ಹೋಂಡಾ ಕಾರ್ಸ್ ಇಂಡಿಯಾ (Honda Cars India) ಕಂಪನಿಯು ಬಹು ನಿರೀಕ್ಷಿತ 3ನೇ ತಲೆಮಾರಿನ ಅಮೇಜ್ (Honda Amaze) ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಈ ಸೆಗ್ಮೆಂಟ್‌ನ ಕಾರುಗಳಲ್ಲಿ ಪ್ರಪ್ರಥಮ ಬಾರಿಗೆ ADAS ಹೊಂದಿರುವ ಕಾರು ಅಮೇಜ್ ಆಗಿದೆ. ಕಾರಿನ ಪರಿಚಯಾತ್ಮಕ ಬೆಲೆ 7.99 ಲಕ್ಷ ರೂ.ನಿಂದ ಶುರುವಾಗಿ 10.90 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದೆ.
ಅಮೇಜ್ ಹೊರಾಂಗಣ ವಿನ್ಯಾಸ ಆಕರ್ಷಕವಾಗಿದ್ದು ಸಿಗ್ನೇಚರ್ ಚೆಕರ್ಡ್ ಫ್ಲ್ಯಾಗ್ ಪ್ಯಾಟರ್ನ್ ಗ್ರಿಲ್ ಹೊಂದಿರುವ ಫ್ರಂಟ್ ಬಂಪರ್, DRL ಮತ್ತು ಟರ್ನ್ ಇಂಡಿಕೇಟರ್ ಒಳಗೊಂಡ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, LED ಪ್ರೊಜೆಕ್ಟರ್ ಫಾಗ್ ಲ್ಯಾಂಪ್, 15 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, ಶಾರ್ಕ್ ಫಿನ್ ಆಂಟೆನಾ ಮತ್ತು ರೆಕ್ಕೆ ಆಕಾರದಲ್ಲಿರುವ ಹಿಂಬದಿ LED ಲೈಟ್‌ಗಳು ಅಂದವನ್ನು ಹೆಚ್ಚಿಸಿವೆ.
ಒಳಾಂಗಣ ವಿನ್ಯಾಸ ಕೂಡ ಹೊಸತನದಿಂದ ಕೂಡಿದ್ದು ಎಲ್ಲಾ ಪ್ರಯಾಣಿಕರಿಗೆ ಉತ್ತಮ ಸ್ಥಳಾವಕಾಶವುಳ್ಳ ಆಸನದ ವ್ಯವಸ್ಥೆ ಹೊಂದಿದೆ. 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 7 ಇಂಚಿನ TFT MID ಮೀಟರ್, ವಯರ್ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ವಯರ್ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, 6 ಸ್ಪೀಕರ್ ಸೌಂಡ್ ಸಿಸ್ಟಮ್, PM 2.5 ಕ್ಯಾಬಿನ್ ಏರ್ ಫಿಲ್ಟರ್, ಹಿಂಬದಿ AC ವೆಂಟ್ಸ್, ಪೂರ್ತಿ ಆಟೋಮ್ಯಾಟಿಕ್ ಏರ್ ಕಂಡೀಷನಿಂಗ್ ವ್ಯವಸ್ಥೆ, ಪುಶ್ ಸ್ಟಾರ್ಟ್ ಅಂಡ್ ಸ್ಟಾಪ್ ಬಟನ್ ಮುಂತಾದ ವೈಶಿಷ್ಟ್ಯಗಳನ್ನು ಅಮೇಜ್ ಹೊಂದಿದೆ. ಈ ಸೆಗ್ಮೆಂಟ್ ಕಾರುಗಳಲ್ಲಿ ಅತ್ಯಂತ ಹೆಚ್ಚು ಅಂದರೆ 416 ಲೀಟರ್ ಬೂಟ್ ಸ್ಪೇಸ್ ಹೊಂದಿರುವ ಕಾರು ಅಮೇಜ್.
1.2 ಲೀಟರ್ ಸಾಮರ್ಥ್ಯದ i-VTEC ಎಂಜಿನ್ ಹೊಂದಿರುವ ಹೊಸ ಅಮೇಜ್ ಕಾರು 90 ಪಿಎಸ್ ಪವರ್ ಮತ್ತು 110 nm ಟಾರ್ಕ್ ಉತ್ಪಾದಿಸುತ್ತದೆ. ಮಾನ್ಯುಯಲ್ ಗೇರ್ ಬಾಕ್ಸ್ ಮತ್ತು CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಕಾರು ಲಭ್ಯವಿದೆ. ಅಮೇಜ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್‌ನಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ 18.65 ಕಿಲೋಮೀಟರ್ ಮೈಲೇಜ್ ಮತ್ತು CVT ಗೇರ್ ಬಾಕ್ಸ್‌ನಲ್ಲಿ 19.46 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದನ್ನೂ ಓದಿ: 3 ಮಹಿಂದ್ರಾ ಕಾರುಗಳಿಗೆ ಸಿಕ್ತು 5 ಸ್ಟಾರ್ ಸೇಫ್ಟಿ ರೇಟಿಂಗ್
ಅಮೇಜ್ ಹೋಂಡಾ ಸೆನ್ಸಿಂಗ್ ADAS (Honda Sensing ADAS) ಹೊಂದಿದ್ದು, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ವಾಚ್ ಕ್ಯಾಮೆರಾ, 6 ಏರ್ ಬ್ಯಾಗ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಂಬದಿ ಕ್ಯಾಮೆರಾ, ISOFIX ಸೀಟ್‌ಗಳು ಮತ್ತು ಇನ್ನಿತರ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಹೋಂಡಾ ಅಮೇಜ್ ಸೆಡಾನ್‌ನ ಡೆಲಿವರಿ ಜನವರಿ 2025ರಿಂದ ಶುರುವಾಗಲಿದೆ. ಇತ್ತೀಚಿಗೆ ಬಿಡುಗಡೆಯಾದ ಮಾರುತಿ ಸುಜುಕಿ ಡಿಜೈರ್ (Maruti Suzuki Dzire), ಹ್ಯುಂಡೈ ಔರಾ (Hyundai Aura) ಮತ್ತು ಟಾಟಾ ಟಿಗೋರ್ (Tata Tigor) ಕಾರುಗಳು ಅಮೇಜ್‌ಗೆ ಪ್ರಬಲ ಪ್ರತಿಸ್ಪರ್ಧಿಗಳಾಗಿವೆ.