ಉಡುಪಿ: ಮೀನು ತಿನ್ನೋ ಕುಂದಾಪುರದ ಮಂದಿ ಫುಲ್ ಬುದ್ಧಿವಂತರು ಅನ್ನೋ ಮಾತಿದೆ. ಆದರೆ ಜನ ಬುದ್ಧಿವಂತರಾದಷ್ಟು ಸಾಮಾನ್ಯ ಜ್ಞಾನ ಕಳೆದುಕೊಳ್ಳುತ್ತಿದ್ದಾರೆ ಅನ್ನಿಸುತ್ತದೆ. ಮೋಸ ಹೋಗುವ ಜನ ಇದ್ದಾರೆ ಅಂತ ಗೊತ್ತಾದಾಗ ಮೇಲೆ ಖದೀಮರು ವೆರೈಟಿ ವೆರೈಟಿಯಾಗಿ ಮೋಸ ಮಾಡುವುದಕ್ಕೆ ಶುರುಮಾಡಿದ್ದಾರೆ.
ಜಿಲ್ಲೆಯ ಕುಂದಾಪುರದಲ್ಲಿ ನಡೆದ ಹನಿ ದೋಖಾ ಇದು. ಅಪಾರ್ಟ್‍ಮೆಂಟ್‍ನಲ್ಲಿ ಕಟ್ಟಿದ್ದ ಜೇನು ಗೂಡು ತೆಗೆದುಕೊಡುತ್ತೇವೆ. ನಮಗೆ ಒಂದು ರೂಪಾಯಿಯೂ ಕೊಡುವುದು ಬೇಡ ಅಂತ ಹೇಳಿ ಬಂದ ಉತ್ತರ ಭಾರತ ಮೂಲದ ನಾಲ್ಕಾರು ಹುಡುಗರು ಜನಕ್ಕೆ ಮೂರು ಪಂಗನಾಮ ಹಾಕಿ ಪರಾರಿಯಾಗಿದ್ದಾರೆ.
Advertisement
Advertisement
ತಸ್ಮಯ್ ಅಪಾರ್ಟ್‍ಮೆಂಟ್‍ನಲ್ಲಿ ಜೇನು ಗೂಡು ಕಟ್ಟಿತ್ತು. ಅದನ್ನು ತೆಗೆದುಕೊಡುತ್ತೇವೆ ನಮಗೆ ಸಂಬಳ ಬೇಡ ಬದಲಿಗೆ ಜೇನು ತುಪ್ಪ ಕೊಡಿ ಅಂತ ವ್ಯವಹಾರ ಕುದುರಿಸಿದ್ದರು. ಜೇನನ್ನು ತೆಗೆದ ಮೇಲೆ ಹೊರಡಲು ಸಿದ್ಧತೆ ಮಾಡಿಕೊಂಡರು. ಅಷ್ಟರಲ್ಲಿ ಅಲ್ಲಿದ್ದ ಜನರು ಜೇನು ತುಪ್ಪ ಕೊಡಿ ದುಡ್ಡು ಕೊಡುತ್ತೇವೆ ಎಂದು ವ್ಯವಹಾರ ಶುರುಮಾಡಿದ್ದಾರೆ. ತೋಳ ಹಳ್ಳಕ್ಕೇ ಬಂದು ಬಿತ್ತು ಅಂತ ಅಂದುಕೊಂಡ ಖದೀಮರು ಬಾಟಲಿಗಳಲ್ಲಿ ತುಂಬಿದ್ದ ಜೇನನ್ನು ಮಾರಾಟ ಮಾಡಲು ಶುರು ಮಾಡಿದರು. ಸುಮಾರು 10 ಸಾವಿರ ರೂಪಾಯಿಯ ಜೇನು ತುಂಬಿದ ಬಾಟಲಿಗಳನ್ನು ಮಾರಾಟ ಮಾಡಿ ಕಳ್ಳರು ಅಲ್ಲಿಂದ ಆಟೋ ಹತ್ತಿ ಕಾಲ್ಕಿತ್ತಿದ್ದಾರೆ.
Advertisement
Advertisement
ಜನರು ಕಮ್ಮಿ ರೇಟಿಗೆ ಜೇನು ತುಪ್ಪ ಸಿಕ್ಕಿತು ಅಂತ ಮನಸ್ಸಿನಲ್ಲೇ ಮಂಡಿಗೆ ತಿಂದು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡಿದ್ದಾರೆ. ಮನೆಗೆ ಹೋಗಿ ಬಾಟಲ್ ಓಪನ್ ಮಾಡಿ ನೋಡಿದರೆ ಅದು ಜೇನು ತುಪ್ಪ ಅಲ್ಲ. ಬೆಲ್ಲದ ನೀರು ಅಂತ ನಾಲ್ಕಾರು ಮಂದಿಗೆ ಗೊತ್ತಾಗಿದೆ. ತಕ್ಷಣ ಜನರು ಕಳ್ಳರನ್ನು ಹಿಡಿಯಲು ಓಡೋಡಿ ಬಂದಿದ್ದಾರೆ. ಆದರೆ ಅಷ್ಟರಲ್ಲಿ ಬೇಸ್ ಮೆಂಟಿಗೆ ಬಂದು ಚಳ್ಳೆ ಹಣ್ಣು ತಿನ್ನಿಸಿದ್ದ ನಾಲ್ವರು ಖದೀಮರು ಅಲ್ಲಿಂದ ಪರಾರಿಯಾಗಿದ್ದರು. ಮರ್ಯಾದೆ ಹೋಗೋದು ಬೇಡ ಅಂತ ಪೊಲೀಸರಿಗೆ ದೂರು ಕೊಡುವುದಕ್ಕೂ ಇಲ್ಲಿನ ಜನ ಮುಂದಾಗಲಿಲ್ಲ.
ಮೋಸ ಹೋದ ಕುಂದಾಪುರದ ಸತೀಶ್ ಪೂಜಾರಿ ಮಾತನಾಡಿ, ನಮ್ಮ ಕಟ್ಟಡದಲ್ಲಿ ಜೇನು ಗೂಡು ಕಟ್ಟಿತ್ತು. ಮಕ್ಕಳಿಗೆ-ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಬೇಡ ಅಂತ ಜೇನುಗೂಡು ತೆಗೆಯಲು ಹೇಳಿದೆವು. ಆದರೆ ಅವರು ನಂಬಿಕೆ ದ್ರೋಹ ಮಾಡಿದರು. ಇನ್ನು ಮುಂದೆ ಈ ರೀತಿ ಯಾರಿಗೂ ಮೋಸವಾಗಬಾರದು ಎಂದು ಹೇಳಿದರು.
ನಾನು ಕೂಡ ಎರಡು ಬಾಟಲಿ ಜೇನು ತುಪ್ಪ ಖರೀದಿ ಮಾಡಿದ್ದೆ. ಮನೆಗೆ ಹೋಗಿ ಟೇಸ್ಟ್ ಹೇಗಿದೆ ಅಂತ ನೋಡಲು ಬಾಟಲ್ ಓಪನ್ ಮಾಡಿದಾಗ ಜೇನುತುಪ್ಪದ ಪರಿಮಳ ಬಂದಿಲ್ಲ. ನಂತರ ಟೇಸ್ಟ್ ಮಾಡಿ ನೋಡಿದಾಗ ಗೊತ್ತಾಯಿತು ಅದು ಜೇನಲ್ಲ ಬೆಲ್ಲದ ಪಾಕ ಅಂತ. ನಾನು ಕೂಡಲೆ ಕೆಳಗೆ ಬಂದು ನೋಡಿದರೆ ಅವರೆಲ್ಲ ಅಲ್ಲಿಂದ ಕಣ್ಮರೆಯಾಗಿದ್ದರು ಎಂದು ಮೋಸ ಹೋದ ಶಶಿಕಲಾ ಹೇಳಿದರು.