ದಾವಣಗೆರೆ: ಪುಂಡನನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಹನಿಟ್ರ್ಯಾಪ್ ಅಸ್ತ್ರವನ್ನು ಪ್ರಯೋಗಿಸಿ ಸೆರೆ ಹಿಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾವಿನಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದ ಮಾವಿನ ಹೊಳೆ ಅರಣ್ಯ ಪ್ರದೇಶದಲ್ಲಿ ಪುಂಡಾನೆಯೊಂದು ರೈತರ ಬೆಳೆ, ಆಸ್ತಿ ನಷ್ಟ ಮಾಡುತ್ತಿತ್ತು. ಅಂತಹ ಪುಂಡಾನೆಯನ್ನು ಮಂಗಳವಾರ ಸಂಜೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಪುಂಡಾನೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದು, ಸಕ್ರೇಬೈಲ್ ನಿಂದ ಅಭಿಮನ್ಯು ನೇತೃತ್ವದಲ್ಲಿ ಕೃಷ್ಣಾ, ಧನಂಜಯ, ಹರ್ಷ, ಹಾಗೂ ಅಜೇಯ ಎಂಬ ಸಾಕಾನೆಗಳು ಕಾಡಾನೆಯನ್ನು ಸೆರೆ ಹಿಡಿಯಲು ಆಗಮಿಸಿದ್ದವು.
Advertisement
Advertisement
ಮಂಗಳವಾರ ಬೆಳಗ್ಗೆ ಪುಂಡಾನೆಯನ್ನು ಹನಿಟ್ರ್ಯಾಪ್ ಮೂಲಕ ಸೆರೆ ಹಿಡಿಯಲು ಗೀತಾ ಹಾಗೂ ಗಂಗೆ ಎನ್ನುವ ಎರಡು ಹೆಣ್ಣಾನೆಯನ್ನು ಕಾರ್ಯಾಚರಣೆಗೆ ಬಳಸಿ ಚಿಕ್ಕಸಂದಿ ಗ್ರಾಮದ ಹಳೇಬೀಳು ಕಾಡಿನ ಗುಡ್ಡದ ಮಧ್ಯೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಕಳೆದ 2017ರ ಡಿಸೆಂಬರ್ 21ರಂದು ಕಾಡಿನಲ್ಲಿದ್ದ ಒಂದು ಪುಂಡಾನೆಯನ್ನು ನುರಿತ ತಜ್ಞ ವೈದ್ಯರ ತಂಡ ಹಾಗೂ ಅರಣ್ಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
Advertisement
ಕಾಡಿನಲ್ಲೇ ಇದ್ದ ಮತ್ತೊಂದು ಪುಂಡಾನೆಯನ್ನು ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿರಲಿಲ್ಲ. ಈಗ ಆನುಮತಿಯನ್ನು ಪಡೆದು ತಜ್ಞ ವೈದ್ಯರು, ನುರಿತ ಮಾವುತರು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಸೆರೆ ಹಿಡಿದಿದ್ದು, ಸೆರೆ ಹಿಡಿದ ಕಾಡಾನೆಯನ್ನು ಸಕ್ರೇಬೈಲು ಆನೆ ಬಿಡಾರಕ್ಕೆ ರವಾನಿಸಲಾಗಿದೆ ಎನ್ನಲಾಗುತ್ತಿದೆ. ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv