ಶ್ರೀನಗರ: ಉಗ್ರರ ನಡುವಿನ ಕಾದಾಟದಲ್ಲಿ ಹುತಾತ್ಮರಾದ ಸೈನಿಕನ ಮೃತದೇಹದ ಅಂತ್ಯಕ್ರಿಯೆಗೂ ಮುನ್ನವೇ ಯೋಧನ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆ ಜಮ್ಮು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ನಡೆದಿದೆ.
ಭಾರತೀಯ ಸೇನಾ ಪಡೆಯ ಯೋಧ ಲ್ಯಾನ್ಸ್ ನಾಯಕ್ ರಂಜಿತ್ ಸಿಂಗ್ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು. ಅವರ ಅಂತ್ಯಕ್ರಿಯೆ ನಡೆಸಲು ಮಂಗಳವಾರ ಸಿದ್ಧತೆ ನಡೆಸಲಾಗಿತ್ತು. ಆದರೆ ಸೋಮವಾರ ರಾತ್ರಿಯೇ ತುಂಬು ಗರ್ಭಿಣಿಯಾಗಿದ್ದ ರಂಜಿತ್ ಸಿಂಗ್ ಅವರ ಪತ್ನಿ ಹೆರಿಗೆ ನೋವಿನಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
Advertisement
Advertisement
ಪತಿಯ ಅಂತ್ಯಕ್ರಿಯೆ ವೇಳೆ ಕಿಕ್ಕಿರಿದು ಸೇರಿದ್ದ ಜನರ ನಡುವೆ ಆಗತಾನೇ ಜನಿಸಿದ ಮಗುವಿನೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಪತ್ನಿ ಸ್ಥಳಕ್ಕೆ ಆಗಮಿಸಿದ್ದರು. ಇದನ್ನು ಕಂಡ ಎಲ್ಲರ ಕಣ್ಣಲ್ಲಿ ನೀರು ಜಿನುಗಿತ್ತು. ಸರ್ಕಾರಿ ಗೌರವಗಳೊಂದಿಗೆ ರಂಜಿತ್ ಸಿಂಗ್ ರ ಅಂತ್ಯಕ್ರಿಯೆ ನಡೆಸಲಾಯಿತು.
Advertisement
ಯೋಧ ರಂಜಿತ್ ಸಿಂಗ್ ಸೇರಿ ಜಮ್ಮು ಕಾಶ್ಮೀರ ಮೂವರು ಯೋಧರು ಜಮ್ಮುವಿನ ರಜೌರಿ ಜಿಲ್ಲೆಯ ಸುಂದರ್ ಬಿನಿ ಸೆಕ್ಟರ್ ನ ಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದರು. ಅಲ್ಲದೇ ಭಾರೀ ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದ ಇಬ್ಬರು ಪಾಕ್ ನುಸುಳುಕೋರರನನ್ನು ಭಾನುವಾರ ಹತ್ಯೆ ಮಾಡಲಾಗಿತ್ತು.
Advertisement
ಅಂದಹಾಗೇ ಹುತಾತ್ಮ ಯೋಧ ರಂಜಿತ್ ಸಿಂಗ್ ಅವರಿಗೆ ಮದುವೆಯಾದ 10 ವರ್ಷಗಳ ಬಳಿಕ ಮಗು ಜನಿಸಿದೆ. ಆದರೆ ವಿಧಿಯ ನಿಯಮವೇ ಬೇರೆಯಾಗಿದೆ ಎಂದು ಸ್ಥಳೀಯರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. 2003 ರಲ್ಲಿ ರಂಜಿತ್ ಸಿಂಗ್ ಸೈನ್ಯಕ್ಕೆ ಸೇರಿದ್ದರು. ಅಲ್ಲದೇ ಮಗುವಿನ ನಿರೀಕ್ಷೆಯಲ್ಲಿದ್ದ ರಂಜಿತ್ ಕೆಲವೇ ದಿನಗಳಲ್ಲಿ ರಜೆ ಪಡೆದು ಊರಿಗೆ ಆಗಮಿಸುವ ಸಿದ್ಧತೆಯಲ್ಲಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv