Belgaum
ಮರ್ಯಾದಾ ಹತ್ಯೆ: ಮಗಳು, ಆಕೆಯ ಪ್ರಿಯಕರನನ್ನ ಕೊಚ್ಚಿ ಕೊಂದ ತಂದೆ

ಬೆಳಗಾವಿ: ರಾಜ್ಯದಲ್ಲಿ ಮತ್ತೊಂದು ಮರ್ಯಾದೆ ಘಟನೆ ಬೆಳಕಿಗೆ ಬಂದಿದೆ. ಪೋಷಕರ ವಿರುದ್ಧವಾಗಿ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ತಂದೆಯೆ ಮನೆಯಲ್ಲೇ ಕೊಚ್ಚಿ ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಕೊಲೆ ನಡೆದ ಸ್ಥಳ
ಜಿಲ್ಲೆಯ ಸವದತ್ತಿ ತಾಲೂಕಿನ ಬೆಡಸೂರ ಗ್ರಾಮದಲ್ಲಿಯೆ ಮರ್ಯಾದೆ ಹತ್ಯೆ ನಡೆದಿದೆ. 45 ವರ್ಷದ ಯಲ್ಲಪ್ಪ ಭೀಮಪ್ಪ ಆಡೀನ್ ಎಂಬ ತಂದೆಯೆ ತನ್ನ ಸ್ವಂತ ಮಗಳನ್ನೇ ಹತ್ಯೆ ಮಾಡಿದ್ದಾನೆ. ರುಕ್ಮವ್ವ ಯಲ್ಲಪ್ಪ ಆಡೀನ್ (16) ಮತ್ತು ಮಂಜುನಾಥ್ ಪಡೇಶ್ವರ್ (21) ಕೊಲೆಯಾದ ಜೋಡಿಗಳು.
ರುಕ್ಮವ್ವ ಅದೇ ಗ್ರಾಮದ ಮಂಜುನಾಥ್ ಎಂಬವರನ್ನು ಪ್ರೀತಿ ಮಾಡುತ್ತಿದ್ದರು. ರುಕ್ಮವ್ವ ಮತ್ತು ಮಂಜುನಾಥ್ ಇಬ್ಬರದೂ ಜಾತಿ ಬೇರೆಯಾಗಿದ್ದರಿಂದ ಪೋಷಕರ ವಿರೋಧವಿತ್ತು. ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ರುಕ್ಮವ್ವಳನ್ನು ಭೇಟಿಯಾಗಲು ಮಂಜುನಾಥ್ ಹೋಗಿದ್ದಾರೆ. ಆದರೆ ಅದೇ ವೇಳೆಗೆ ಮನೆಗೆ ಬಂದ ಯಲ್ಲಪ್ಪ ಇಬ್ಬರನ್ನು ಕಂಡು ಕೋಪದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ನಂತರ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
