ಕಲಬುರಗಿ: ಮನೆಯಲ್ಲಿ ಹಾಕಿಸಿದ ಬೋರ್ ವೆಲ್‍ನಲ್ಲಿ ಬಿಸಿನೀರು ಬರುತ್ತಿರುವ ಅಚ್ಚರಿ ಘಟನೆ ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿ ನಡೆದಿದೆ.
ಚಂದಾಪುರ ಪಟ್ಟಣದಲ್ಲಿ ಶಿವಕುಮಾರ್ ಐನೋಳಿ ಎಂಬುವವರ ಮನೆಯಲ್ಲಿ ಎರಡು ದಿನದ ಹಿಂದೆ ಬೋರ್ ಹಾಕಿಸಿದ್ದು, ಬೋರ್‌ವೆಲ್‌ನಲ್ಲಿ ಬಿಸಿನೀರು ಬರುತ್ತಿವೆ.
ಬೋರ್‌ವೆಲ್ ಹಾಕಿಸಿದ ನಂತರ ನೀರು ಬಳಕೆ ಮಾಡಲು ಮುಂದಾದಾಗ ನೀರು ಬಿಸಿಯಿರುವುದು ಗೊತ್ತಾಗಿದೆ. ಈ ಅಚ್ಚರಿ ವಿಷಯ ತಿಳಿಯುತ್ತಿದಂತೆ ಪಟ್ಟಣದ ಜನ ನೀರು ನೋಡಲು ಶಿವಕುಮಾರ್ ಮನೆಯತ್ತ ದೌಡಾಯಿಸುತ್ತಿದ್ದಾರೆ. ವಿಷಯ ತಿಳಿದ ಚಿಂಚೋಳಿ ತಹಶೀಲ್ದಾರ್ ಪಂಡಿತ ಬಿರಾದಾರ, ಮನೆಗೆ ಭೇಟಿ ನೀಡಿ ಬಿಸಿನೀರು ಬರುತ್ತಿರುವುದನ್ನು ಪರಿಶೀಲಿಸಿದ್ದಾರೆ.
ತಹಶೀಲ್ದಾರ್ ಅವರು ಭೂ ವಿಜ್ಞಾನಿಗಳನ್ನು ಕಳುಹಿಸಿ ಬಿಸಿನೀರು ಬರಲು ಕಾರಣ ಪತ್ತೆಹಚ್ಚುವಂತೆ ತಿಳಿಸುವುದಾಗಿ ಬೋರ್‌ವೆಲ್ ಮಾಲೀಕರಿಗೆ ತಿಳಿಸಿದ್ದಾರೆ. ಭೂ ವಿಜ್ಞಾನಿಗಳು ಬಂದು ಪರಿಶೀಲಿಸಿದ ನಂತರವಷ್ಟೇ ಬೋರ್‌ವೆಲ್‌ನಲ್ಲಿ ಬಿಸಿನೀರು ಬರಲು ಕಾರಣವೇನು ಎಂಬುದು ತಿಳಿಯಬೇಕಿದೆ.