ಭೋಪಾಲ್: ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧದ ಕ್ರಮದ ಭಾಗವಾಗಿ ಮಧ್ಯಪ್ರದೇಶದ ಮಾಂಡ್ಲಾದಲ್ಲಿ (Madhyapradesh Mandla) ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿದ 11 ಮನೆಗಳನ್ನು ಸ್ಥಳೀಯ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಲಾದ ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಗೋವುಗಳನ್ನು ಕೂಡಿಹಾಕಲಾಗಿದೆ ಎಂಬ ಸುಳಿಸು ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಜತ್ ಸಕ್ಲೇಚಾ ತಿಳಿಸಿದ್ದಾರೆ.
ಸುಳಿವು ದೊರೆಯುತಿದ್ದಂತೆಯೇ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿದೆ. ಈ ವೇಳೆ ಮನೆಗಳ ಹಿತ್ತಲಲ್ಲಿ ಗೋವುಗಳನ್ನು ಕಟ್ಟಿ ಹಾಕಲಾಗಿತ್ತು. ಕೂಡಲೇ 150 ಗೋವುಗಳನ್ನು ವಶಕ್ಕೆ ಪಡೆದುಕೊಂಡೆವು. ಅಲ್ಲದೇ ಮನೆಗಳಲ್ಲಿ ಫ್ರಿಡ್ಜ್‌ನಲ್ಲಿನಲ್ಲಿಟ್ಟಿದ್ದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಾಣಿಗಳ ಕೊಬ್ಬು, ದನದ ಚರ್ಮ ಮತ್ತು ಮೂಳೆಗಳನ್ನು ಕೂಡ ಕೊಠಡಿಯಲ್ಲಿ ಪತ್ತೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಸ್ಥಳೀಯ ಸರ್ಕಾರಿ ಪಶುವೈದ್ಯರು ವಶಪಡಿಸಿಕೊಂಡ ಮಾಂಸವು ದನದ ಮಾಂಸ ಎಂಬುದನ್ನು ದೃಢಪಡಿಸಿದ್ದಾರೆ. ಇನ್ನು ಡಿಎನ್‌ಎ ಟೆಸ್ಟ್‌ಗಾಗಿ ವಶಕ್ಕೆ ಪಡೆದ ಮಾದರಿಗಳನ್ನು ಹೈದರಾಬಾದ್‌ಗೆ ಕಳುಹಿಸಿದ್ದೇವೆ. 11 ಆರೋಪಿಗಳ ಮನೆಗಳು ಸರ್ಕಾರಿ ಭೂಮಿಯಲ್ಲಿರುವುದರಿಂದ ಅವುಗಳನ್ನು ನೆಲಸಮಗೊಳಿಸಲಾಗಿದೆ ಎಂದು ಎಸ್‌ಪಿ ವಿವರಿಸಿದ್ದಾರೆ. ಇದನ್ನೂ ಓದಿ: ತನ್ನ ಉಗುಳಿನಿಂದ ಗ್ರಾಹಕನ ಮುಖಕ್ಕೆ ಮಸಾಜ್ ಮಾಡಿದ ಕ್ಷೌರಿಕ!
ಶುಕ್ರವಾರ ರಾತ್ರಿ ಹಸುಗಳು ಮತ್ತು ಗೋಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ 10 ಮಂದಿ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದರು.
ವಶಕ್ಕೆ ಪಡೆದ 150 ಗೋವುಗಳನ್ನು ಗೋಶಾಲೆಗೆ ಕಳುಹಿಸಲಾಗಿದೆ. ಭೈನಸ್ವಾಹಿ ಪ್ರದೇಶವು ಕೆಲವು ಸಮಯದಿಂದ ಗೋವು ಕಳ್ಳಸಾಗಣೆಯ ಕೇಂದ್ರವಾಗಿದೆ. ಗೋಹತ್ಯೆ ಮಾಡಿದರೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಸಕ್ಲೇಚಾ ಹೇಳಿದ್ದಾರೆ.