ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

Public TV
1 Min Read
Pride Wilasa

ಬೆಂಗಳೂರು: ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆಯೊಬ್ಬರು ತನ್ನ ಕೈ ಕಳೆದುಕೊಂಡ ಘಟನೆ ನಗರದ ಕೋಣನಕುಂಟೆಯಲ್ಲಿ ನಡೆದಿದೆ.

ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ. ಶಾರದಮ್ಮ ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್‍ಮೆಂಟ್‍ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಸವನ್ನು ಮೆಷಿನ್‍ಗೆ ಹಾಕುತ್ತಿದ್ದಾಗ ಈ ಅವಘಡ ನಡೆದಿದ್ದು, ಬಲಗೈ ತುಂಡಾಗಿದೆ.

ಶಾರದಮ್ಮ ಅಪಾರ್ಟ್‍ಮೆಂಟ್ ಸುತ್ತ ಮುತ್ತಲಿನ ಕಸವನ್ನು ಗುಡಿಸಿ ರಾಶಿ ಹಾಕಿದ್ದರು. ಕಸವನ್ನು ಮಷಿನ್‍ಗೆ ಹೇಗೆ ಹಾಕುವುದೆಂದು ಅಪಾರ್ಟ್ ಮೆಂಟ್ ಮಾಲೀಕ ಕುಮಾರ್ ಶಾರದಮ್ಮಗೆ ಹೇಳಿಕೊಟ್ಟಿರಲಿಲ್ಲ. ಆದರೂ ಕಸವನ್ನು ಮಷಿನ್‍ಗೆ ಹಾಕುವಂತೆ ಕುಮಾರ್ ಹೇಳಿದ್ದರು. ಇದರಿಂದಾಗಿ ಶಾರದಮ್ಮ ಮೆಷಿನ್‍ನಲ್ಲಿ ಕಸ ಹಾಕಿ ಕಡ್ಡಿಯಿಂದ ದೂಡುತ್ತಿದ್ದರು. ಈ ವೇಳೆ ಕಡ್ಡಿ ಮೆಷಿನಿನೊಳಗೆ ಬಿದ್ದಿದೆ. ತಕ್ಷಣವೇ ಕಡ್ಡಿಯನ್ನು ತೆಗೆಯಲು ಮುಂದಾದ ಶಾರದಮ್ಮ, ಆಯ ತಪ್ಪಿ ಮೆಷಿನ್‍ನಲ್ಲಿ ಬಲಗೈ ಇಟ್ಟಿದ್ದಾರೆ. ಪರಿಣಾಮ ಮೆಷಿನಿಗೆ ಸಿಲುಕಿದ ಶಾರದಮ್ಮಳ ಬಲಗೈ ತುಂಡಾಗಿದೆ.

konanakunte police station

ಶಾರದಮ್ಮ ನೋವಿನಿಂದ ಅಳುತ್ತಿದ್ದ ಧ್ವನಿ ಕೇಳಿ ಸ್ಥಳಕ್ಕೆ ಆಗಮಿಸಿದ ಸಹೋದ್ಯೋಗಿಳು ಕಣ್ಣೀರು ಹಾಕಿದರು. ಗಂಭೀರವಾಗಿ ಗಾಯಗೊಂಡಿದ್ದ ಶಾರದಮ್ಮ ಅವರಿಗೆ ನೀರು ಕುಡಿಸಿ, ಕೈಗೆ ಬಟ್ಟೆ ಕಟ್ಟಿ ರಕ್ತಸ್ರಾವ ತಡೆಯಲು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಕೆಲವರು ಅಂಬುಲೆನ್ಸ್ ಗೆ ಕರೆ ಮಾಡಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ.

ತರಬೇತಿ ಹಾಗೂ ಸುರಕ್ಷತೆ ನೀಡದೆ ಕೆಲಸ ಮಾಡುವಂತೆ ಹೇಳಿದ ಅಪಾರ್ಟ್‍ಮೆಂಟ್ ಮಾಲೀಕ ಕುಮಾರ್ ವಿರುದ್ಧ ಕೊಣನಕುಂಟೆ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *