ಉಡುಪಿ: ಬೈಂದೂರಿನ ಉದ್ಯಮಿಯೊಬ್ಬರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ಭಾಷಣಕಾರ್ತಿ ಚೈತ್ರಾ ಕುಂದಾಪುರಳನ್ನು (Chaithra Kundapura) ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದಾರೆ. ಉದ್ಯಮಿಗೆ ಈಕೆ ಹೇಗೆ ವಂಚನೆ ಎಸಗಿದ್ದಾಳೆ? ಎಫ್‌ಐಆರ್ ಪ್ರತಿಯಲ್ಲಿ ಏನು ದೂರು ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಎಫ್‌ಐಆರ್ ಪ್ರತಿಯಲ್ಲೇನಿದೆ?
ಉದ್ಯಮಿ ಗೋವಿಂದ ಬಾಬು ಪೂಜಾರಿ 7 ವರ್ಷಗಳಿಂದ ವರಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಮೂಲಕ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಹಿತೈಷಿಗಳು ಮತ್ತು ಸ್ನೇಹಿತರು, ನೀವು ರಾಜಕೀಯವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದ್ದರು. ಬಿಜೆಪಿ ಕಾರ್ಯಕರ್ತ ಪ್ರಸಾದ್ ಬೈಂದೂರು ಅವರು ಹಿಂದೂ ಕಾರ್ಯಕರ್ತೆ ಎಂದು ಹೇಳಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ಅವರನ್ನು ಪರಿಚಯಿಸಿದ್ದಾರೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಬೇಕು. ಸ್ಪರ್ಧಿಸಿದರೆ ಗೆಲ್ಲಿಸಿಕೊಡುವುದಾಗಿ ಉದ್ಯಮಿ ಮನವೊಲಿಸಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್
Advertisement
Advertisement
ನಾನು ಹಿಂದೂ ಸಂಘಟನೆಯಲ್ಲಿರುವುದರಿಂದ BJP, RSS ವರಿಷ್ಠರಿಗೂ ಹತ್ತಿರವಿದ್ದೇನೆ. ಪ್ರಧಾನಿ ಕಚೇರಿಯಲ್ಲೂ ಪ್ರಭಾವಿಯಾಗಿದ್ದು, ಸುಪ್ರೀಂ ಕೋರ್ಟ್ ಜಡ್ಜ್‌ಗಳಿಗೂ ಆಪ್ತಳಾಗಿದ್ದೇನೆ. ಅವರೆಲ್ಲರ ಪ್ರಭಾವ ಬಳಸಿ ಟಿಕೆಟ್ ಕೊಡಿಸುತ್ತೇನೆ ಎಂದು ಚೈತ್ರಾ ಕುಂದಾಪುರ ನಂಬಿಸಿದ್ದಾಳೆ. ಬಳಿಕ ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಇರುವ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ಅವರ ಮೂಲಕ ಟಿಕೆಟ್ ಕೊಡಿಸುವುದಾಗಿ ಹೇಳಿ 2022 ರಲ್ಲಿ ಚಿಕ್ಕಮಗಳೂರಿಗೆ ಉದ್ಯಮಿಯನ್ನು ಕರೆಸಿಕೊಂಡಿದ್ದರು. ಸರ್ಕಾರಿ ಅತಿಥಿ ಗೃಹದಲ್ಲಿ ಗಗನ್ ಅವರನ್ನು ಭೇಟಿ ಮಾಡಿಸಿ ತಾವು ಪ್ರಧಾನಿ ಮತ್ತು ಗೃಹ ಸಚಿವಾಲಯದ ಅಧಿಕಾರಿಗಳಿಗೆ ಅತ್ಯಂತ ನಿಕಟವರ್ತಿಯಾಗಿದ್ದು, ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿದ್ದಾರೆ. ಅಲ್ಲದೇ ಟಿಕೆಟ್ ಗಿಟ್ಟಿಸಿಕೊಳ್ಳಲು ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಮುಖರ ಶಿಫಾರಸು ಇರಬೇಕು. ಅದಕ್ಕೆ ಸುಮಾರು 45 ವರ್ಷಗಳಿಂದ ಉತ್ತರ ಬಾರತದಲ್ಲಿ ಆರ್‌ಎಸ್‌ಎಸ್ ಹಿರಿಯ ಪ್ರಚಾರಕರಾಗಿರುವ ಚಿಕ್ಕಮಗಳೂರು ಮೂಲದ ವಿಶ್ವನಾಥ್ ಮೂಲಕ ಶಿಫಾರಸು ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.
Advertisement
ವಿಶ್ವನಾಥ್ ಅವರು ಚಿಕ್ಕಮಗಳೂರಿನಲ್ಲೇ ಇದ್ದಾರೆ ಎಂದು ಹೇಳಿ ಉದ್ಯಮಿಗೆ ಪರಿಚಯಿಸಿದ್ದರು. ಉದ್ಯಮಿ ಬಗ್ಗೆ ಮಾಹಿತಿ ಪಡೆದ ವಿಶ್ವನಾಥ್ ಅವರು, ನಾನು ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯ ಸದಸ್ಯ. ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಸಮನ್ವಯಕಾರನಾಗಿದ್ದೇನೆ. ಟಿಕೆಟ್ ವಿಚಾರದಲ್ಲಿ ನನ್ನ ನಿರ್ಧಾರವೇ ಅಂತಿಮ. ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು ಎಂದು ಹೇಳಿದ್ದಾರೆ. ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ 3 ದಿನಗಳಲ್ಲಿ 50 ಲಕ್ಷ ರೂ. ಹಣವನ್ನು ಗಗನ್‌ಗೆ ನೀಡಬೇಕು. ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ 3 ಕೋಟಿ ರೂ. ನೀಡಬೇಕು ಎಂದು ತಿಳಿಸಿದ್ದಾರೆ.
Advertisement
2023 ರ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸುವ ಸಂಬಂಧ ಈ ಹಣ ಪಡೆಯಲಾಗುತ್ತಿದ್ದು, ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಭರವಸೆ ನೀಡಿದ್ದಾರೆ. ಚೈತ್ರಾ ಮತ್ತು ಗಗನ್ ಕೂಡಾ, ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಹೇಳಿದ್ದಾರೆ. ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾತಿನ ನಂಬಿಕೆ ಮೇಲೆ ಹಾಗೂ ವಿಶ್ವನಾಥ್ ನಿರ್ದೇಶನದ ಮೇರೆಗೆ ಉದ್ಯಮಿ 50 ಲಕ್ಷ ರೂ. ಹಣವನ್ನು ಪ್ರಸಾದ್ ಬೈಂದೂ ಮುಖಾಂತರ ಗಗನ್ ಕಡೂರ್‌ಗೆ ನೀಡಿದ್ದಾರೆ. ಶಿವಮೊಗ್ಯದ ಆರ್‌ಎಸ್‌ಎಸ್ ಕಚೇರಿ ಎದುರು ಗಗನ್‌ಗೆ ಈ ಮೊತ್ತ ಹಸ್ತಾಂತರವಾಗಿದ್ದು, ಉದ್ಯಮಿಗೆ ಕರೆ ಮಾಡಿ 50 ಲಕ್ಷ ರೂ. ಸ್ವೀಕರಿಸಿರುವುದಾಗಿ ದೃಢಪಡಿಸಿದ್ದಾರೆ. ತರುವಾಯ ವಿಶ್ವನಾಥ್, ಗಗನ್ ಮತ್ತು ಚೈತ್ರಾ ಕಾನ್ಫರೆನ್ಸ್ ಕರೆ ಮಾಡಿ, ನಿಮ್ಮ ಹೆಸರು ಆಯ್ಕೆ ಪಟ್ಟಿಯಲ್ಲಿದೆ. 2023ರ ಚುನಾವಣೆಯಲ್ಲಿ ಬೈದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ನಮೋ Vs ಜೈ ಭೀಮ್ – ನಗರಸಭೆ ಅಧ್ಯಕ್ಷನ ವಿರುದ್ಧ ಆಕ್ರೋಶ
ಇದಾದ ಸ್ವಲ್ಪ ದಿನಗಳಲ್ಲಿ 2022 ರ ಸೆಪ್ಟೆಂಬರ್ ಮೊದಲ ವಾರದಲ್ಲಿ ಉದ್ಯಮಿಗೆ ವಿಶ್ವನಾಥ್, ಚೈತ್ರಾ ಕುಂದಾಪುರ ಕಾನ್ಫರೆನ್ಸ್ ಕರೆ ಮಾಡಿ, ಕರ್ನಾಟಕದ ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಆಭಿನವ ಹಾಲ ಸ್ವಾಮೀಜಿ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ. ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿದ್ದರು. ಅಂತೆಯೇ ಉದ್ಯಮಿ, ಸ್ವಾಮೀಜಿಯವರನ್ನು ಭೇಟಿಯಾಗಿದ್ದರು. ಉದ್ಯಮಿ ಬಗ್ಗೆ ಮಾಹಿತಿ ಪಡೆದ ಸ್ವಾಮೀಜಿ, ವಿಶ್ವನಾಥ್ ಅವರು ಆಯ್ಕೆ ಸಮಿತಿಯಲ್ಲಿ ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಡಿಸಿರುವುದು. ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದ್ದು, ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಮುಂದಿನ ಪ್ರಕ್ರಿಯೆಗೆ 1.50 ಕೋಟಿ ರೂ. ನೀಡುವಂತೆ ಸೂಚಿಸಿದ್ದಾರೆ. ಸಮಯಾವಕಾಶ ಕೇಳಿದ್ದ ಉದ್ಯಮಿ ನಂತರ ಬೆಂಗಳೂರಿನ ವಿಜಯನಗರದಲ್ಲಿರುವ ಸ್ವಾಮೀಜಿ ಮನೆಗೆ ತೆರಳಿ ಟಿಕೆಟ್ ಪಡೆಯುವ ಭರವಸೆಯೊಂದಿಗೆ 1.50 ಕೋಟಿ ರೂ. ಹಣ ನೀಡಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದಿದ್ದಲ್ಲಿ ಅಷ್ಟೂ ಮೊತ್ತವನ್ನು ವಾಪಸ್ ಕೊಡುವುದಾಗಿ ಸ್ವಾಮೀಜಿ ಭರವಸೆ ನೀಡಿ, ಖುದಾಗಿ ಸ್ವೀಕರಿಸಿದ್ದಾರೆ. ನಂತರ ವಿಶ್ವನಾಥ್, ಗಗನ್ ಮತ್ತು ಚೈತ್ರಾ ನನ್ನೊಂದಿಗೆ ಕಾನ್ಫರೆನ್ಸ್ ಕರೆಯಲಿ ಮಾತನಾಡಿ, ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿಯ ಪ್ರಮುಖರು ಬೆಂಗಳೂರಿಗೆ ಆಗಮಿಸಲಿದ್ದರು. ಗಗನ್, ಉದ್ಯಮಿಗೆ ಬೆಂಗಳೂರಿನ ಕುಮಾರ ಕೃಪಾ ಸರ್ಕಾರಿ ಅತಿಥಿ ಗೃಹದಲ್ಲಿ ತಂಗಿದ್ದು ‘ನಾಯ್ಕ್’ ಎಂಬವರನ್ನು ದೆಹಲಿ ಚುನಾವಣಾ ಸಮಿತಿಯ ಸದಸ್ಯ ಎಂದು ಪರಿಚಯಿಸಿದ್ದರು. ಆ ವೇಳೆ ನಾಯ್ಕ್ ಎಂಬವರು, ಬೈಂದೂರು ಕ್ಷೇತ್ರಕ್ಕೆ ಉದ್ಯಮಿ ಹೆಸರನ್ನು ಕೇಂದ್ರೀಯ ಚುನಾವಣಾ ಸಮಿತಿ ಅಂತಿಮಗೊಳಿಸಿದೆ ಎಂದು ಖಾತ್ರಿಪಡಿಸಿದ್ದರು. ಅಲ್ಲದೆ, ಬಾಕಿ ಮೊತ್ತ 3 ಕೋಟಿ ರೂ. ಗಗನ್ ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಸೂಚಿಸಿದ್ದರು.
ನಂತರ ನಾಯ್ಕ್ ಮತ್ತು ವಿಶ್ವನಾಥ್ ಅವರ ಸೂಚನೆಯಂತೆ ಉದ್ಯಮಿ 3 ಕೋಟಿ ರೂ. ಮೊತ್ತವನ್ನು ಗಗನ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ ನೀಡಿದ್ದಾರೆ. ನಂತರ ಗಗನ್ ಉದ್ಯಮಿಗೆ ಕರೆ ಮಾಡಿ, ವಿಶ್ವನಾಥ್ ಅವರಿಗೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದರು. ಮತ್ತೆ ಮರುದಿನ ಕರೆ ಮಾಡಿ ವಿಶ್ವನಾಥ್ ಅವರು ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಗಗನ್ ಮಾತಿನಿಂದ ಅನುಮಾನಗೊಂಡ ಉದ್ಯಮಿ, ವಿಶ್ವನಾಥ್ ಅವರ ಸಾವಿನ ಸುದ್ದಿ ಬಗ್ಗೆ ತಿಳಿಯಲು ಕಾಶ್ಮೀರದಲ್ಲಿರುವ ತನಗೆ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬವರನ್ನು ವಿಚಾರಿಸಿದ್ದಾರೆ. ವಿಶ್ವನಾಥ್ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಎಂದು ಯೋಗೇಶ್ ತಿಳಿಸಿದ್ದಾರೆ. ಇದರಿಂದ ಅನುಮಾನ ಬಲಗೊಂಡಿತಲ್ಲದೆ, ಕೂಡಲೇ ಚೈತ್ರಾ ಕುಂದಾಪುರ ಹಾಗೂ ಗಗನ್‌ಗೆ ಕರೆ ಮಾಡಿ ನಿಜ ಏನೆಂದು ಹೇಳಬೇಕೆಂದು ಬೊಮ್ಮನಹಳ್ಳಿಯಲ್ಲಿರುವ ಕಚೇರಿಗೆ ಕರೆಸಿಕೊಂಡು ವಿಚಾರಿಸಿದಾಗ, ಈ ಇಬ್ಬರೂ ತಾವು ಪಡೆದ 3.50 ಕೋಟಿ ರೂ. ಮೊತ್ತ ವಿಶ್ವನಾದ್ ಅವರ ಬಳಿ ಇದ್ದು, ಅವರೀಗ ವಿಧಿವಶರಾಗಿದ್ದಾರೆ ಎಂದು ಹೇಳಿದ್ದಾರೆ. ಆ ವೇಳೆ ಎಲ್ಲಾ ನಾಟಕವೆಂದು ಉದ್ಯಮಿಗೆ ಗೊತ್ತಾಗಿದೆ. ಹಣವನ್ನು ವಾಪಸ್ ಪಡೆಯಲು ಪೊಲೀಸರ ಮೊರೆ ಹೋಗಬೇಕೆ ಎಂದು ಉದ್ಯಮಿ ಕೇಳಿದ್ದಾರೆ. ಆಗ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬ್ಲ್ಯಾಕ್‌ಮೇಲ್ ಮಾಡಿ, ಸ್ವಲ್ಪ ಕಾಲಾವಕಾಶ ಬೇಕೆಂದು ಕೋರಿ ಚೈತ್ರಾ ಕುಂದಾಪುರ ಮತ್ತು ಗಗನ್ ಹೋಗಿದ್ದಾರೆ. ಅನಂತರ ಉದ್ಯಮಿ ಫೋನ್ ಕರೆ ಸ್ವೀಕರಿಸದೇ ತಪ್ಪಿಸಿಕೊಳ್ಳುತ್ತಿದ್ದರು. ನಂತರ ಉದ್ಯಮಿ ಅಭಿನವ ಹಾಲ ಸ್ವಾಮೀಜಿ ಅವರ ಬೆಂಗಳೂರಿನ ವಿಜಯನಗರದಲ್ಲಿರುವ ನಿವಾಸಕ್ಕೆ ಹೋಗಿ ಕೇಳಿದ್ದಾರೆ. ಆ ವೇಳೆ ಸ್ವಾಮೀಜಿಯವರು, ತಮಗೆ ವಿಶ್ವನಾಥ್ ಯಾರೆಂದು ಸರಿಯಾಗಿ ಗೊತ್ತಿಲ್ಲ. ನಾನು ಪಡೆದಿರುವ 1.5 ಕೋಟಿ ರೂ. ಹಣವನ್ನು ಒಂದು ತಿಂಗಳೊಳಗೆ ವಾಪಸ್ ನೀಡುತ್ತೇನೆ. ಈ ವಿಚಾರದಲ್ಲಿ ತಮ್ಮನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಚುನಾವಣಾ ಸಿಬ್ಬಂದಿಗೆ ಬೂತಲ್ಲೇ ಅಂಚೆ ಮತದಾನ ಕಡ್ಡಾಯ
ಇದೇ ವೇಳೆ 3.5 ಕೋಟಿ ರೂ. ವಿಶ್ವನಾಥ್ ಅವರ ಬಳಿ ಇದೆ ಎಂದು ಚೈತ್ರಾ ಕುಂದಾಪುರ ಮತ್ತು ಗಗನ್ ಹೇಳಿದ್ದರು. ಆಗ ಉದ್ಯಮಿ ವಿಶ್ವನಾಥ್ ಅವರನ್ನು ಹುಡುಕಾಡಲು ಪ್ರಾರಂಭಿಸಿದ್ದು, ಹಿಂದೂ ಸಂಘಟನೆಯ ಕಾರ್ಯಕರ್ತರಾಗಿರುವ ಚಿಕ್ಕಮಂಗಳೂರಿನ ಮಂಜು ಎಂಬವರ ಬಳಿ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಮಂಜು ಅವರು ತಾವು ಕೆಲ ದಿನಗಳ ಹಿಂದೆ ಸಲೂನ್‌ಗೆ ಭೇಟಿ ನೀಡಿದಾಗ ನಡೆದ ಸನ್ನಿವೇಶವನ್ನು ನೆನಪಿಸಿಕೊಂಡು ಆ ಸನ್ನಿವೇಶಕ್ಕೂ ಈ ವಿಚಾರಕ್ಕೂ ಸಾಮ್ಯತೆ ಇರುವುದಾಗಿ ಹೇಳಿದ್ದಾರೆ. ಕಡೂರಿನ ಸಲೂನ್‌ಗೆ ವ್ಯಕ್ತಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು ಆರ್‌ಎಸ್‌ಎಸ್ ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು. ಆ ಸಲೂನ್‌ಗೆ ತೆರಳಿ ವಿಚಾರಿಸಿದಾಗ, ಮೇಕಪ್ ಮಾಡಲು ಬಂದಿದ್ದವರು ಧನರಾಜ್ ಹಾಗೂ ರಮೇಶ್ ಎಂಬ ವ್ಯಕ್ತಿಗಳೆಂದು ತಿಳಿಯಿತು. ಅವರನ್ನು ಪತ್ತೆ ಮಾಡಿದಾಗ ರಮೇಶ್ ಎಂಬಾತನೇ ಆರ್‌ಎಸ್‌ಎಸ್ ಪ್ರಚಾರಕ ವಿಶ್ವನಾಥ್ ಹೆಸರಲ್ಲಿ ನಟಿಸಿರುವ ಸಂಗತಿ ಉದ್ಯಮಿಗೆ ತಿಳಿದಿದೆ. ಆರ್‌ಎಸ್‌ಎಸ್ ಪ್ರಚಾರಕರಂತೆ ನಟಿಸಲು ಗಗನ್ ಮತ್ತು ಚೈತ್ರಾ ಕುಂದಾಪುರ ತರಬೇತಿ ನೀಡಿ 1,20,000 ರೂ. ಕೊಟ್ಟಿರುತ್ತಾರೆಂದು ತಿಳಿದು ಬಂದಿದೆ.
ಈ ನಾಟಕವಾಡುವಾಗ ಆರ್‌ಎಸ್‌ಎಸ್ ವಾಹನವಾಗಿ ಬಳಸಲು ತನಗೂ 2,50,000 ರೂ. ನೀಡಿದ್ದಾರೆ ಎಂದು ಧನರಾಜ್ ಹೇಳಿಕೊಂಡಿದ್ದಾರೆ. ಇದೇ ವೇಳೆ, ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ‘ನಾಯ್ಕ್’ ಎಂಬ ವ್ಯಕ್ತಿಯ ಬಗ್ಗೆ ಧನರಾಜ್ ಬಳಿ ವಿಚಾರಿಸಿದಾಗ, ಇವರು ಬೆಂಗಳೂರಿನ ಕೆ.ಆರ್. ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಯಿತು. ನಾಯ್ಕ್ ಅವರನ್ನು ಭೇಟಿಯಾಗಿ ಕೇಳಿದಾಗ, ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ 93,000 ರೂ. ಪಾವತಿಸಿದ್ದು, ಈ ಹಿನ್ನೆಲೆಯಲ್ಲಿ ತಾನು ಈ ರೀತಿ ನಟಿಸಿರುವುದಾಗಿ ನಾಯ್ಕ್ ಹೇಳಿಕೊಂಡಿದ್ದಾನೆ. ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರಾ ಕುಂದಾಪುರ ಬೆದರಿಸಿದ್ದಳು ಎಂದು ತಿಳಿಸಿದ್ದಾನೆ. ನೀವು ಒಂದು ವೇಳೆ ಹಣ ವಾಪಸ್ ಕೇಳಲು ಮುಂದಾದರೆ ಜಡ್ಜ್‌ಗಳಿಗೆ ಹೇಳಿ ಶಾಶ್ವತವಾಗಿ ಜೈಲಿನಲ್ಲಿರಿಸುತ್ತಾರಂತೆ. ಅವರಿಗೆ ಭೂಗತ ಪಾತಕಿಗಳ ಸಂಪರ್ಕ ಇದ್ದು, ನಿಮ್ಮನ್ನು ಮುಗಿಸಲು ತಯಾರಿ ನಡೆಸಿದ್ದಾರೆ ಎಂದು ಉದ್ಯಮಿಗೆ ಹೇಳಿದ್ದಾನೆ. ಈ ಎಲ್ಲಾ ಸನ್ನಿವೇಶದಲ್ಲಿ ಚೈತ್ರಾ ಕುಂದಾಪುರ, ಗಗನ್ ಕಡೂರ್ ಮತ್ತು ಶ್ರೀಕಾಂತ್ ಅವರು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿ ನಾಯ್ಕ್ ಮತ್ತು ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕರಾಗಿ ವಿಶ್ವನಾಥ್ ಎಂಬ ಹೆಸರಿನಲ್ಲಿ ಕೇಂದ್ರ ನಾಯಕರ ಪಾತ್ರ ಸೃಷ್ಟಿಸಿ ವಂಚಿಸಿದ್ದಾರೆ.
ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರ್, ತಮಗೆ ಪ್ರಧಾನಿ ಕಚೇರಿ ಪ್ರಮುಖರು, ಬಿಜೆಪಿ ನಾಯಕರು, ಸುಪ್ರೀಂ ಕೋರ್ಟ್ ಜಡ್ಜ್‌ಗಳ ಅಭಯ ಇದೆ ಎಂದು ಬಿಂಬಿಸಿ ಉದ್ಯಮಿಯಿಂದ ಸುಮಾರು 3.50 ಕೋಟಿ ರೂ. ಹಾಗೂ ಹಾಲಶ್ರೀ ಸ್ವಾಮೀಜಿ ಅವರು ಪ್ರಧಾನಿ ಕಚೇರಿಯ ಪ್ರಭಾವ ಇದೆ ಎಂದು ಬಿಂಬಿಸಿ 1.50 ರೂ. ವಂಚಿಸಿರುವ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಾನೂನುಕ್ರಮ ಜರುಗಿಸಬೇಕೆಂದು ಉದ್ಯಮಿ ದೂರು ನೀಡಿದ್ದರು.
Web Stories