ಹಾಸನ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಮನೆಗೆ ಬೆಂಕಿ ಬಿದ್ದು ಸುಮಾರು 1.25 ಲಕ್ಷ ನಗದು, ಒಡವೆ ಹಾಗೂ ಗೃಹಪಯೋಗಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಕಾಡನೂರು ಗ್ರಾಮದಲ್ಲಿ ನಡೆದಿದೆ.
ದೊಡ್ಡಕಾಡನೂರು ಗ್ರಾಮದ ನಿವಾಸಿ ಮಂಜುಳಾ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಪರಿಣಾಮ ಮನೆಗೆ ಬೆಂಕಿ ಹೊತ್ತಿಕೊಂಡು ಗೃಹಪಯೋಗಿ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದೆ. ಇದೇ ವೇಳೆ ಮನೆಯಲ್ಲಿಟ್ಟಿದ್ದ ಸುಮಾರು 1.25 ಲಕ್ಷ ರೂ. ಹಣ ಹಾಗೂ ಬಂಗಾರದ ಒಡವೆಗಳೆಲ್ಲಾ ಬೆಂಕಿಗೆ ಆಹುತಿಯಾಗಿದೆ.
Advertisement
Advertisement
ಮಂಜುಳಾ ಅವರು ಬ್ಯೂಟಿ ಪಾರ್ಲರ್ ನಡೆಸುತಿದ್ದು, ತನ್ನ ತಾಯಿಯೊಂದಿಗೆ ಈ ಮನೆಯಲ್ಲಿ ವಾಸವಿದ್ದರು. ಆದರೆ ಅವಘಡ ಸಂಭವಿಸಿದ್ದ ವೇಳೆ ಮಂಜುಳಾ ಹಾಗೂ ಅವರ ತಾಯಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಆಗಿಲ್ಲ. ಮನೆಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ ಅಷ್ಟರಲ್ಲಿ ಮನೆಯೊಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದ್ದವು. ಆದರೆ ಅದೃಷ್ಟವಶಾತ್ ಮನೆಯಲ್ಲಿದ್ದ ಎರಡು ಭರ್ತಿಯಾಗಿದ್ದ ಗ್ಯಾಸ್ ಸಿಲಿಂಡರ್ ಗಳಿಗೆ ಬೆಂಕಿ ಹೊತ್ತಿಕೊಂಡಿರಲಿಲ್ಲ. ಒಂದು ವೇಳೆ ಸಿಲಿಂಡರ್ ಬ್ಲಾಸ್ಟ್ ಆಗಿದ್ದರೆ ಇನ್ನಷ್ಟು ಅನಾಹುತವಾಗುತ್ತಿತ್ತು.
Advertisement
Advertisement
ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಗ್ರಾಮಸ್ಥರು ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸುಟ್ಟ ವಸ್ತುಗಳನ್ನು ಮನೆಯಿಂದ ಹೊರತಂದಿದ್ದಾರೆ.