Connect with us

Chikkamagaluru

ಶೃಂಗೇರಿ ಮಠದಲ್ಲಿ ಆಯೋಜಿಸಿದ್ದ ‘ಹೊರೆಕಾಣಿಕೆ’ ಕಾರ್ಯಕ್ರಮ ರದ್ದು

Published

on

ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜನತಾ ಕರ್ಫ್ಯೂಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶೃಂಗೇರಿ ಮಠದಲ್ಲಿ ಆಯೋಜನೆಗೊಂಡಿದ್ದ ಮಠದ ಹಿರಿಯ ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿಯವರ 70ನೇ ದಿವ್ಯ ಸಪ್ತತಿ ಮಹೋತ್ಸವ ಹಾಗೂ ಹೊರೆಕಾಣಿಕೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

ಪ್ರಧಾನಿ ಮೋದಿ ದೇಶದ ಜನರಲ್ಲಿ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ 9 ಗಂಟೆವರೆಗೂ ಯಾರೂ ಮನೆ ಬಿಟ್ಟು ಬರಬೇಡಿ. ಕೊರೊನಾ ವೈರಸ್ ವಿರುದ್ಧ ಸಂಘಟಿತರಾಗಿ ಹೋರಾಡೋಣ ಎಂದು ಜನತಾ ಕರ್ಫ್ಯೂಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಠದ ಆಡಳಿತಾಧಿಕಾರಿ ಗೌರಿ ಶಂಕರ್ ಮಠದ ಆವರಣದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ಮುಂದೂಡಿದ್ದಾರೆ.

ಕೊರೊನಾ ವೈರಸ್ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದನ್ವಯ ಮೂರು ದಿನಗಳ ಕಾಲ ಶೃಂಗೇರಿ ಮಠ ಕೂಡ ಬಂದ್ ಆಗಿರಲಿದೆ. ಶಾರದಾಂಬೆಗೆ ಪೂಜಾ ಕೈಂಕರ್ಯಗಳು ಎಂದಿನಂತೆಯೇ ನಡೆಯಲಿದ್ದು, ಶಾರದಾಂಬೆ ದರ್ಶನಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ ಮಠದಲ್ಲಿ ಅನ್ನದಾಸೋಹ ಹಾಗೂ ಭಕ್ತರು ಉಳಿಯಲು ರೂಂಗಳ ಸೌಲಭ್ಯ ಇರುವುದಿಲ್ಲ.

ಸೋಮವಾರದವರೆಗೂ ಮಠದಲ್ಲಿ ಅನ್ನದಾಸೋಹ ಹಾಗೂ ರೂಂಗಳ ಸೌಲಭ್ಯ ಇರುವುದಿಲ್ಲ. ಸೋಮವಾರದ ನಂತರ ಸರ್ಕಾರದ ಆದೇಶದ ಮೇಲೆ ಮುಂದಿನ ನಿರ್ಧಾರ ಮಾಡಲಾಗುವುದು ಎಂದು ಮಠದ ಆಡಳಿತಾಧಿಕಾರಿ ತಿಳಿಸಿದ್ದಾರೆ. ಸದ್ಯಕ್ಕೆ ಮುಂದೂಡಿರುವ ಹೊರೆಕಾಣಿಕೆ ಹಾಗೂ ದಿವ್ಯ ಸಪ್ತತಿ ಮಹೋತ್ಸವ ಕಾರ್ಯಕ್ರಮವನ್ನು ನಡೆಸುವ ಮುನ್ನ ಮುಂಚಿತವಾಗಿ ಭಕ್ತರಿಗೆ ತಿಳಿಸುವುದಾಗಿ ಮನವಿ ಮಾಡಿಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in