ಅಂದು ತಂದೆಯ ವಿರುದ್ಧ ಸ್ಪರ್ಧೆ, ಇಂದು ಮಗನಿಗೆ ಬೆಂಬಲ

Public TV
3 Min Read
Bachegowda HDK Sharath

– ಶರತ್ ಬಚ್ಚೇಗೌಡ ಬೆಂಬಲಿಸಲು ಎಚ್‍ಡಿಕೆ ನಿರ್ಧಾರ
– ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಶರತ್ ಗುರುವಾರ ನಾಮಪತ್ರ ಸಲ್ಲಿಕೆ

ಬೆಂಗಳೂರು: ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್ ತೀರ್ಮಾನಿಸಿದ್ದು ಸಂಸದ ಬಚ್ಚೇಗೌಡ ಅವರ ಪುತ್ರ ಶರತ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ.

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಅಭ್ಯರ್ಥಿಯನ್ನು ಹಾಕದೇ ನಾವು ಬೆಂಬಲಿಸುತ್ತೇವೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

HDK 1

ಮಾಧ್ಯಮಗಳ ಜೊತೆ ಮಾತನಾಡಿದ ಅವರು, 15 ಕ್ಷೇತ್ರಗಳ ಪೈಕಿ 14ರಲ್ಲಿ ಮಾತ್ರ ನಾವು ಸ್ಪರ್ಧೆ ಮಾಡುತ್ತೇವೆ. ಹೊಸ ಕೋಟೆಯಲ್ಲಿ ಶರತ್ ಬಚ್ಚೇಗೌಡ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಪಕ್ಷೇತರ ಅಭ್ಯರ್ಥಿಗೆ ನಮ್ಮ ಅವಶ್ಯಕತೆ ಇದ್ದರೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್‍ಗೆ ಬಂದರೆ ಸೇರಿಸಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಅವರು ನಮ್ಮ ಮನೆಯವರೇ ಮುಂದೆ ಏನ್ ಆಗುತ್ತದೋ ನೋಡೋಣ ಎಂದು ಉತ್ತರಿಸಿದರು.

ಕಾಂಗ್ರೆಸ್, ಬಿಜೆಪಿಯ ಜೊತೆಗೆ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ ನೀಡುವುದರಿಂದ ಹೊಸಕೋಟೆಯಲ್ಲಿ ಚುನಾವಣಾ ಕಾವು ನಿಧಾನವಾಗಿ ಏರತೊಡಗಿದೆ.

sharath MTB

ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯಿಸಿದ್ದ ಎಂಟಿಬಿ ನಾಗರಾಜ್ ಹೊಸಕೋಟೆಯಲ್ಲಿ ನನ್ನ ವಿರುದ್ಧ ಶರತ್ ಸ್ಪರ್ಧಿಸಲಿ ನೋಡೋಣ ಎಂದು ಸವಾಲು ಎಸೆದಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಬೆಂಬಲಿಗರ ಜೊತೆ ಸಭೆ ನಡೆಸಿದ ಶರತ್ ಗುರುವಾರ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು.

ಶರತ್ ಬಂಡಾಯವಾಗಿ ಸ್ಪರ್ಧಿಸಲು ಮುಂದಾಗುತ್ತಿದ್ದಂತೆ ಹಿರಿಯ ನಾಯಕ ಅಶೋಕ್ ಅವರು ಪಕ್ಷದ ವಿರುದ್ಧ ಕೆಲಸ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅನರ್ಹರಿಗೆ ಮೋಸವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಶರತ್ ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಾರೆ. ನಾನೂ ಸಹ ಈ ಕುರಿತು ಅವರ ಬಳಿ ಮಾತನಾಡುತ್ತೇನೆ. ಅಭ್ಯರ್ಥಿ ಘೋಷಣೆಗೂ ಮೊದಲು ಇಂತಹ ಗೊಂದಲಗಳು ಸಹಜ. ಆದರೆ ಪಕ್ಷ ಒಂದು ಬಾರಿ ಅಭ್ಯರ್ಥಿಗಳನ್ನು ಘೋಷಿಸಿದರೆ ಯಾರೂ ಅದರ ವಿರುದ್ಧ ಮಾತನಾಡಬಾರದು. ಈ ರೀತಿಯ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ನಾನು ನಂಬಿದ್ದೇನೆ ಎಂದಿದ್ದರು.

SIDDARAMAIAH MTB NAGARAJ b

ಎಂಟಿಬಿ ರಾಜೀನಾಮೆ ನೀಡುವ ಮೊದಲು ಅವರ ಮನೆಗೆ ಡಿಕೆ ಶಿವಕುಮಾರ್ ತೆರಳಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯನವರು ತೆರಳಿ ರಾಜೀನಾಮೆ ನೀಡದಂತೆ ಮನವಿ ಮಾಡಿದ್ದರು. ಜೆಡಿಎಸ್, ಕೈ ನಾಯಕರ ಮಾತುಕತೆಯ ಹೊರತಾಗಿಯೂ ಎಂಟಿಬಿ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು.

ಈ ಹಿಂದೆ ಕುಮಾರಸ್ವಾಮಿ ಮುಂದೆಯೇ ಕೈ ಟ್ರಬಲ್ ಶೂಟರ್ ಶಿವಕುಮಾರ್ ಬೆಂಗಳೂರಿನ ಐವರು ಶಾಸಕರನ್ನು ನಾನೇ ಸೋಲಿಸುತ್ತೇನೆ ಎಂದು ಶಪಥ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಹೊಸಕೋಟೆಯ ಎಂಟಿಬಿ ನಾಗರಾಜ್, ಕೆಆರ್ ಪುರಂ ಭೈರತಿ ಬಸವರಾಜು, ಯಶವಂತಪುರದ ಎಸ್.ಟಿ.ಸೋಮಶೇಖರ್, ಮಹಾಲಕ್ಷ್ಮಿ ಲೇಔಟಿನ ಗೋಪಾಲಯ್ಯ ಹಾಗೂ ರಾಜರಾಜೇಶ್ವರಿ ನಗರದ ಮುನಿರತ್ನ ಅವರನ್ನು ಸೋಲಿಸುತ್ತೇನೆ ಡಿಕೆಶಿ ಹೇಳಿದ್ದರು.

Sharath MTB DKSHi

2014ರಲ್ಲಿ ಏನಾಗಿತ್ತು?
ದೇವೇಗೌಡರ ಬಗ್ಗೆ ಹರಿಹಾಯ್ದ ಪರಿಣಾಮ ಕೊನೆ ಕ್ಷಣದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಚ್‍ಡಿ ಕುಮಾರಸ್ವಾಮಿ ಕಣಕ್ಕೆ ಇಳಿದಿದ್ದರು. ಹೀಗಾಗಿ ಓಕ್ಕಲಿಗರ ಮತ ವಿಭಜನೆಯಿಂದಾಗಿ ಕೇವಲ 9,520 ಮತಗಳ ಅಂತರದಿಂದ ಬಚ್ಚೇಗೌಡ ಅವರು ಸೋತಿದ್ದರು.

ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಅವರು ಗೆಲ್ಲಲ್ಲಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಚುನಾವಣಾ ಪ್ರಚಾರದ ಸಮಯದಲ್ಲಿ ಬಚ್ಚೇಗೌಡರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಇದರ ಪರಿಣಾಮ ಕೊನೆಯ ಕ್ಷಣದಲ್ಲಿ ಕುಮಾರಸ್ವಾಮಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಎಚ್‍ಡಿಕೆ ಅಭ್ಯರ್ಥಿಯಾದ ಕೂಡಲೇ ಚುನಾವಣೆಯ ಸಂಪೂರ್ಣ ಚಿತ್ರಣವೇ ಬದಲಾಯಿತು. ಒಕ್ಕಲಿಗರ ಮತ ವಿಭಜನೆಯಾದ ಪರಿಣಮ ಬಚ್ಚೇಗೌಡ ಭಾರೀ ಸ್ಪರ್ಧೆ ನೀಡಿದರೂ ಕೊನೆ ಕ್ಷಣದಲ್ಲಿ ಮೋಯ್ಲಿ ಮುಂದೆ 9,520 ಮತಗಳ ಅಂತರದಿಂದ ಸೋಲನ್ನಪ್ಪಿದರು. ಈ ಕಾರಣಕ್ಕೆ ತಮ್ಮ ಗೆಲುವಿನ ಹಾದಿ ಕಷ್ಟ ಆಗುತ್ತದೆ ಎಂದುಕೊಂಡಿರುವ ಬಚ್ಚೇಗೌಡ ಈ ಬಾರಿಯ ಚುನಾವಣೆಯಲ್ಲಿ ದೇವೇಗೌಡ ಅವರು ವಿರುದ್ಧ ತುಟಿ ಬಿಚ್ಚರಲಿಲ್ಲ.

11 veerappamoily kumaraswamy bachegowda1

ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಎಂ.ವೀರಪ್ಪ ಮೋಯ್ಲಿ 4,24,800 ವೋಟ್ ಗಳಿಸಿದ್ದರೆ ಬಿ.ಎನ್ ಬಚ್ಚೇಗೌಡ ಅವರಿಗೆ 4,15,280 ಮತಗಳು ಬಿದ್ದಿತ್ತು. ಎಚ್.ಡಿ ಕುಮಾರಸ್ವಾಮಿ ಅವರು 3,46,339 ಲಕ್ಷ ಮತ ಪಡೆದಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಚ್ಚೇಗೌಡ 7,45,912 ಮತಗಳನ್ನು ಪಡೆದಿದ್ದರೆ ಮೊಯ್ಲಿ 5,63,802 ಮಗಳನ್ನು ಪಡೆದು ಸೋತಿದ್ದರು.

Share This Article
Leave a Comment

Leave a Reply

Your email address will not be published. Required fields are marked *