ಬೆಂಗಳೂರು: ಹನಿಟ್ರ್ಯಾಪ್ (HoneyTrap) ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ರಾಜಣ್ಣ (Rajanna) ಅವರು ಇಂದು ಗೃಹ ಸಚಿವ ಪರಮೇಶ್ವರ್ (Parameshwar) ಅವರಿಗೆ ಮನವಿ ನೀಡಿದ್ದಾರೆ.
ಇಂದು ಸಂಜೆ ಸದಾಶಿವನಗರದಲ್ಲಿರುವ ಪರಮೇಶ್ವರ್ ಅವರ ನಿವಾಸಕ್ಕೆ ತೆರಳಿ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದರು. ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ರಾಜಣ್ಣ ಮನವಿ ಸಲ್ಲಿಸಿದರು.
ನೀಡಿರೋ ಪ್ರತಿಯಲ್ಲಿ ಏನೇಲ್ಲ ಅಂಶಗಳಿದೆ ಅನ್ನೋದನ್ನ ಚರ್ಚೆ ಮಾಡಲು ಆಗುವುದಿಲ್ಲ. ವಿಧಾನಸಭೆಯಲ್ಲಿ ಪ್ರಸ್ರಾಪಿಸಿದಂತೆ ಮನವಿ ಕೊಟ್ಟಿದ್ದಾರೆ. ಮನವಿಯನ್ನ ನಾನು ಸ್ವೀಕಾರ ಮಾಡಿದ್ದೇನೆ. ಮನವಿ ಆಧಾರದ ಮೇಲೆ ಏನ್ ಮಾಡಬೇಕು, ಯಾರಿಗೆ ಅದನ್ನು ಕಳುಹಿಸಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ವಿಷಯ ಈಗ ಸದನದ ಸ್ವತ್ತಾಗಿದೆ. ಈ ಕಾರಣಕ್ಕಾಗಿ ದೂರು ಸಲ್ಲಿಕೆಯಾಗುವವರೆಗೂ ನಾವು ಕಾಯುತ್ತಿದ್ದೆವು ಎಂದು ಹೇಳಿದರು.
ರಾಜಣ್ಣ ಮಾತನಾಡಿ, ಈ ರೀತಿಯ ಕೆಟ್ಟ ಚಾಳಿ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇನೆ. ಮಾಧ್ಯಮಗಳಲ್ಲಿ ತುಮಕೂರಿನ ಪ್ರಭಾವಿ ಸಚಿವರು ಎಂದು ಸುದ್ದಿಯಾಗುತ್ತಿತ್ತು. ತುಮಕೂರಿನ ಸಚಿವರು ಅಂದರೆ ನಾವಿಬ್ಬರೇ ಇರುವುದು. ಈ ಕಾರಣಕ್ಕೆ ಸದನದಲ್ಲಿ ನಾನು ಪ್ರಸ್ತಾಪ ಮಾಡಿದ್ದೆ. ದೂರು ನೀಡಿದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಹೀಗಾಗಿ ಇಂದು ಮನವಿ ಸಲ್ಲಿಸಿದ್ದೇನೆ ಎಂದರು.