– ರಾಯಚೂರಿನಲ್ಲಿ ಉಚಿತವಾಗಿ ಊಟ ನೀಡಲು ಮುಂದಾದ ಸಂಘ-ಸಂಸ್ಥೆಗಳು
ರಾಯಚೂರು: ಇಡೀ ದೇಶವೇ ಲಾಕ್‍ಡೌನ್ ಆಗಿರುವುದರಿಂದ ಬಹಳಷ್ಟು ಜನರಿಗೆ ಊಟದ ಸಮಸ್ಯೆ ಎದುರಾಗಿದೆ. ಹೀಗಾಗಿ ರಾಯಚೂರಿನಲ್ಲಿ ಕೆಲ ಯುವಕರು ಹಾಗೂ ಕೆಲ ಸಂಘ ಸಂಸ್ಥೆಗಳು ಉಚಿತವಾಗಿ ಊಟವನ್ನು ನೀಡಲು ಮುಂದಾಗಿವೆ.
ರಸ್ತೆ ಬದಿಯ ಭಿಕ್ಷುಕರು, ನಿರ್ಗತಿಕರಿಗೆ ಊಟ ನೀಡಲಾಗುತ್ತಿದೆ. ಅಲ್ಲದೆ ಕರ್ತವ್ಯದ ಹಿನ್ನೆಲೆ ಸದಾ ಹೊರಗಡೆಯಿರುವ ಪೊಲೀಸ್ ಸಿಬ್ಬಂದಿ, ಆಸ್ಪತ್ರೆ ರೋಗಿಗಳಿಗು ಊಟವನ್ನು ಪ್ಯಾಕೇಟ್ ಮೂಲಕ ನೀಡಲಾಗುತ್ತಿದೆ. ಕೆಲ ಹೋಟೆಲ್ ಮಾಲೀಕರು, ಯುವಕರು ಕೈ ಜೋಡಿಸಿ ಊಟವನ್ನು ನೀಡುತ್ತಿದ್ದಾರೆ. ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಯ್ದುಕೊಂಡು ಊಟದ ಪ್ಯಾಕೇಟ್‍ಗಳನ್ನ ವಿತರಿಸಲಾಗುತ್ತಿದೆ.
ಹೀಗಿರುವಾಗ ಜಿಲ್ಲೆಯ ಕೆಲ ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ರೋಗಿಗಳ ಜೊತೆಗೆ ಬಂದ ಸಹಾಯಕರು ಊಟದ ಸಮಸ್ಯೆ ಎದುರಿಸುತ್ತಿದ್ದಾರೆ. ಊಟವಿಲ್ಲದೆ ಬಿಸ್ಕೆಟ್ ತಿಂದು ದಿನ ಕಳೆಯುತ್ತಿದ್ದಾರೆ. ಲಾಕ್‍ಡೌನ್ ಇರುವುದರಿಂದ ಊಟಕ್ಕೆ ಜಿಲ್ಲಾಡಳಿತವೇ ವ್ಯವಸ್ಥೆ ಮಾಡಬೇಕು ಎಂದು ರೋಗಿಗಳ ಕಡೆಯವರು ಕೇಳುತ್ತಿದ್ದಾರೆ. ಕಡಿಮೆ ದರದಲ್ಲಿ ಊಟದ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತೆ ಎಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ.