ಬೆಂಗಳೂರು: ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಪಕ್ಷದ ಶಿಸ್ತು, ಸೂಚನೆಗಳನ್ನು ಉಲ್ಲಘಿಸಿರುವ ಆರೋಪ ಚಿಕ್ಕಬಳ್ಳಾಪುರ ಸಂಸದ ಬಿ.ಎನ್.ಬಚ್ಚೇಗೌಡ ಅವರ ಮೇಲೆ ಇದೆ. ಈ ಮಧ್ಯೆ ಸಂಸದ ಬಿ.ಎನ್.ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಶಾಸಕ ಶರತ್ ಹೊಸ ವಾದವೊಂದನ್ನು ಮುಂದಿಟ್ಟಿದ್ದಾರೆ.
ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವಂತೆ ಪಕ್ಷವು ಸಂಸದ ಬಿ.ಎನ್.ಬಚ್ಚೇಗೌಡರಿಗೆ ಸೂಚನೆ ಕೊಟ್ಟಿತ್ತು. ಅಷ್ಟೇ ಅಲ್ಲದೇ ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣಾ ಉಸ್ತುವಾರಿಯನ್ನೂ ಪಕ್ಷ ಕೊಟ್ಟಿತ್ತು. ಆದರೆ ಸಂಸದ ಬಚ್ಚೇಗೌಡರು ಮಾತ್ರ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಪರ ಒಂದೇ ಒಂದು ದಿನ ಪ್ರಚಾರಕ್ಕೆ ಬರಲಿಲ್ಲ. ಕನಿಷ್ಠ ಪಕ್ಷದ ಅಭ್ಯರ್ಥಿಗಳ ಪರ ಒಂದೂ ಹೇಳಿಕೆ ಕೊಡಲಿಲ್ಲ. ಇಡೀ ಉಪಚುನಾವಣೆಯ ಅವಧಿಯಲ್ಲಿ ಸ್ವಕ್ಷೇತ್ರ ಚಿಕ್ಕಬಳ್ಳಾಪುರಕ್ಕೆ ಒಂದೇ ಒಂದು ದಿನವೂ ಅವರು ಪ್ರಚಾರಕ್ಕೆ ಹೋಗಲಿಲ್ಲ.
ಹೊಸಕೋಟೆ ಕ್ಷೇತ್ರದಲ್ಲಿ ಸಂಸದ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಅವರು ಬಿಜೆಪ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿದ್ದರು. ತಮ್ಮ ಪುತ್ರನಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ಸಿಟ್ಟಲ್ಲಿ ಪಕ್ಷದ ಅಭ್ಯರ್ಥಿ ಪರ ಬಚ್ಚೇಗೌಡರು ಪ್ರಚಾರಕ್ಕೆ ಹೋಗಲಿಲ್ಲ ಎನ್ನಲಾಗಿದೆ. ಮೇಲಾಗಿ ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆಯಾಗಿದ್ದು, ಟಿಕೆಟ್ ಪಡೆದಿದ್ದು ಸಹ ಬಚ್ಚೇಗೌಡರಿಗೆ ಇಷ್ಟವಿರಲಿಲ್ಲ ಎಂದು ಹೇಳಲಾಗುತ್ತಿದೆ. ಬಚ್ಚೇಗೌಡರೇ ತಮ್ಮ ಸೋಲಿಗೆ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಯಡಿಯೂರಪ್ಪರಿಗೆ ಈಗಾಗಲೇ ಹಲವು ಸಲ ಎಂಟಿಬಿ ನಾಗರಾಜ್ ಒತ್ತಾಯಿಸಿದ್ದಾರೆ. ಇಷ್ಟೆಲ್ಲಾ ಇದ್ದರೂ ಸಂಸದರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ ನಾಯಕರು ಇನ್ನೂ ಮನಸು ಮಾಡಿದಂತೆ ಕಂಡುಬರುತ್ತಿಲ್ಲ.
ಬಿ.ಎನ್ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಶಾಸಕ ಶರತ್ ಹೊಸ ವಾದವೊಂದನ್ನು ಮುಂದಿಟ್ಟಿದ್ದಾರೆ. ನಮ್ಮ ತಂದೆ ಸಂಸದ ಬಚ್ಚೇಗೌಡರ ವಿರುದ್ಧ ಬಿಜೆಪಿ ಪಕ್ಷವು ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಮೊದಲಿಗೆ ತಮ್ಮ ತಂದೆ ಎಂಟಿಬಿ ನಾಗರಾಜ್ ಅವರ ಸೋಲಿಗೆ ಕಾರಣರಲ್ಲ. ಅವರು ನನ್ನ ಪರವಾಗಿ ಅಥವಾ ಎಂಟಿಬಿ ನಾಗರಾಜ್ ಅವರ ವಿರುದ್ಧವಾಗಲೀ ಕೆಲಸ ಮಾಡಿಲ್ಲ. ಹೊಸಕೋಟೆ ಮತದಾರರು ಸ್ವಾಭಿಮಾನಕ್ಕೆ ಮನ್ನಣೆ ನೀಡಿ ನನ್ನನ್ನು ಗೆಲ್ಲಿಸಿದ್ದಾರೆ. ಹೀಗಾಗಿ ಎಂಟಿಬಿ ನಾಗರಾಜ್ ಅವರ ಸೋಲಿಗೆ ನಾನೇ ಕಾರಣ ಹೊರತು ತಂದೆಯವರಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಹೊಸಕೋಟೆ ಕ್ಷೇತ್ರದಲ್ಲಿ ನಮ್ಮ ತಂದೆ ಬಿಜೆಪಿ ಪರ ಕೆಲಸ ಮಾಡದಿದ್ದಕ್ಕೆ ಎಂಟಿಬಿ ನಾಗರಾಜ್ ಸೋತಿದ್ದಾರೆ ಎಂದು ಹೇಳುವುದಾದರೆ ಚಿಕ್ಕಬಳ್ಳಾಪುರದಲ್ಲೂ ಬಿಜೆಪಿ ಅಭ್ಯರ್ಥಿ ಸೋಲಬೇಕಾಗಿತ್ತಲ್ಲವೇ? ಚಿಕ್ಕಬಳ್ಳಾಪುರ ಉಸ್ತುವಾರಿಯಾಗಿದ್ದ ಬಚ್ಚೇಗೌಡರು ಅಲ್ಲೂ ಸಹ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿಲ್ಲ. ಹಾಗಂತ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಸೋತಿದ್ದಾರಾ, ಗೆಲ್ಲಲಿಲ್ಲವೇ? ಚಿಕ್ಕಬಳ್ಳಾಪುರ ಅಭ್ಯರ್ಥಿ ಗೆಲುವಿಗೆ ಅವರ ಸ್ವಂತ ವರ್ಚಸ್ಸು ಕಾರಣವಾಗಿದ್ದರೆ ಹೊಸಕೋಟೆಯಲ್ಲೂ ಎಂಟಿಬಿ ನಾಗರಾಜ್ ಅವರಿಗೆ ಅಷ್ಟೇ ವರ್ಚಸ್ಸು ಇತ್ತಲ್ಲವೇ? ಸತ್ಯ ಇಷ್ಟೇ, ಹೊಸಕೋಟೆ ಚುನಾವಣಾ ಸೋಲು ಗೆಲುವಿಗೆ ತಮ್ಮ ತಂದೆ ಕಾರಣ ಅಲ್ಲವೇ ಅಲ್ಲ. ಹಾಗಾಗಿ ಅವರ ವಿರುದ್ಧ ಕ್ರಮದ ಪ್ರಶ್ನೆಯೇ ಇಲ್ಲ ಎಂದು ಶರತ್ ಬಚ್ಚೇಗೌಡ ವಿಚಿತ್ರ ವಾದ ಮಂಡಿಸುತ್ತಿದ್ದಾರೆ.
ಶಾಸಕ ಶರತ್ ಬಚ್ಚೇಗೌಡರ ಈ ವಾದ ಪಕ್ಷದ ಪಡಸಾಲೆಯಲ್ಲೂ ಚರ್ಚೆ ಹುಟ್ಟು ಹಾಕಿದೆಯಂತೆ. ಶರತ್ ವಾದದಲ್ಲಿ ಸತ್ಯಾಂಶ ಇದೆ ಎಂದು ಕೆಲವು ಬಿಜೆಪಿ ಮುಖಂಡರೇ ಗುಪ್ತವಾಗಿ ಹೇಳಿಕೊಂಡು ಓಡಾಡುತ್ತಿದ್ದಾರಂತೆ. ಇದರ ಮಧ್ಯೆ ಪಕ್ಷದ ಸೂಚನೆಗಳನ್ನು ಸಂಸದ ಬಿ.ಎನ್.ಬಚ್ಚೇಗೌಡರು ಉಲ್ಲಂಘಿಸಿದ್ದಾರೆ ಅಂತ ಹೊಸ ಶಾಸಕರು ಮತ್ತು ಎಂಟಿಬಿ ನಾಗರಾಜ್ ಎದುರೇ ಕೆಲ ಹಿರಿಯ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಸಂಸದ ಬಚ್ಚೇಗೌಡರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುತ್ತೇವೆ ಎಂದು ಎಂಟಿಬಿ ನಾಗರಾಜ್ ಅವರಿಗೆ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಶಿಸ್ತು ಕ್ರಮ ಏನು, ಯಾವಾಗ ಅನ್ನುವ ಪ್ರಶ್ನೆಗಳಿಗೆ ರಾಜ್ಯ ಬಿಜೆಪಿ ನಾಯಕರ ಬಳಿ ಉತ್ತರ ಇಲ್ಲ.