Connect with us

Latest

ಹೋಟೆಲ್‍ಗಳಲ್ಲಿ MRPಗಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಲು ಸುಪ್ರೀಂ ಅನುಮತಿ

Published

on

ನವದೆಹಲಿ: ರೆಸ್ಟೊರೆಂಟ್ ಮತ್ತು ಹೋಟೆಲ್ ಗಳು ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಪ್ಯಾಕೇಜ್ಡ್ ನೀರಿನ ಬಾಟಲಿಗಳನ್ನು ಮಾರಾಟ ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಫೆಡರೇಷನ್ ಆಫ್ ಹೋಟೆಲ್ ಅಂಡ್ ರೆಸ್ಟೊರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ(FHRAI) ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಹೋಟೆಲ್ ಮತ್ತು ರೆಸ್ಟೊರೆಂಟ್ ಗಳು ಲೀಗಲ್ ಮೆಟ್ರೋಲಜಿ ಕಾಯ್ದೆಯ ವ್ಯಾಪ್ತಿಯ ಅಡಿಯಲ್ಲಿ ಬಾರದೇ ಇದ್ದ ಕಾರಣ ನೀರಿನ ಬಾಟಲಿಗಳನ್ನು ಎಂಆರ್ ಪಿ  ಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಅವಕಾಶವಿದೆ ಎಂದು ಹೇಳಿದೆ.

ಕೇಂದ್ರದ ವಾದವನ್ನು ತಿರಸ್ಕರಿಸಿ ನ್ಯಾ. ಎಫ್ ನಾರಿಮನ್ ಪೀಠ, ಹೋಟೆಲ್, ರೆಸ್ಟೊರೆಂಟ್ ಗೆ ಯಾರೂ ಕುಡಿಯವ ಸಲುವಾಗಿ ನೀರನ್ನು ಖರೀದಿಸಲು ಹೋಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಯಲ್ಲಿ ಯಾರೇ ನೀರಿನ ಬಾಟಲಿಗಳನ್ನು ಮಾರಾಟ ಮಾಡಿದರೆ ಅವರು ದಂಡ ತೆರಬೇಕಾಗುತ್ತದೆ ಅಥವಾ ಜೈಲು ಶಿಕ್ಷೆ ಎದುರಿಸಬೇಕು ಎಂದು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿತ್ತು. ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಪ್ಯಾಕೇಜ್ಡ್ ನೀರಿನ ಬಾಟಲಿ ಮಾರಾಟ ಮಾಡುವುದು ತೆರಿಗೆ ವಂಚನೆಗೆ ಎಡೆ ಮಾಡಿಕೊಡುತ್ತದೆ ಎಂದು ವಾದಿಸಿತ್ತು.

ಹೋಟೆಲ್‍ನವರು ನಿರ್ದಿಷ್ಟ ದರಕ್ಕೆ ನೀರಿನ ಬಾಟಲಿ ಖರೀದಿಸಿರುತ್ತಾರೆ. ಅದನ್ನ ಎಂಆರ್ ಪಿ ಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ರೆ ಸೇವಾ ತೆರಿಗೆ, ಅಬಕಾರಿ ಸುಂಕ ರೂಪದಲ್ಲಿ ಸರ್ಕಾರಕ್ಕೆ ಬರಬೇಕಾದ ಹೆಚ್ಚುವರಿ ಆದಾಯಕ್ಕೆ ನಷ್ಟ ಉಂಟಾಗುತ್ತದೆ ಎಂದು ಸರ್ಕಾರ ಕೋರ್ಟ್‍ಗೆ ತಿಳಿಸಿತ್ತು.

2009ರ ಕಾಯ್ದೆಯಡಿ ನೀರಿನ ಬಾಟಲಿಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡೋ ರೆಸ್ಟೊರೆಂಟ್ ಹಾಗೂ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳುವ ಸರ್ಕಾರದ ಅಧಿಕಾರವನ್ನು ದೆಹಲಿ ಹೈ ಕೋರ್ಟ್ 2015ರ ಆಗಸ್ಟ್ ನಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶಕ್ಕೆ ಪ್ರಶ್ನಿಸಿ ಎಫ್‍ಹೆಚ್‍ಆರ್ ಎಐ ಮರುಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಆದ್ರೆ ಅದು ತಿರಸ್ಕೃತವಾದ  ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.

ಲಿಗಲ್ ಮೆಟ್ರೋಲಜಿ ಕಾಯ್ದೆ ಏನು ಹೇಳುತ್ತೆ?
ಪ್ಯಾಕೇಜ್ಡ್ ಉತ್ಪನ್ನಗಳನ್ನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಲೀಗಲ್ ಮೆಟ್ರೋಲಜಿ ಕಾಯ್ದೆ ಪ್ರಕಾರ ಅಪರಾಧ. ಯಾವುದೇ ವಸ್ತುವನ್ನು ಪೇಪರ್ ನಲ್ಲಿ  ಪ್ಯಾಕ್ ಮಾಡಿದ್ದರೂ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆ. ಕಡ್ಡಾಯವಾಗಿ ಪೊಟ್ಟಣ ಸಾಮಗ್ರಿ ನಿಯಮಾವಳಿಗಳನ್ನು ಪಾಲಿಸಿರಬೇಕು. ವಸ್ತುಗಳ ದರ ಹಾಗೂ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಮಾರಾಟಗಾರರ ಮೇಲೆ ಸ್ಥಳದಲ್ಲೇ ದಂಡ ವಿಧಿಸಲು ಅವಕಾಶವಿದೆ. ಕಾನೂನು ಮಾಪನಶಾಸ್ತ್ರ ಇಲಾಖೆ ವ್ಯಾಪ್ತಿಗೆ ಎಲ್ಲ ಅಂಗಡಿಗಳು, ಪೆಟ್ರೋಲ್ ಬಂಕ್, ಸೀಮೆಎಣ್ಣೆ ಮಾರಾಟಗಾರರು, ಬಟ್ಟೆ ಅಂಗಡಿಗಳು, ಪೊಟ್ಟಣ ತಯಾರಿಕಾ ಉದ್ಯಮಗಳು ಒಳಪಡುತ್ತದೆ.

ದಂಡ ಎಷ್ಟು?
ಯಾವುದೇ ಪ್ರೀ ಪ್ಯಾಕೇಜ್ಡ್ ಉತ್ಪನ್ನದ ಮೇಲೆ ನಮೂದಿಸಿರುವುದಕ್ಕೆ ಬದ್ಧವಾಗಿರದೆ ಅದನ್ನ ಮಾರಾಟ, ವಿತರಣೆ ಅಥವಾ ಡೆಲಿವರಿ ಮಾಡುವಾಗ ಸಿಕ್ಕಿಬಿದ್ದರೆ ಮೊದಲನೇ ಅಪರಾಧಕ್ಕಾಗಿ 25 ಸಾವಿರ ರೂ. ದಂಡ ಹಾಕುವ ಮೂಲಕ ಶಿಕ್ಷಿಸಲಾಗುತ್ತದೆ ಎಂದು ಲೀಗಲ್ ಮೆಟ್ರೊಲಜಿ ಕಾಯ್ದೆಯ ಸೆಕ್ಷನ್ 36 ಹೇಳುತ್ತದೆ. ಎರಡನೇ ಅಪರಾಧಕ್ಕೆ 50 ಸಾವಿರ ರೂ. ಹಾಗೂ ನಂತರದ ಅಪರಾಧಗಳಿಗೆ 1 ಲಕ್ಷ ರೂ ದಂಡ ಅಥವಾ 1 ವರ್ಷ ಜೈಲು ಶಿಕ್ಷೆ ಅಥವಾ ಎರಡೂ ಶಿಕ್ಷೆ ವಿಧಿಸಲಾಗುತ್ತದೆ.

ಮಲ್ಟಿಪ್ಲೆಕ್ಸ್ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಪ್ಯಾಕೇಜ್ಡ್ ನೀರಿನ ಬಾಟಲಿ ಹಾಗೂ ತಂಪು ಪಾನೀಯವನ್ನು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕಳೆದ ವರ್ಷ ಅಕ್ಟೋಬರ್ ನಲ್ಲಿ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಈ ಹಿಂದೆ ಟ್ವೀಟ್ ಮಾಡಿದ್ದರು.

 

Click to comment

Leave a Reply

Your email address will not be published. Required fields are marked *