ನವದೆಹಲಿ: ಸರಿಯಾದ ಸಮಯಕ್ಕೆ ತೆರಿಗೆ ಪಾವತಿಸುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಸಹಕರಿಸುತ್ತಿರುವ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಿ ಅವರಿಗೆ ವಿಶೇಷ ಸವಲತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ನಿಗದಿತ ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವವರನ್ನು ಇದುವರೆಗೂ ಯಾವುದೇ ಸರ್ಕಾರಗಳು ಗುರುತಿಸಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿಷ್ಠಾವಂತ ತೆರಿಗೆದಾರರಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಸಿದ್ಧತೆ ನಡೆಸಿದೆ.
ಈಗಾಗಲೇ ಹಣಕಾಸು ಸಚಿವಾಲಯ ನೂತನ ಕರಡು ಪ್ರಸ್ತಾವನೆಯನ್ನು ಪ್ರಧಾನಿ ಕಚೇರಿಗೆ ತಲುಪಿಸಿದ್ದು, ಅಲ್ಲಿ ಅಂತಿಮಗೊಂಡ ಬಳಿಕ ಕ್ಯಾಬಿನೆಟ್ ಒಪ್ಪಿಗೆ ನೀಡಲಿದೆ. ಇದನ್ನೂ ಓದಿ: ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?
ಏನೆಲ್ಲಾ ಸೌಲಭ್ಯಗಳು ಸಿಗುತ್ತವೆ?
ನಿಷ್ಠಾವಂತ ತೆರಿಗೆ ಪಾವತಿದಾರರಿಗೆ ಸಾರ್ವಜನಿಕ ಸೇವೆಗಳಾದ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ರಸ್ತೆ ಟೋಲ್‍ಗಳಲ್ಲಿ `ಆದ್ಯತೆಯ ಸೇವೆ’ ಸಿಗಲಿದೆ. ಅಷ್ಟೇ ಅಲ್ಲದೇ ಸರ್ಕಾರಿ ಸಮಾರಂಭದಲ್ಲಿ ಗೌರವಿಸಲಾಗುತ್ತದೆ. ವಿಶೇಷ ಗುರುತಿನ ಸಂಖ್ಯೆ ಅಥವಾ ಪಾನ್ ಸಂಖ್ಯೆಯ ಮೂಲಕ ನಿಷ್ಠಾವಂತ ತೆರಿಗೆದಾರರನ್ನು ಗುರುತಿಸಬಹುದು ಎನ್ನುವ ಅಂಶ ಕರಡು ಪ್ರಸ್ತಾವನೆಯಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ನಡೆದ ಹಿರಿಯ ತೆರಿಗೆ ಅಧಿಕಾರಿಗಳ ಸಂವಾದ ಕಾರ್ಯಕ್ರಮದಲ್ಲಿ ನಿಷ್ಠಾವಂತ ತೆರಿಗೆ ಪಾವತಿ ಮಾಡುವ ಪಾವತಿದಾರರಿಗೆ ಕೇಂದ್ರ ಸರ್ಕಾರ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೇ ಅವರಿಗೆ ವಿಶೇಷ ಸವಲತ್ತುಗಳನ್ನು ಘೋಷಿಸಲಾಗುತ್ತದೆ ಎಂದು ಹೇಳಿದ್ದರು.
2015-16ರ ಹಣಕಾಸು ವರ್ಷದಲ್ಲಿ ಒಟ್ಟು 5.43 ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದರೆ, 2017-18ರ ಸಾಲಿನಲ್ಲಿ 6.84 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv