ಕ್ರೈಸ್ಟ್ ಚರ್ಚ್: ಮಹಿಳಾ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಎಡವಿದೆ. ಕೊನೆಯ ಓವರ್‌ನಲ್ಲಿ ಎಸೆದ ಆ ಒಂದು ನೋ ಬಾಲ್‍ನಿಂದಾಗಿ ಭಾರತ ಮಹಿಳಾ ತಂಡ ಪಂದ್ಯವನ್ನು ಕೈ ಚೆಲ್ಲಿ ಟೂರ್ನಿಯಿಂದ ಕಿಕ್ ಔಟ್ ಆಗಿದೆ.
ಕೊನೆಯ ಓವರ್‌ನಲ್ಲಿ ಏನಾಯಿತು:
ಕೊನೆಯ ಬಾಲ್ ವರೆಗೂ ರೋಚಕತೆಯಿಂದ ಕೂಡಿದ ಪಂದ್ಯದ ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 7 ರನ್ ಬೇಕಾಗಿತ್ತು. ಟೀಂ ಇಂಡಿಯಾ ಪರ ಅನುಭವಿ ಬೌಲರ್ ದೀಪ್ತಿ ಶರ್ಮಾ ಕೊನೆಯ ಓವರ್ ಎಸೆಯಲು ಮುಂದಾದರು. ಆಫ್ರಿಕಾ ಪರ ಕೊನೆಯ ಓವರ್‌ನ ಮೊದಲ ಎಸೆತ ಎದುರಿಸಿದ ತ್ರಿಶಾ ಚೆಟ್ಟಿ 1 ರನ್ ಓಡಿದರು. ಎರಡನೇ ಎಸೆತದಲ್ಲಿ ಮಿಗ್ನಾನ್ ಡು ಪ್ರೀಜ್, ಲಾಂಗ್ ಆನ್ ಅತ್ತ ಹೊಡೆದು 2 ರನ್ ಕದಿಯಲು ಮುಂದಾದರು ಈ ವೇಳೆ ಹರ್ಮನ್‍ಪ್ರೀತ್ ಕೌರ್ ಕೈ ಸೇರಿದ ಚೆಂಡಿನಿಂದಾಗಿ, ತ್ರಿಶಾ ಚೆಟ್ಟಿ ರನೌಟ್ ಆಗಿ ಹೊರನಡೆದರು. ಕೊನೆಯ ನಾಲ್ಕು ಎಸೆತದಲ್ಲಿ 5 ರನ್ ಬೇಕಾಗಿತ್ತು. ಮೂರು ಮತ್ತು ನಾಲ್ಕನೇ ಎಸೆತದಲ್ಲಿ ತಲಾ ಒಂದೊಂದು ರನ್ ಬಂತು. ಕೊನೆಯ ಎರಡು ಎಸೆತದಲ್ಲಿ 3 ರನ್ ಅವಶ್ಯಕತೆ ಇತ್ತು. 5ನೇ ಎಸೆತ ಎಸೆದ ದೀಪ್ತಿ ಶರ್ಮಾ ನೋ ಬಾಲ್ ಮಾಡಿದರು. ಇದರಿಂದ ಫ್ರೀ ಹಿಟ್ ಸಹಿತ 2 ರನ್‍ಗಳನ್ನು ಆಫ್ರಿಕಾ ಬ್ಯಾಟರ್‌ಗಳು ಕಸಿದರು. ಕೊನೆಯ 1 ಬಾಲ್‍ಗೆ 1 ರನ್ ಅವಶ್ಯಕತೆ ಇದ್ದಾಗ ಸ್ಟ್ರೈಕ್‌ನಲ್ಲಿದ್ದ ಮಿಗ್ನಾನ್ ಡು ಪ್ರೀಜ್ ಮಿಡ್ ವಿಕೆಟ್ ಮೇಲೆ ಹೊಡೆದು ಒಂಟಿ ರನ್ ಓಡಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ ಸೋಲು – ಮಹಿಳಾ ವರ್ಲ್ಡ್‌ಕಪ್ ಟೂರ್ನಿಯಿಂದ ಭಾರತ ಔಟ್
https://twitter.com/rishabhgautam81/status/1508001031598194693
ಈ ಮೂಲಕ ಆ ಒಂದು ನೋ ಬಾಲ್‍ನಿಂದಾಗಿ ಭಾರತ ತಂಡದ ಸೆಮಿಫೈನಲ್ ಕನಸು ಭಗ್ನಗೊಂಡಿತು. ಇತ್ತ ಭಾರತದ ಸೋಲಿಗಾಗಿ ಕಾಯುತ್ತಿದ್ದ ವೆಸ್ಟ್ ಇಂಡೀಸ್, ಆಫ್ರಿಕಾ ಜೊತೆ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿತು. ಇದನ್ನೂ ಓದಿ: ಧೋನಿ ಅರ್ಧಶತಕದಾಟ ವ್ಯರ್ಥ – ಚೆನ್ನೈ ವಿರುದ್ಧ ಕೋಲ್ಕತ್ತಾಗೆ ಜಯ
ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಭಾರತ 7 ವಿಕೆಟ್ ನಷ್ಟಕ್ಕೆ 274 ರನ್‍ಗಳ ಗುರಿಯನ್ನು ಆಫ್ರಿಕಾಗೆ ನೀಡಿತ್ತು. ತಂಡದ ಬೃಹತ್ ಮೊತ್ತಕ್ಕೆ ಬ್ಯಾಟರ್‌ಗಳಾದ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಮತ್ತು ಮಿಥಾಲಿ ರಾಜ್ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದರು. ಬಳಿಕ ಭಾರತ ತಂಡದ ಬೌಲರ್‌ಗಳು ಗೆಲುವಿಗಾಗಿ ಹೋರಾಡಿದರೂ ಕೊನೆಯ ನಿಮಿಷದಲ್ಲಿ ಗೆಲುವು ಆಫ್ರಿಕಾಗೆ ದಕ್ಕಿತು.