ಹುಬ್ಬಳ್ಳಿ: ಚಿಕನ್ ತಿಂದ ನಂತರ ಬಿಲ್ ನೀಡುವ ವಿಚಾರದಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ವಾಗ್ವಾದ ನಡೆದು ಹಲ್ಲೆಯಾಗಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಗರದ ಪಿಬಿ ರಸ್ತೆಯ ನಿಯಾಜ್ ಹೋಟೆಲ್ ನಲ್ಲಿ ಘಟನೆ ನಡೆದಿದ್ದು, ಚಿಕನ್ ತಿಂದ ನಂತರ ಬಿಲ್ ಕೊಡುವ ವಿಚಾರಕ್ಕೆ ಹೋಟೆಲ್ ಸಿಬ್ಬಂದಿ ಗ್ರಾಹಕರನ್ನು ಮನಬಂದಂತೆ ಥಳಿಸಿದ್ದಾರೆ.
Advertisement
ಹುಬ್ಬಳ್ಳಿಯ ಗಬ್ಬೂರು ನಿವಾಸಿಗಳಾದ ಪ್ರಕಾಶ ಬಿದರಕುಂದಿ ಹಾಗೂ ಮುತ್ತಪ್ಪ ಬಿದರಕುಂದಿ ಎಂಬವರು ನಿಯಾಜ್ ಹೋಟೆಲಿನಲ್ಲಿ ಚಿಕನ್ ತಿಂದ ನಂತರ ಊಟ ಮಾಡಿ ಬಿಲ್ ಕೊಡಲು ಹೋಗಿದ್ದಾರೆ. ಆದರೆ ಹೋಟೆಲ್ ಬಿಲ್ ನಲ್ಲಿ 60 ರೂ. ವ್ಯತ್ಯಾಸವಾಗಿದೆ. ಇದರಿಂದ ಅಸಮಾಧಾನಗೊಂಡ ಗ್ರಾಹಕರು 60 ರೂ. ಹೆಚ್ಚು ಬಿಲ್ ಮಾಡಿದ್ದಕ್ಕೆ ಹಣವನ್ನು ಪಾವತಿ ಮಾಡುವುದಿಲ್ಲ ಎಂದಿದ್ದಾರೆ. ಆಗ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಗ್ರಾಹಕ ಹಾಗೂ ಹೊಟೇಲ್ ಸಿಬ್ಬಂದಿ ಮಧ್ಯೆ ಮಾರಾಮಾರಿ ಏರ್ಪಟ್ಟಿದೆ. ಆಗ ಹೋಟೆಲ್ ಸಿಬ್ಬಂದಿ ಗ್ರಾಹಕರಿಬ್ಬರ ಮೇಲೆ ನೀರಿನ ಜಗ್ ಹಾಗೂ ಕಬ್ಬಿಣದ ರಾಡ್ ಗಳಿಂದ ಹಲ್ಲೆ ಮಾಡಿದ್ದಾರೆ.
Advertisement
ಇಬ್ಬರು ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಗ್ರಾಹಕರು ಮದ್ಯ ಸೇವಿಸಿ ಹೋಟೆಲ್ ನಲ್ಲಿ ಗಲಾಟೆ ಮಾಡಿಕೊಂಡಿದ್ದು, ಹಲ್ಲೆ ವಿಡಿಯೋವನ್ನು ಇತರ ಗ್ರಾಹಕರು ಚಿತ್ರಿಕರಿಸಿದ್ದಾರೆ. ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.