– ರೇಷ್ಮೆ ಸೀರೆ, ಮಾಸ್ಕ್, ಆಹಾರ ಸಾಮಗ್ರಿ ನೀಡಿದ ವೈದ್ಯರು
ಗದಗ: ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತ ರೋಗಿ 304ರ 59 ವರ್ಷದ ಮಹಿಳೆ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಇಂದು ಜಿಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು.
ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಿಬ್ಬಂದಿ ಚೆಪ್ಪಾಳೆ ತಟ್ಟುವುದರ ಮೂಲಕ ಆಸ್ಪತ್ರೆಯಿಂದ ಹೊರ ಕರೆತಂದರು. ನಂತರ ಮಹಿಳೆಗೆ ರೇಷ್ಮೆ ಸೀರೆ, ಮಾಸ್ಕ್, ಸ್ಯಾನಿಟೈಸರ್, ಆಹಾರ ಸಾಮಗ್ರಿಗಳನ್ನ ನೀಡಿದರು. ಆಸ್ಪತ್ರೆಯಿಂದ ಹೊರಗಡೆ ಬಂದ ಮಹಿಳೆ ವೈದ್ಯರಿಗೆ, ಜಿಲ್ಲಾಡಳಿತ ಸಿಬ್ಬಂದಿಗೆ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ಉಪಸ್ಥಿತಿ ಇದ್ದರು.
ರಂಗನವಾಡಿ ಗಲ್ಲಿ ನಿವಾಸಿ 59 ವರ್ಷದ ಮಹಿಳೆಯಲ್ಲಿ ಏಪ್ರಿಲ್ 16 ರಂದು ಸೋಂಕು ದೃಢಪಟ್ಟಿತ್ತು. ಮಹಿಳೆ ಅದೇ ಗಲ್ಲಿಯ ಗೆಳತಿ ರೋಗಿ 166 80 ವರ್ಷದ ವೃದ್ಧೆಯ ಸಂಪರ್ಕದಲ್ಲಿದ್ದರು. ಹಾಗಾಗಿ ಇವರಿಗೆ ಗದಗ ಜಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ತಂಡಗಳು ನಿರಂತರವಾಗಿ ಅವರಿಗೆ ಸುಮಾರು 14 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ನಂತರ ಮತ್ತೆ ಎರಡು ಬಾರಿ ಮತ್ತೆ ಗಂಟಲು ದೃವ ಪರೀಕ್ಷೆ ಮಾಡಲಾಗಿದೆ. ಎರಡೂ ವರದಿಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಮಾಡಲಾಗಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರೊಬ್ಬರು ಬಿಡುಗಡೆಯಾಗುತ್ತಿರುವುದು ಜಿಲ್ಲಾಡಳಿತ, ಜಿಲ್ಲಾ ವೈದ್ಯಕೀಯ ಸಿಬ್ಬಂದಿ ಮತ್ತು ಜಿಲ್ಲೆಯ ಜನತೆಯಲ್ಲಿ ಹರ್ಷ ಮೂಡಿಸಿದೆ.