲಿ ಮಣಿಸುವ ಮೂಲಕ ಅಮನ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ ತಾಂತ್ರಿಕ ಮೇಲುಗೈ ಸಾಧಿಸುವ ಮೂಲಕ ಜಯ ಸಾಧಿಸಿದ್ದಾಗಲೇ ಅಮನ್​ ಪದಕ ಗೆಲ್ಲುವುದು ನಿಶ್ಚಿತ ಎನ್ನಲಾಗಿತ್ತು. ಸೆಮಿ ಫೈನಲ್​ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಜಪಾನ್‌ನ ರೀ ಹಿಗುಚಿ ವಿರುದ್ಧ ಸೋಲು ಕಂಡ ಕಾರಣ ಕಂಚಿನ ಪದಕ್ಕೆ ಹೋರಾಟ ನಡೆಸಿ ಇಲ್ಲಿ ಮೇಲುಗೈ ಸಾಧಿಸಿದರು.

Share This Article