ಹೆಜ್ಜೆ ಹೆಜ್ಜೆಗೂ ಅಡೆತಡೆ – ಉತ್ತರಕಾಶಿ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

Public TV
3 Min Read
Uttarakhand Uttarkashi Tunnel 3

ನವದೆಹಲಿ: ಕಾರ್ಮಿಕರ ರಕ್ಷಣೆಗೆ ದೇಶಾದ್ಯಂತ ಪ್ರಾರ್ಥನೆ, ನಾವು ಸಾವನ್ನು ಮೆಟ್ಟಿ ನಿಲ್ಲುತ್ತೇವೆ ಎಂದು ಛಲ ತೊಟ್ಟ ಕಾರ್ಮಿಕರು, ಕಾರ್ಯಾಚರಣೆ ಮಧ್ಯೆ ಕೈಕೊಟ್ಟ ಯಂತ್ರ…ಹೆಜ್ಜೆ ಹೆಜ್ಜೆಗೂ ಅಡೆತಡೆಅಡ್ಡಿ ಆತಂಕಗಳ ನಡುವೆ ಉತ್ತರಾಖಂಡದ (Uttarakhand) ಸುರಂಗದಲ್ಲಿ (Tunnel) ಕಳೆದ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರನ್ನು (Workers) ಯಶಸ್ವಿಯಾಗಿ ರಕ್ಷಿಸಲಾಗಿದೆ.

ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಡೆಸಿದ ಸಾಹಸೋಪೇತ ಕಾರ್ಯಾಚರಣೆಯಲ್ಲಿ 400ಕ್ಕೂ ಹೆಚ್ಚು ಗಂಟೆಗಳ ಬಳಿಕ ಎಲ್ಲಾ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸುರಂಗದಿಂದ ಕಾರ್ಮಿಕರು ಹೊರಬರುತ್ತಿದ್ದಂತೆ ಉತ್ತಾರಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಕೇಂದ್ರ ಸಚಿಬ ವಿಕೆ ಸಿಂಗ್ ಹೂವಿನ ಹಾರವನ್ನು ಹಾಕಿ ಬರಮಾಡಿಕೊಂಡರು.

Uttarakhand Uttarkashi Tunnel 1

ನೆಲದಿಂದ ಸಮಾನಾಂತರವಾಗಿ ಮೊದಲು ಕೈಗೊಂಡಿದ್ದ ಕೊರೆವ ಕೆಲಸವನ್ನು ಅದು ನಿಂತಿದ್ದ ಸ್ಥಳದಿಂದಲೇ ನಿಷೇಧಿತ ಇಲಿ ಬಿಲ ಗಣಿಗಾರಿಕೆಯ ಪದ್ದತಿ ಬಳಸಿ ಡ್ರಿಲ್ಲಿಂಗ್ ಮಾಡಿದ್ದು ಫಲ ಕೊಟ್ಟಿದೆ. ನಂತರ ಸುರಂಗದ ಒಳಗೆ 3 ಮೀಟರ್‌ನಷ್ಟು ಕೊರೆಯಲಾಯಿತು. ಸಂಜೆ 7:05ಕ್ಕೆ ಸರಿಯಾಗಿ ಕಾರ್ಮಿಕರು ಸಿಲುಕಿದ್ದ ಸ್ಥಳವನ್ನು ಎನ್‌ಡಿಆರ್‌ಎಫ್ ತಲುಪಿತು. ಐವರು ಅಧಿಕಾರಿಗಳ ತಂಡ ಮೊದಲು ಸುರಂಗ ತಲುಪಿ ಕಾರ್ಮಿಕರನ್ನು ಭೇಟಿ ಮಾಡಿದರು. ನಂತರ 4 ಅಡಿಯಷ್ಟು ಅಗಲ ಪೈಪ್‌ನೊಳಗಿನಿಂದ ಸ್ಟ್ರೆಚರ್ ಬಳಸಿ ಹಲವು ಬ್ಯಾಚ್‌ಗಳಲ್ಲಿ ಕಾರ್ಮಿಕರನ್ನು ಎನ್‌ಡಿಆರ್‌ಎಫ್ ಕರೆತಂದಿದೆ.

3-3 ಕಾರ್ಮಿಕರನ್ನು ಬ್ಯಾಚ್‌ಗಳನ್ನಾಗಿ ವಿಂಗಡಿಸಿ ಅವರನ್ನು ಹೊರಗೆ ಕರೆತರಲಾಗಿದೆ. ಒಬ್ಬೊಬ್ಬ ಕಾರ್ಮಿಕ ಬಾಹ್ಯ ಜಗತ್ತನ್ನು ಕಂಡ ಕೂಡಲೇ ಸ್ಥಳದಲ್ಲಿ ಸಂಭ್ರಮ ಮುಗಿಲುಮುಟ್ಟಿದೆ. ಸಾವು ಗೆದ್ದು ಬಂದ ಪ್ರತಿಯೊಬ್ಬ ಕಾರ್ಮಿಕರನ್ನು ಹೂಹಾರದೊಂದಿಗೆ ಸ್ವಾಗತಿಸಲಾಗಿದೆ. ಈ ಎಲ್ಲಾ ಕೆಲಸ ಕೇವಲ ಅರ್ಧ ಗಂಟೆ ಅಂತರದಲ್ಲಿ ನಡೆದಿದೆ.

Uttarakhand Uttarkashi Tunnel 2

ಸದ್ಯಕ್ಕೆ ಎಲ್ಲ ಕಾರ್ಮಿಕರೂ ಆರೋಗ್ಯವಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕಾರ್ಮಿಕರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಒಂದೊಮ್ಮೆ ಯಾರಿಗಾದರೂ ಮೆಡಿಕಲ್ ಎಮೆರ್ಜೆನ್ಸಿ ಇದ್ದರೆ ಆಸ್ಪತ್ರೆಗೆ ಸಾಗಿಸಲು ಚಿನೂಕ್ ಹೆಲಿಕಾಪ್ಟರ್ ಸಜ್ಜಾಗಿ ಇರಿಸಲಾಗಿತ್ತು. ಅದೃಷ್ಟವಶಾತ್ ಅಂತಹ ಸನ್ನಿವೇಶ ಕಂಡುಬಂದಿಲ್ಲ. ಸ್ಥಳದಲ್ಲೇ ಸಿಎಂ ಪುಷ್ಕರ್ ಸಿಂಗ್ ಧಾಮಿ, ಕೇಂದ್ರ ಸಚಿವ ವಿಕೆ ಸಿಂಗ್, ಕಾರ್ಮಿಕರು ಬಂಧುಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

17 ದಿನಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ನೂರೆಂಟು ವಿಘ್ನಗಳು ಎದುರಾಗಿದ್ದವು. ವಿದೇಶಿ ತಜ್ಞರನ್ನು ಆಪರೇಷನ್‌ಗೆ ಬಳಸಿಕೊಳ್ಳಲಾಗಿತ್ತು. ಆದರೆ ಕಾರ್ಯಾಚರಣೆ ಯಾವಾಗ ಮುಗಿಯಬಹುದು ಎಂಬ ಬಗ್ಗೆ ಸ್ಪಷ್ಟತೆಯೇ ಇರಲಿಲ್ಲ. ಆದರೆ ರಕ್ಷಣಾ ಪಡೆಗಳ ಅವಿರತ ಪ್ರಯತ್ನ ಇಂದು ಫಲ ಕೊಟ್ಟಿದೆ.

Uttarakhands Silkyari tunnel rescue trapped workers evacuated from tunnel 1ರಕ್ಷಣಾ ಕಾರ್ಯರಚಣೆ ನಡೆದಿದ್ದು ಹೀಗೆ:
ಅವಶೇಷಗಳ ನಡುವೆ ಮೊದಲು ಡ್ರಿಲ್ಲಿಂಗ್ ನಡೆಸಿ ಕೊನೆ ಭಾಗ ಸುಮಾರು 57 ಮೀಟರ್ ಮಾತ್ರ ಮನುಷ್ಯರಿಂದಲೇ ಕೊರೆಯಲಾಯಿತು. ಸುರಂಗಕ್ಕೆ 90 ಸೆಂಟಿಮೀಟರ್ ಅಗಲದ ಪೈಪ್ ಅಳವಡಿಸಿ, ಅದರ ಮೂಲಕವೇ ಕಾರ್ಮಿಕರನ್ನು ಹೊರಕ್ಕೆ ತರಲಾಗಿದೆ. ಇದನ್ನೂ ಓದಿ: ಉತ್ತರಕಾಶಿ ಸುರಂಗದಲ್ಲಿ ಗ್ರೇಟ್ ಆಪರೇಷನ್ – 17 ದಿನಗಳ ಬಳಿಕ ಸಾವು ಗೆದ್ದ 41 ಕಾರ್ಮಿಕರು

ಕಾರ್ಮಿಕರು 17 ದಿನ ಬದುಕಿದ್ದು ಹೇಗೆ?
ನವೆಂಬರ್ 12 ರಂದು ಸಿಲ್‌ಕ್ಯಾರಾ ಸುರಂಗ ಕುಸಿತವಾಗಿತ್ತು. ಈ ಹಿನ್ನೆಲೆ 41 ಕಾರ್ಮಿಕರು ಅದರೊಳಗೆ ಸಿಲುಕೊಕೊಂಡಿದ್ದರು. ಅದೃಷ್ಟವಶಾತ್ ಕಾರ್ಮಿಕರು ಓಡಾಡುವುದಕ್ಕೆ 2 ಕಿ.ಮೀ ಸ್ಥಳಾವಕಾಶ ಇತ್ತು. ಸುರಂಗ ಕುಸಿದ 2-3 ದಿನಗಳಲ್ಲಿ ಪೈಪ್ ಮೂಲಕ ಆಹಾರ, ನೀರು, ಔಷಧಿ ಪೂರೈಕೆ ಮಾಡಲಾಗುತ್ತಿತ್ತು.

Uttarakhands Silkyari tunnel rescue trapped workers evacuated from tunnel 2

ಕಾರ್ಮಿಕರ ಮನಸ್ಥೈರ್ಯ ಕಡಿಮೆಯಾಗದಿರಲು ಯೋಗ, ಸಂವಹನ ಮಾಡಿಸಲಾಗಿತ್ತು. ಕುಟುಂಬಸ್ಥರೊಡನೆ ಮಾತನಾಡಲು ಕಾರ್ಮಿಕರಿಗೆ ಮೊಬೈಲ್ ಸೌಲಭ್ಯ ನೀಡಲಾಗಿತ್ತು. ಸಿಲುಕೊಕೊಂಡಿದ್ದ ಕಾರ್ಮಿಕರೊಡನೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಖುದ್ದಾಗಿ ಮಾತನಾಡಿದ್ದರು.

ವರವಾದ ನಿಷೇಧಿತ ರ‍್ಯಾಟ್ ಹೋಲ್ ಟೆಕ್ನಿಕ್:
ಇಲಿ ಬಿಲ ಕೊರೆವ ಮಾದರಿಯ ನೆಲ ಕೊರೆಯುವ ಟೆಕ್ನಿಕ್ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಕೊನೆಗೆ ಸಹಾಯಕ್ಕೆ ಬಂದಿದೆ. ಇದು ಕಾರ್ಮಿಕರ ಸಣ್ಣ ಗುಂಪುಗಳು ನೆಲ ಅಗೆದು ಕಲ್ಲಿದ್ದಲು ತೆಗೆಯುವ ಪ್ರಕ್ರಿಯೆಗೆ ಹೆಚ್ಚಾಗಿ ಬಳಸಲಾಗುತ್ತದೆ. ಇದು ಸಲಕರಣೆ ಬಳಸಿಕೊಂಡು ಕೈಗಳಿಂದ ನೆಲ ಅಗೆಯುವ ಪ್ರಕ್ರಿಯೆಯಾಗಿದೆ. ಒಬ್ಬರು ಮಾತ್ರ ಒಳಗೆ ತೂರುವಷ್ಟು ಸಣ್ಣ ಕುಣಿ ಅಗೆಯವ ಕ್ರಿಯೆಯಾಗಿದ್ದು, ಇದನ್ನು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಹೆಚ್ಚಾಗಿ ಬಳಸುತ್ತಿದ್ದರು.

ಆದರೆ ಪರಿಸರಕ್ಕೆ ಮಾರಕ ಮಾತ್ರವಲ್ಲದೆ ದುರಂತ ಹೆಚ್ಚಳದ ಕಾರಣ ಇದಕ್ಕೆ ನಿಷೇಧ ಹೇರಲಾಗಿದೆ. ಈ ವಿಧಾನ ನಿಷೇಧವಿದ್ದರೂ ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ಬಳಸಿಕೊಂಡು ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: 41 ಕಾರ್ಮಿಕರ ರಕ್ಷಣೆಗೆ ವರವಾಯ್ತು ನಿಷೇಧಿತ ರ‍್ಯಾಟ್ ಹೋಲ್ ಮೈನಿಂಗ್ – ನಿಷೇಧಿಸಿದ್ದು ಯಾಕೆ?

Share This Article