ಬೆಂಗಳೂರು: ಮನೆ ನಂ.35ರಲ್ಲಿ 80 ಮಂದಿ ವಾಸವಾಗಿದ್ದರು ಎಂಬ ರಾಹುಲ್ ಗಾಂಧಿ (Rahul Gandhi) ಆರೋಪಕ್ಕೆ ಮನೆ ಮಾಲೀಕ ಪ್ರತಿಕ್ರಿಯಿಸಿದ್ದು, 10*15 ಅಡಿಯಲ್ಲಿ ಎಷ್ಟು ಜನ ಇರೋಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ.
`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಬೆಳ್ಳಂದೂರಿನ ಮನೆ ಮಾಲೀಕ ಜಯರಾಮ್ ರೆಡ್ಡಿ, ನಾನು ಬಿಜೆಪಿ ಕಾರ್ಯಕರ್ತನಲ್ಲ. ನನ್ನ ಮಕ್ಕಳಿಗೂ ಇಂಥದ್ದೇ ಪಕ್ಷಕ್ಕೆ ವೋಟ್ ಹಾಕಿ ಎಂದು ಹೇಳಿಲ್ಲ. ಯಾರಾದರೂ ಬಂದು ಪರಿಶೀಲನೆ ಮಾಡಲಿ. ಮುನಿರೆಡ್ಡಿ ಗಾರ್ಡನ್‍ನ ಮನೆ ನಂಬರ್ 35 ನನ್ನದೇ. ಕಳೆದ 15 ವರ್ಷಗಳಿಂದ ಬಾಡಿಗೆಗೆ ಕೊಡುತ್ತಿದ್ದೇನೆ. ಎಲ್ರೂ ಹಿಂದಿ ಹುಡುಗರು. ಮೂರು ಜನರ ಮೇಲೆ ನಾನು ಬಾಡಿಗೆಗೆ ಕೊಡಲ್ಲ. 10*10ನ ರೂಮ್‍ನಲ್ಲಿ 80 ಜನಕ್ಕೆ ಬಾಡಿಗೆಗೆ ಕೊಡೋಕೆ ಆಗುತ್ತಾ? ಕಾಂಗ್ರೆಸ್ (Congress) ನಾಯಕರು ಮಾಡಿರುವ ಆರೋಪ ಸುಳ್ಳು. ಅಲ್ಲಿ ಅಷ್ಟು ಜನ ವಾಸ ಮಾಡೋಕೆ ಆಗಲ್ಲ. ಅರವಿಂದ್ ಲಿಂಬಾವಳಿ ಹೇಳಿದ್ದು ಸರಿ ಇದೆ ಎಂದಿದ್ದಾರೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಯಾವುದೇ ಅಕ್ರಮ ಆಗಿಲ್ಲ: ರಾಹುಲ್ ಗಾಂಧಿ ಆರೋಪಕ್ಕೆ ದಾಖಲೆ ಸಮೇತ ಲಿಂಬಾವಳಿ ತಿರುಗೇಟು
ಬಾಡಿಗೆಗೆ ಇದ್ದವರು ಕೋವಿಡ್ ವೇಳೆ ಎಲ್ಲರೂ ಅವರವರ ಊರಿನ ಕಡೆ ಹೋದರು. ಅಲ್ಲಿ ಈಗ ಮತ ಚಲಾಯಿಸುವವರು ಮೂವರು ಇದ್ದಾರೆ. 80 ಜನ ಎಲ್ಲಿಂದ ಬಂದಿದ್ದಾರೆ? 80 ಮಂದಿಗೆ ನಾವು ಮನೆ ಕೊಡೋಕೆ ಆಗುತ್ತಾ? ಗಾರ್ಡನ್ ಕೆಲಸ, ಸೆಕ್ಯೂರಿಟಿ ಕೆಲಸ ಅಂತಾ ಬಾಡಿಗೆ ಮನೆಗೆ ಬರ್ತಾರೆ. ಪರ್ಮನೆಂಟ್ ಆಗಿ ಇರೋರು 2ವರ್ಷದವರೆಗೆ ಮನೆಯಲ್ಲಿ ಇರ್ತಾರೆ ಎಂದಿದ್ದಾರೆ.
ಮಹಾದೇವಪುರ ಕ್ಷೇತ್ರದ ಫಲಿತಾಂಶವನ್ನು ಸಮೀಕ್ಷೆ ಮಾಡಿದಾಗ ಮತಗಳ್ಳತನ (Vote Fraud) ಆಗಿರುವುದು ತಿಳಿದುಬಂದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇನ್ನೂ ಕರ್ನಾಟಕದಲ್ಲಿ ಮತಗಳ್ಳತನ ಆಗಿದೆ ಎಂದು ರಾಹುಲ್ ಗಾಂಧಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಸಮಾವೇಶದಲ್ಲಿ ಇಂದು (ಆ.8) ಪಾಲ್ಗೊಂಡಿದ್ದರು. ಇದನ್ನೂ ಓದಿ: ಮತಗಳ್ಳತನ ಆರೋಪ; ಚುನಾವಣಾ ಆಯೋಗಕ್ಕೆ ಕೆಪಿಸಿಸಿ ದೂರು – ಅಂತರ ಕಾಯ್ದುಕೊಂಡ ರಾಗಾ