Bengaluru City
9 ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿ ಹೊರ ಹಾಕಿದ ಮನೆ ಮಾಲೀಕನ ಮಗ!

ಬೆಂಗಳೂರು: ಲೀಸ್ ಗಿದ್ದವರ ಮನೆಗೆ ನುಗ್ಗಿ ಮನೆ ಮಾಲೀಕನ ಮಗ ಗರ್ಭಿಣಿ ಮೇಲೆ ಹಲ್ಲೆ ಮಾಡಿ ನಂತ್ರ ಮನೆ ಸಾಮಾನುಗಳನ್ನು ಹೊರಹಾಕಿದ ಘಟನೆಯೊಂದು ನಗರದಲ್ಲಿ ನಡೆದಿದೆ.
ಈ ಘಟನೆ ಹೊಸಕೆರೆಹಳ್ಳಿಯ ಬಿಡಿಎ ಲೇಔಟ್ ನಲ್ಲಿ ಭಾನುವಾರ ನಡೆದಿದೆ. ಘಟನೆ ಸಂಬಂಧ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ, ಕೆಂಚಯ್ಯ, ಭವಾನಿ, ಚಲುವಯ್ಯ ಹಾಗೂ ಅನ್ನ ಪೂರ್ಣ ಇವರುಗಳನ್ನು ಬಂಧಿಸಿದ್ದಾರೆ.
ಏನಿದು ಘಟನೆ?: ರವೀಶ್ ತನ್ನ ಪತ್ನಿ ಹಾಗೂ ಅಜ್ಜಿಯೊಂದಿಗೆ ಬಿಡಿಎ ಲೇ ಔಟ್ ನಲ್ಲಿ 10 ಲಕ್ಷ ರೂ. ಲೀಸ್ ಗೆ ಮನೆ ಪಡೆದಿದ್ದರು. ನಿನ್ನೆ 9 ತಿಂಗಳ ಗರ್ಭಿಣಿ ಲಕ್ಷ್ಮೀ ಹಾಗೂ ಆಕೆಯ ಅಜ್ಜಿ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ್ ತನ್ನ ಗ್ಯಾಂಗ್ ನೊಂದಿಗೆ ಮನೆಗೆ ನುಗ್ಗಿ ಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ ಮನೆಯ ಸಾಮಾನುಗಳನ್ನೆಲ್ಲಾ ಹೊರ ಹಾಕುವ ಮೂಲಕ ಗೂಂಡಾಗಿರಿ ಮೆರೆದಿದ್ದಾನೆ.
ಹಲ್ಲೆಯಿಂದಾಗಿ ಲಕ್ಷ್ಮೀ ಮಾನಸಿಕವಾಗಿ ಕುಗ್ಗಿದ್ದು, ಗರ್ಭದಲ್ಲಿರೋ ಮಗುವಿನ ಹಾರ್ಟ್ ಬೀಟ್ ಕಡಿಮೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ಯಾನಿಂಗ್ ಮಾಡೋ ತನಕ ಏನನ್ನೂ ಹೇಳೋಕೆ ಆಗಲ್ಲ ಅಂತ ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ರವೀಶ್ ಹಾಗೂ ಅವರ ಪತ್ನಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಐವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರೋ ಮನೆ ಮಾಲೀಕ ಬಸವೇಗೌಡನ ಪತ್ತೆಗೆ ಬಲೆ ಬೀಸಿದ್ದಾರೆ.
