– ಮೆರವಣಿಗೆ ಜಾಗಕ್ಕೆ ಭೂತಯ್ಯನ ಸರ್ಕಲ್ ಹೆಸರು
– ಕಟ್ಟೆ ಕಟ್ಟಿ ಹೂವಿನ ಗಿಡ ನೆಟ್ಟು ಮರ ರಕ್ಷಣೆ
ಚಿಕ್ಕಮಗಳೂರು: ಭೂತಯ್ಯನ ಮಗ ಅಯ್ಯು. ಭಾರತೀಯ ಚಿತ್ರರಂಗದ ಜೀವಂತ ದಂತಕಥೆ. 50 ವರ್ಷಗಳಲ್ಲಿ ಸಾವಿರಾರು ಸಿನಿಮಾಗಳು ಬಂದರೂ ಜನಮಾನಸದಲ್ಲಿ ಹಚ್ಚಹಸಿರಾಗಿರೋ ಸಿನಿಮಾ. ಆ ಚಿತ್ರದ ಒಂದೊಂದು ದೃಶ್ಯವೂ ಒಂದೊಂದು ಇತಿಹಾಸ. ದೇವಯ್ಯ ನೇಣು ಹಾಕಿಕೊಂಡಿದ್ದು, ಭೂತಯ್ಯನ ಮೃತನ ದೇಹವನ್ನ ಊರಲ್ಲಿ ಮೆರವಣಿಗೆ ಮಾಡಿದ್ದು, ಎರಡು ರೂಪಾಯಿಯಲ್ಲಿ ನಾಲ್ವರು ಅನ್ನ… ಅನ್ನ…. ಅಂತ ಊಟ ಮಾಡಿದ್ದು. ಎಷ್ಟೇ ಬಾರಿ ನೋಡಿದ್ರು ಮತ್ತೆ ಮತ್ತೆ ನೋಡ್ಬೇಕು ಎನ್ನುವ ದೃಶ್ಯಗಳವು. ಆದ್ರೆ, ದೇವಯ್ಯ ನೇಣು ಹಾಕಿಕೊಂಡ ಮರ, ನಾಲ್ವರು ಊಟ ಮಾಡಿದ ಆ ಮನೆ ಇಂದಿಗೂ ಹಾಗೆಯೇ ಇದೆ.
ಕಳಸಾಪುರ ಗ್ರಾಮದ ಮಧ್ಯೆ ಇರೋ ಈ ಮರವನ್ನ ಊರಿನ ಯುವಕರು ಮರದ ಸುತ್ತಲೂ ಕಟ್ಟೆ ಕಟ್ಟಿ ಮರದ ಸುತ್ತಲೂ ಹೂವಿನ ಗಿಡ ಹಾಕಿ ರಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿ ಕೂಡ ಹಾಗೆ ಇದ್ದು, ಮನೆಗಳಿಗೆ ಸುಣ್ಣ ಬಣ್ಣ ಬಳಿದಿರುವುದರಿಂದ ಹೊಸತು ಎಂದು ಅನ್ನಿಸಿಕೊಳ್ಳುತ್ತಿದೆ. ಊರಿನ ಜನ ಭೂತಯ್ಯನನ್ನ ಮೆರವಣಿಗೆ ಮಾಡಿದ ಬೀದಿಗೆ ಭೂತಯ್ಯನ ಸರ್ಕಲ್ ಎಂದೇ ಹೆಸರಿಟ್ಟಿದ್ದಾರೆ. ಅಂದು ಚಿಕ್ಕ ಹುಡುಗರಾಗಿದ್ದವರು ವೃದ್ಧರಾಗಿ ಎಲ್ಲಾ ಜಾಗವನ್ನು ನೆನೆದು “ಇದೇ ಆ ಜಾಗ, ಇದೇ ಜಾಗ” ಎಂದು ಚಿತ್ರಕ್ಕಾಗಿ ಸಹಕರಿಸಿದ್ದನ್ನ ನೆನೆಯುತ್ತಿದ್ದಾರೆ. ಇದೇ ಚಿತ್ರದಲ್ಲಿ ವಿಷ್ಣುವರ್ಧನ್ ತಂದೆ ದೇವಯ್ಯನ ಪಾತ್ರಧಾರಿ ನೇಣು ಬಿಗಿದುಕೊಂಡಿದ್ದು ಇದೇ ಮರದಲ್ಲಿ.
1974 ರಲ್ಲಿ ತೆರೆಕಂಡ ಸಿದ್ದಲಿಂಗಯ್ಯ ನಿರ್ದೇಶನದ ಭೂತಯ್ಯನಮಗ ಅಯ್ಯು ಚಿತ್ರದಲ್ಲಿ ಎರಡು ರೂಪಾಯಿಗೆ ನಾಲ್ವರು “ಅನ್ನ ಅನ್ನ” ಅಂತ ಊಟ ಮಾಡಿದ ಹೋಟೆಲ್ ಈಗಲೂ ಹಾಗೆಯೇ ಇದೆ. ಮನೆ ಚಿತ್ರಕ್ಕಾಗಿ ಹೋಟೆಲ್ ಮಾಡಿಕೊಂಡಿದ್ದರು. ಹೊಟೇಲ್ ಮಾಲೀಕನೊಂದಿಗೆ ನಟ ದಿನೇಶ್ ಹಾಗೂ ಸಹಚರರು ಕೂರುವುದಕ್ಕೂ ದುಡ್ ಕೊಡ್ಬೇಕಾ ಸ್ವಾಮಿ ಅಂದಿದ್ದು ಇದೇ ಜಾಗದಲ್ಲಿ. ಇಂದಿಗೂ ಆ ದೃಶ್ಯ ಕಂಡು ಜನ ಹುಸಿ ನಗ್ತಾರೆ. ಲೋಕನಾಥ್ ಉಪ್ಪಿನಕಾಯಿ ಜಾಡಿ ಕದಿಯುತ್ತಿದ್ದದ್ದು ಮನೆ, ವಿಷ್ಣುವರ್ಧನ್ ಮಚ್ಚನ್ನ ಮಸೆದ ಜಾಗ ಸೇರಿ ಚಿತ್ರದ ಒಂದೊಂದು ದೃಶ್ಯದ ಜಾಗ ಕಂಡು ಸಿನಿಮಾವನ್ನ ನೆನೆಯುತ್ತಿದ್ದಾರೆ.
ಹತ್ತಾರು ಕೋಟಿ ಬಂಡವಾಳ ಹೂಡಿ ತೆಗೆದ ಸಿನಿಮಾಗಳು ನೂರು ದಿನ ಓಡುವಷ್ಟರಲ್ಲಿ ಮಕಾಡೆ ಮಲಗಿರುತ್ತದೆ. ಸಾಲದಕ್ಕೆ ಸಿನಿಮಾದ ಗೆಲುವಿಗಾಗಿ ಚಿತ್ರತಂಡ ಐಟಂ ಸಾಂಗ್, ಅದು-ಇದು ಅಂತೆಲ್ಲಾ ಸರ್ಕಸ್ ಮಾಡಿರುತ್ತದೆ. ಆದರೆ ಅಪ್ಪಟ ಹಳ್ಳಿ ಸೊಗಡಿನ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. 45 ವರ್ಷವಾದ್ರು ಈ ಚಿತ್ರದ ಒಂದೊಂದು ದೃಶ್ಯ ಕೂಡ ಗ್ರಾಮಸ್ಥರಿಗೆ ಕಣ್ಣಿಗೆ ಕಟ್ಟಿದಂತಿದೆ.