ಬೆಳಗಾವಿ: ವಿಧವೆ ಮೇಲೆ ಅತ್ಯಾಚಾರ ಎಸಗಿ ನಂತರ ಹತ್ಯೆ ಮಾಡಿದ್ದ ಅಪರಾಧಿಗೆ ಬುಧವಾರ ಬೆಳಗಾವಿಯ ಎಂಟನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ರಮೇಶ್ ಜಾಧವ್ (31) ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿ. ಖಡಕಲಾಟ ಗ್ರಾಮದಲ್ಲಿ 2016ರಲ್ಲಿ ಘಟನೆ ನಡೆದಿತ್ತು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ನೀಡಿದೆ.
Advertisement
Advertisement
ಅಪರಾಧಿ ರಮೇಶ್ ಪರಿಚಿತ ಮಹಿಳೆಗೆ ಜನತಾ ಮನೆ ಕೊಡಿಸುವುದಾಗಿ ನಂಬಿಸಿದ್ದ. ಈ ನಿಟ್ಟಿನಲ್ಲಿ 2016 ಅಕ್ಟೋಬರ್ 21ರಂದು ರಾತ್ರಿ ಮಹಿಳೆಯ ಮನೆಗೆ ಹೋಗಿ ಫೋಟೋ ತೆಗೆಸುವುದಿದೆ ಎಂದು ಫೋಟೋ ಸ್ಟೂಡಿಯೋಗೆ ಕರೆದುಕೊಂಡು ಹೋಗಿದ್ದ. ಬಳಿಕ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಹೋಗಿ ಸಹಿ ಮಾಡಿ ಬರಬೇಕೆಂದು ಹೇಳಿ ಖಡಕಲಾಟ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಒಳಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದ. ಅತ್ಯಾಚಾರಕ್ಕೆ ಒಳಗಾದ ಮಹಿಳೆ ಕಿರುಚುತ್ತಿದ್ದಂತೆ ತನ್ನ ಕೃತ್ಯ ಜನರಿಗೆ ತಿಳಿಯುತ್ತದೆ ಎಂದು ಅರಿತ ರಮೇಶ್, ಕಲ್ಲಿನಿಂದ ಮಹಿಳೆಯ ತಲೆಗೆ ಜಜ್ಜಿ ಬರ್ಬರವಾಗಿ ಕೊಲೆ ಮಾಡಿ, ಘಟನಾ ಸ್ಥಳದಿಂದ ಪರಾರಿಯಾಗಿದ್ದ.
Advertisement
Advertisement
ಈ ಕುರಿತು ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ರಮೇಶ್ ಕೃತ್ಯವನ್ನು ಬಯಲಿಗೆ ಎಳೆದಿದ್ದರು. ನಿಪ್ಪಾಣಿ ಪೊಲೀಸ್ ಠಾಣೆಯ ತನಿಖಾಧಿಕಾರಿ ಕಿಶೋರ್ ಭರಣಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿ.ಬಿ.ಸೂರ್ಯವಂಶಿ ಅವರು, ಅಪರಾಧಿಗೆ ಒಂದು ಲಕ್ಷ ರೂ. ದಂಡ ಹಾಗೂ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಕಿರಣ ಪಾಟೀಲ್ ವಾದ ಮಂಡಿಸಿದರು.