ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಾಪು ತಾಲೂಕಿನ ಉದ್ಯಾವರದ ಕಲ್ಸಂಕದಲ್ಲಿ ಮನೆಯೊಂದು ಕುಸಿದು ಬಿದ್ದಿದೆ.
ಕಾಪು ತಾಲೂಕಿನ ಉದ್ಯಾನವರ ಶೇಖರ ಪೂಜಾರಿ ಎಂಬವರಿಗೆ ಸೇರಿದ್ದ ಮನೆ ಸಂಪೂರ್ಣವಾಗಿ ನೆಲಸಮವಾಗಿದೆ. ಮನೆ ಕುಸಿತ ಸಂದರ್ಭದಲ್ಲಿ ಕುಟುಂಬಸ್ಥರು ಹೊರಗಡೆ ಹೋಗಿದ್ದರಿಂದ ಆಗಬಹುದಾದ ದುರಂತ ತಪ್ಪಿದೆ. ಸದ್ಯ ಮನೆ ತೆರವು ಕಾರ್ಯ ನಡೆಯುತ್ತಿದ್ದು, ಪೀಠೋಪಕರಣ, ಪಾತ್ರೆಗಳನ್ನು ಹೊರ ತೆಗೆಯಲು ಸ್ಥಳೀಯರು ಸಹಕರಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ – ಶಾಲಾ, ಕಾಲೇಜುಗಳಿಗೆ ರಜೆ
ತಗ್ಗು ಪ್ರದೇಶದಲ್ಲಿ ಮನೆ ಇರುವುದರಿಂದ ಮನೆಯ ಅಡಿಪಾಯ ತೋಯ್ದು ಹೋಗಿದೆ. ಹಿಂಬದಿ ಗೋಡೆ ಮತ್ತು ಮುಂಭಾಗದ ಗೋಡೆ ಸಂಪೂರ್ಣ ಕುಸಿದ ಪರಿಣಾಮ ಸಂಪೂರ್ಣ ಮನೆಯೇ ನೆಲಕ್ಕುರುಳಿ ಬಿದ್ದಿದೆ ಎಂದು ಸ್ಥಳೀಯ ನಿವಾಸಿ ಸುಂದರ್ ತಿಳಿಸಿದ್ದಾರೆ.
ಇದಲ್ಲದೇ ಪಡುಬಿದ್ರೆ ಭಾಗದಲ್ಲಿ ಕೃಷಿಭೂಮಿಗೆ ಮಳೆ ನೀರು ನುಗ್ಗಿದ್ದು, ಭತ್ತದ ಪೈರುಗಳಿಗೆ ಹಾನಿಯಾಗಿದೆ. ಉಳುಮೆ ಮತ್ತು ನಾಟಿ ಕಾರ್ಯಕ್ಕೂ ಮುಂಗಾರು ಮಳೆ ಅಡ್ಡಿಯುಂಟು ಮಾಡಿದೆ. ಒಟ್ಟಿನಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಕೊಡಗಲ್ಲಿ ಮಳೆ, ಶಾಲೆ-ಕಾಲೇಜಿಗೆ ರಜೆ – ಉಡುಪಿಯಲ್ಲಿ ಭಾರೀ ಮಳೆ, ಆದ್ರೆ ರಜೆ ಕ್ಯಾನ್ಸಲ್