Connect with us

ವಿವಾಹಿತನ ಜೊತೆ ಓಡಿಹೋದ ಯುವತಿ- ಕ್ಯಾಬ್ ಹಿಂಬಾಲಿಸಿ 14 ಬಾರಿ ಇರಿದು ವ್ಯಕ್ತಿಯನ್ನ ಕೊಂದ್ರು

ವಿವಾಹಿತನ ಜೊತೆ ಓಡಿಹೋದ ಯುವತಿ- ಕ್ಯಾಬ್ ಹಿಂಬಾಲಿಸಿ 14 ಬಾರಿ ಇರಿದು ವ್ಯಕ್ತಿಯನ್ನ ಕೊಂದ್ರು

– 12 ಬಾರಿ ಇರಿತಕ್ಕೊಳಗಾದ ಯುವತಿ ಸ್ಥಿತಿ ಗಂಭೀರ

ನವದೆಹಲಿ: 23 ವರ್ಷದ ತನ್ನ ಪ್ರಿಯತಮೆಯ ಜೊತೆಯಿದ್ದ 35 ವರ್ಷದ ವ್ಯಕ್ತಿಯನ್ನು ಯುವತಿಯ ಸಂಬಂಧಿಕರೇ ಇರಿದು ಕೊಂದ ಭೀಕರ ಘಟನೆ ದೆಹಲಿಯ ಮಯೂರ್ ವಿಹಾರ್ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ದಿನೇಶ್ ಎಂದು ಗುರುತಿಸಲಾಗಿದೆ. ಯುವತಿಯನ್ನೂ ಕೊಲ್ಲಲು ಯತ್ನಿಸಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದ್ಯ ಯುವತಿಯನ್ನ ದೆಹಲಿಯ ಲಾಲ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ?: ಮೃತ ವ್ಯಕ್ತಿ ಮತ್ತು ಹಲ್ಲೆಗೊಳಗಾದ ಯುವತಿ ಇವರಿಬ್ಬರೂ ಕ್ಯಾಬ್ ಬುಕ್ ಮಾಡಿ ಡಲ್ಲುಪುರ ಕಡೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಇವರಿಬ್ಬರ ಮೇಲೆ ಹಲ್ಲೆ ನಡೆದಿದ್ದು, ದಿನೇಶ್ ಮೇಲೆ ಹರಿತವಾದ ಚೂರಿಯಿಂದ 14 ಬಾರಿ ಇರಿಯಲಾಗಿದೆ. ಯುವತಿಗೂ ಕೂಡ 12 ಬಾರಿ ಇರಿಯಾಗಿದೆ. ಗಂಭೀರವಾಗಿ ಗಾಯಗೊಂಡ ದಿನೇಶ್ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃಪಟ್ಟಿದ್ದಾರೆ.

ಯುವತಿಯ ಸಂಬಂಧಿ ಮತ್ತು ಸಹೋದರನಿಂದ ಈ ಕೃತ್ಯ ನಡೆದಿದೆ. ಮೃತ ದಿನೇಶ್ ಮತ್ತು ಯುವತಿ ದೂರದ ಸಂಬಂಧಿಕರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕೆಲ ಸಮಯದಿಂದ ಇವರಿಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಅಲ್ಲದೇ ಓಡಿ ಹೋಗಿ ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದರು ಎಂದು ತಿಳಿದುಬಂದಿದೆ.

ಮೃತ ದಿನೇಶ್ ಗೆ ಈಗಾಗಲೇ ಮದುವೆಯಾಗಿದ್ದು, ಸೀಮಾಪುರಿಯಲ್ಲಿ ಮೂವರು ಮಕ್ಕಳು ಮತ್ತು ಪತ್ನಿಯೊಂದಿಗೆ ಜೀವನ ನಡೆಸುತ್ತಿದ್ದ. ಇತ್ತ ಯುವತಿ ಕೂಡ ದೆಹಲಿಯ ಪಟ್ಪಪರ್ ಗಂಜ್‍ನಲ್ಲಿ ಪೋಷಕರೊಂದಿಗೆ ವಾಸಿಸುತ್ತಿದ್ದರು.

ದಿನೇಶ್‍ನನ್ನು ಯುವತಿ ಪ್ರೀತಿಸುತ್ತಿರುವ ವಿಷಯ ಅರಿತ ಯುವತಿಯ ಪೋಷಕರು ಇದಕ್ಕೆ ವಿರೋಧಿಸಿದ್ದರು. ಅಲ್ಲದೆ ಆಕೆಗೆ ಬೇರೆ ಮದುವೆ ಮಾಡಲು ಮುಂದಾಗಿದ್ದರು. ಹೀಗಾಗಿ ಯುವತಿ ಹಾಗೂ ದಿನೇಶ್ ಓಡಿಹೋಗಲು ನಿರ್ಧರಿಸಿದ್ದರು.

ಈ ನಿರ್ಧಾರಕ್ಕೆ ಬಂದ ಬಳಿಕ ಯುವತಿ ದಿನೆಶ್ ಮಾತಿನಂತೆ ಶುಕ್ರವಾರ ಹಣ ಮತ್ತು ಚಿನ್ನದ ಒಡೆವೆಗಳ ಸಹಿತ ಮನೆಯಿಂದ ಪರಾರಿಯಾಗಿದ್ದರು. ಬಳಿಕ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿ ಇಬ್ಬರೂ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಇದನ್ನರಿತ ಯುವತಿ ಸಂಬಂಧಿಕರು ಇವರಿಬ್ಬರನ್ನು ಹಿಂಬಾಲಿಸಿದ್ದಾರೆ. ದಿನೇಶ್ ಕ್ಯಾಬ್ ನಿಂದ ಇಳಿಯುತ್ತಿದ್ದಂತೆಯೇ ಯುವತಿ ಸಂಬಂಧಿಕರು ತಮ್ಮ ಕೈಯಲ್ಲಿದ್ದ ಹರಿತವಾದ ಚೂರಿಯಿಂದ ದಿನೇಶ್ ಗೆ ಸುಮಾರು 14 ಬಾರಿ ಇರಿದಿದ್ದಾರೆ. ಈ ವೇಳೆ ದಿನೇಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇತ್ತ ಕ್ಯಾಬ್ ಒಳಗಡೆ ಕುಳಿತಿದ್ದ ಯುವತಿಗೂ 12 ಬಾರಿ ಇರಿದಿದ್ದಾರೆ.

ಕಿರುಚಾಟ ಕೇಳಿ ಅದೇ ಪ್ರದೇಶದಲ್ಲಿದ್ದ ಹೋಮ್ ಗಾರ್ಡ್‍ವೊಬ್ಬರು ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನ ಹಿಡಿದಿದ್ದಾರೆ. ಘಟನಾ ಸ್ಥಳದಿಂದಲೇ ಪೊಲೀಸರು ಆರೋಪಿಗಳಿಬ್ಬರನ್ನೂ ಬಂಧಿಸಿದ್ದಾರೆ.

ಯುವತಿ ಓಡಿಹೋಗಿದ್ದರಿಂದ ಕುಟುಂಬದವರಿಗೆ ಅವಮಾನವಾದ ಕಾರಣ ಈ ಕೃತ್ಯ ಎಸಗಿದ್ದಾಗಿ ಆರೋಪಿಗಳಲ್ಲೊಬ್ಬ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆ.

Advertisement
Advertisement