ವಸತಿ ಶಾಲೆಯಲ್ಲಿ ತಿನ್ನಲು ಅನ್ನ ಸಿಗದೆ ವಿದ್ಯಾರ್ಥಿಗಳ ಕಣ್ಣೀರು

Public TV
1 Min Read
BDR principal darbar

ಬೀದರ್: ವಸತಿ ಶಾಲೆಯ ಮಕ್ಕಳು ತಿನ್ನಲು ಅನ್ನ ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದ್ದು, ಪ್ರಾಂಶುಪಾಲರು ಹಾಗೂ ಡಿ ಗ್ರೂಪ್ ನೌಕರರು ವಿದ್ಯಾರ್ಥಿಗಳಿಗೆ ಊಟ ಹಾಕದೆ ದರ್ಬಾರ್ ನಡೆಸುತ್ತಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿ ಗ್ರಾಮದಲ್ಲಿರುವ ವಸತಿ ಶಾಲೆಯಲ್ಲಿ ನಡೆದಿದೆ.

ವನಮಾರಪಳ್ಳಿ ಗ್ರಾಮದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಯ 450ಕ್ಕೂ ಹೆಚ್ಚು ಮಕ್ಕಳಿಗೆ ತಿನ್ನಲು ಅನ್ನ ಸಿಗದೆ ಪ್ರತಿದಿನ ನರಕಯಾತನೆ ಪಡುತ್ತಿದ್ದಾರೆ. ಸರ್ಕಾರದಿಂದ ಲಕ್ಷಾಂತರ ರೂ. ಅನುದಾನ ಬಂದರೂ ಮಕ್ಕಳಿಗೆ ಮಾತ್ರ ಊಟ, ಆಸನಗಳು ಸೇರಿದಂತೆ ಮೂಲಭೂತ ಸೌಕರ್ಯ ನೀಡದೆ ಮಹಾ ದೋಖಾ ಮಾಡುತ್ತಿದ್ದಾರೆ. ಅನ್ನ ನೀಡಿದರೂ ಅದರಲ್ಲಿ ಹುಳಗಳು ಇಲ್ಲಾ ಕೆಟ್ಟು ಹೋಗಿರುವ ಅನ್ನ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪ ಮಾಡುತ್ತಿದ್ದಾರೆ. ಜೊತೆಗೆ ಮಕ್ಕಳಿಗೆ ಆಸನದ ವ್ಯವಸ್ಥೆ ಕೂಡ ಇಲ್ಲದೆ ನೆಲದ ಮೇಲೆ ನಿದ್ದೆ ಮಾಡಬೇಕಾಗಿದೆ.

bdr principal darbar 2

ವಸತಿ ಶಾಲೆಯ ಮುಖ್ಯಸ್ಥ ಪ್ರಕಾರ, ಪ್ರತಿದಿನ ಒಂದೊಂದು ವಿವಿಧ ಆಹಾರವನ್ನು ಮಕ್ಕಳಿಗೆ ನೀಡಬೇಕು. ಆದರೆ ಇಲ್ಲಿಯ ಮಕ್ಕಳಿಗೆ ಅನ್ನವನ್ನೇ ಸರಿಯಾಗಿ ನೀಡುತ್ತಿಲ್ಲ. ಪ್ರತಿ ವರ್ಷ ವಸತಿ ಶಾಲೆಗೆ ಲಕ್ಷಾಂತರ ರೂ. ಅನುದಾನ ಬಂದರೂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತ್ರ ಭ್ರಷ್ಟಾಚಾರಕ್ಕೆ ಆಹುತಿಯಾಗಿ ಬಿಟ್ಟಿದ್ದಾರೆ.

bdr principal darbar 1

ಪ್ರತಿದಿನ ವಸತಿ ಶಾಲೆಯ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯುತ್ತಿದರೂ ಸ್ವಕ್ಷೇತ್ರದ ಸಚಿವರಾದ ಪ್ರಭು ಚವ್ಹಾಣ್ ಮಾತ್ರ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಸಚಿವರ ಗ್ರಾಮದಿಂದ ಕೂಗಳತೆ ದೂರದಲ್ಲಿರುವ ಈ ವಸತಿ ನಿಲಯದ ಮಕ್ಕಳ ಗೋಳು ಕೇಳದ ಸಚಿವರು ಏಕೆ ಸಚಿವ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ, ಇದೆಲ್ಲಾ ಡಿ ಗ್ರೂಪ್ ನೌಕರರ ಸಮಸ್ಯೆಯಿಂದ ಆಗಿದೆ ನನ್ನ ದರ್ಬಾರ್ ಏನು ಇಲ್ಲಾ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *